Wednesday, August 06, 2025
Menu

17,000 ಕೋಟಿ ರೂ.ಗೂ ಹೆಚ್ಚು ಬ್ಯಾಂಕ್ ಸಾಲ ವಂಚನೆ: ಇಡಿ ವಿಚಾರಣೆಗೆ ಹಾಜರಾದ ಅನಿಲ್‌ ಅಂಬಾನಿ

17,000 ಕೋಟಿ ರೂ.ಗೂ ಹೆಚ್ಚು ಬ್ಯಾಂಕ್ ಸಾಲ ವಂಚನೆ ಹಾಗೂ ಅನಿಲ್ ಅಂಬಾನಿ ಸಮೂಹ ಸಂಸ್ಥೆಗಳಿಂದ ಹಣಕಾಸು ಅಕ್ರಮ ಪ್ರಕರಣಗಳ ತನಿಖೆಗೆ ಸಂಬಂಧಿಸಿದಂತೆ ರಿಲಯನ್ಸ್‌ ಗ್ರೂಪ್‌ ಅಧ್ಯಕ್ಷ ಅನಿಲ್‌ ಅಂಬಾನಿ ಮಂಗಳವಾರ ಜಾರಿ ನಿರ್ದೇಶನಾಲಯದ (ಇಡಿ) ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ.

ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಹೇಳಿಕೆ ದಾಖಲಿಸಲು ದೆಹಲಿಯಲ್ಲಿರುವ ಕೇಂದ್ರೀಯ ತನಿಖಾ ಸಂಸ್ಥೆಯ ಕಚೇರಿಗೆ ಅನಿಲ್ ಅಂಬಾನಿ ಹಾಜರಾದರು.

ಜುಲೈ 24 ರಂದು ಮುಂಬೈನಲ್ಲಿ 50 ಕಂಪನಿಗಳು ಮತ್ತು ಅವರ ವ್ಯವಹಾರಗಳಿಗೆ ಸೇರಿದ 25 ವ್ಯಕ್ತಿಗಳು ಸೇರಿದಂತೆ 35 ಕಡೆಗಳಲ್ಲಿ ಇಡಿ ಶೋಧ ಕಾರ್ಯಾಚರಣೆ ನಡೆಸಿ, ಸಮನ್ಸ್ ಜಾರಿ ಮಾಡಿತ್ತು. ರಿಲಯನ್ಸ್ ಇನ್‌ಫ್ರಾಸ್ಟ್ರಕ್ಚರ್ ಸೇರಿದಂತೆ ಹಲವು ಅನಿಲ್ ಅಂಬಾನಿ ಸಮೂಹ ಸಂಸ್ಥೆಗಳಿಂದ ಹಣಕಾಸು ಅಕ್ರಮಗಳು ಮತ್ತು 17,000 ಕೋಟಿ ರೂ.ಗೂ ಹೆಚ್ಚು ಬ್ಯಾಂಕ್ ಸಾಲ ವಂಚನೆಗೆ ಸಂಬಂಧಿಸಿದಂತೆ ಇಡಿ ತನಿಖೆ ನಡೆಸುತ್ತಿದೆ.

ಯೆಸ್ ಬ್ಯಾಂಕ್ ನೀಡಿದ 3,000 ಕೋಟಿ ರೂ. ಸಾಲವನ್ನು ಬೇರೆಡೆ ವರ್ಗಾಯಿಸಲಾಗಿದೆ ಎಂಬುದು ಪ್ರಮುಖ ಆರೋಪವಾಗಿದೆ. ಬ್ಯಾಂಕಿನ ಆಂತರಿಕ ಸಾಲ ನೀತಿಯ ಉಲ್ಲಂಘನೆಗಳು ಸೇರಿದಂತೆ ಯೆಸ್ ಬ್ಯಾಂಕ್‌ನ ಸಾಲ ಅನುಮೋದನೆಗಳಲ್ಲಿ ಗಂಭೀರ ಅಕ್ರಮ ನಡೆದಿರುವುದಾಗಿ ತನಿಖಾ ತಂಡ ಶಂಕಿಸಿದೆ. ಸಿಬಿಐನ ಎರಡು ಎಫ್ ಐಆರ್ ಗಳು ಮತ್ತು ನಿಯಂತ್ರಕ ಸಂಸ್ಥೆಗಳಾದ ಸೆಬಿ, ನ್ಯಾಷನಲ್ ಹೌಸಿಂಗ್ ಬ್ಯಾಂಕ್, ನ್ಯಾಷನಲ್ ಫೈನಾನ್ಷಿಯಲ್ ರಿಪೋರ್ಟಿಂಗ್ ಅಥಾರಿಟಿ ಮತ್ತು ಬ್ಯಾಂಕ್ ಆಫ್ ಬರೋಡಾ ಸಲ್ಲಿಸಿದ ವರದಿಗಳಿಂದ ಇಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ.

ರಿಲಯನ್ಸ್ ಗ್ರೂಪ್ ವಕ್ತಾರರು ಅಕ್ರಮದ ಆರೋಪ ನಿರಾಕರಿಸಿದ್ದಾರೆ. ಮಾರ್ಚ್ 2022 ರಿಂದ ಅಂಬಾನಿ ಆರ್ ಇನ್ಫ್ರಾ ಮಂಡಳಿಯಲ್ಲಿ ಸೇವೆ ಸಲ್ಲಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಬಹಿರಂಗಪಡಿಸದ ವಿದೇಶಿ ಬ್ಯಾಂಕ್ ಖಾತೆಗಳು ಮತ್ತು ಆಸ್ತಿಗಳ ಅನುಮಾನದ ಜೊತೆಗೆ ಆರ್‌ಸಿಎಂ ಮತ್ತು ಕೆನರಾ ಬ್ಯಾಂಕ್ ನಡುವಿನ ಪ್ರತ್ಯೇಕ 1,050 ಕೋಟಿ ರೂ.ಸಾಲ ವಂಚನೆ ಪ್ರಕರಣವನ್ನು ಇಡಿ ತನಿಖೆ ನಡೆಸುತ್ತಿದೆ

Related Posts

Leave a Reply

Your email address will not be published. Required fields are marked *