ಢಾಕಾ: ಬಾಂಗ್ಲಾದೇಶ ಮಾಜಿ ಪ್ರಧಾನಿ ಶೇಖ್ ಹಸೀನಾ ಹಾಗೂ ಅವರ ಇಬ್ಬರು ಆಪ್ತರಿಗೆ ಗಲ್ಲು ಶಿಕ್ಷೆ ವಿಧಿಸಿ ಬಾಂಗ್ಲಾದೇಶದ ಅಂತಾರಾಷ್ಟ್ರೀಯ ಅಪರಾಧಿಕ ನ್ಯಾಮಂಡಳಿ (ಐಸಿಟಿ) ಮಹತ್ವದ ತೀರ್ಪು ಪ್ರಕಟಿಸಿದೆ.
2024ರಲ್ಲಿ ನಡೆದ ಹಿಂಸಾಚಾರದ ವೇಳೆ ವಿದ್ಯಾರ್ಥಿಗಳ ಸಾವಿಗೆ ಕಾರಣವಾಗಿದ್ದು, ಮಾನವೀಯ ಮೌಲ್ಯಗಳನ್ನು ಗಾಳಿಗೆ ತೂರಿದ ಆರೋಪವನ್ನು ನ್ಯಾಯಾಲಯ ಎತ್ತಿ ಹಿಡಿಯಿತು.
ಸುಮಾರು 3 ತಿಂಗಳ ಕಾಲ ನಡೆದ ವಿಚಾರಣೆ ನಂತರ ಅವಾಮಿ ಲೀಗ್ ಸರ್ಕಾರದ ಅವಧಿಯಲ್ಲಿ ನಡೆದ ವಿದ್ಯಾರ್ಥಿಗಳ ಪ್ರತಿಭಟನೆ ವೇಳೆ ನಡೆದ ಹಿಂಸಾಚಾರ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ನ್ಯಾಯಾಲಯ ಹೇಳಿತು.
ನ್ಯಾಯಮೂರ್ತಿ ಮೊಹಮದ್ ಗೊಲಮ್ ಮೊರ್ತುಜಾ ಮಂಜುಂದಾರ್ ನೇತೃತ್ವದ ಮೂವರು ನ್ಯಾಯಮೂರ್ತಿಗಳ ತ್ರಿಸದಸ್ಯ ಪೀಠ, ಮಾಜಿ ಪ್ರಧಾನಿ ಶೇಖ್ ಹಸೀನಾ ಅಲ್ಲದೇ ಅವರ ಇಬ್ಬರು ಆಪ್ತರಾದ ಮಾಜಿ ಸಚಿವ ಅಸಾದುಜ್ಜಾಮಾನ್ ಖಾನ್ ಕಮಲ್ ಮತ್ತು ಮಾಜಿ ಪೊಲೀಸ್ ಮುಖ್ಯಸ್ಥ ಚೌ ಧರಿ ಅದಾದುಲ್ಲಾ ಅಲ್ ಮಮುನ್ ವಿರುದ್ಧ ಕೂಡ ಗಲ್ಲು ಶಿಕ್ಷೆ ವಿಧಿಸಲಾಗಿದೆ.
ಪ್ರತಿಭಟನಾಕಾರರನ್ನು ಕೊಲ್ಲಲು ಅಧಿಕಾರಿಗಳ ಮೇಲೆ ಈ ನಾಯಕರು ಪ್ರಭಾವ ಬೀರಿದ್ದರು ಎಂದು ನ್ಯಾಯಾಲಯ ತಿಳಿಸಿದೆ.
ಬಾಂಗ್ಲಾದೇಶದಲ್ಲಿ ಸಂಭವಿಸಿದ ಧಂಗೆಯಲ್ಲಿ ದೇಶ ತೊರೆದ ಶೇಖ್ ಹಸೀನಾ ಪ್ರಸ್ತುತ ಭಾರತದಲ್ಲಿ ಆಶ್ರಯ ಪಡೆದಿದ್ದಾರೆ. ಬಾಂಗ್ಲಾ ಧಂಗೆಯಲ್ಲಿ 1400ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದು, ಸಾವಿರಾರು ಮಂದಿ ಗಾಯಗೊಂಡಿದ್ದರು. ಅಲ್ಲದೇ ಲಕ್ಷಾಂತರ ಜನರು ದೇಶ ತೊರೆದಿದ್ದರು.


