ಬಾಂಗ್ಲಾದೇಶದ ಸಂಸತ್ ಚುನಾವಣೆಯಲ್ಲಿ ತಾರಿಖ್ ರೆಹಮಾನ್ ನಾಯಕತ್ವದ ಬಾಂಗ್ಲಾದೇಶ ರಾಷ್ಟ್ರೀಯತಾವಾದಿ ಪಕ್ಷ (ಬಿಎನ್ಪಿ) ಭರ್ಜರಿ ಗೆಲುವು ಸಾಧಿಸಿದೆ. ಬಾಂಗ್ಲಾದೇಶದ 299 ಸ್ಥಾನಗಳಲ್ಲಿ ಬಿಎನ್ಪಿ ಮತ್ತು ಅದರ ಮಿತ್ರಪಕ್ಷಗಳು 212 ಸ್ಥಾನಗಳನ್ನು ಗೆದ್ದಿವೆ. ಬಿಎನ್ಪಿ ಸ್ವಂತವಾಗಿ 209 ಸ್ಥಾನಗಳನ್ನು ಗೆದ್ದಿದೆ, ಬಹುಮತದ ಸಂಖ್ಯೆ 150 ಆಗಿರುವುದರಿಂದ ಬಿಎನ್ಪಿ ಅಧ್ಯಕ್ಷ ತಾರಿಕ್ ರೆಹಮಾನ್ ಪ್ರಧಾನಿಯಾಗುವುದು ಖಚಿತವಾಗಿದೆ.
2024ರ ಆಗಸ್ಟ್ನಲ್ಲಿ ವಿದ್ಯಾರ್ಥಿಗಳ ನೇತೃತ್ವದ ಪ್ರತಿಭಟನೆಗಳ ಬಳಿಕ ಶೇಖ್ ಹಸೀನಾ ಅವರ 15 ವರ್ಷಗಳ ಸರ್ಕಾರ ಪತನಗೊಂಡಿತ್ತು. ಬಳಿಕ ಮಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರ ಅಧಿಕಾರದಲ್ಲಿತ್ತು.
ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ ತಾರಿಖ್ ರೆಹಮಾನ್ ಅವರನ್ನು ಪ್ರಧಾನಿ ಮೋದಿ ಅಭಿನಂದಿಸಿದ್ದಾರೆ. ಎರಡೂ ದೇಶಗಳ ಜನರ ನಡುವೆ ಶಾಂತಿ, ಪ್ರಗತಿ ಮತ್ತು ಸಮೃದ್ಧಿಗೆ ಭಾರತದ ನಿರಂತರ ಬದ್ಧತೆಯನ್ನು ಪುನರುಚ್ಛರಿಸಿದ್ದಾರೆ.
ಬಾಂಗ್ಲಾದೇಶ ಚುನಾವಣೆಯ ಭರ್ಜರಿ ಗೆಲುವಿಗಾಗಿ ನಾನು ಅವರನ್ನು ಅಭಿನಂದಿಸುತ್ತೇನೆ. ಬಾಂಗ್ಲಾದೇಶದ ಜನರ ಆಕಾಂಕ್ಷೆಗಳನ್ನು ಈಡೇರಿಸುವ ಅವರ ಪ್ರಯತ್ನದಲ್ಲಿ ನಾನು ನನ್ನ ಶುಭಾಶಯಗಳು ಮತ್ತು ಬೆಂಬಲವನ್ನು ವ್ಯಕ್ತಪಡಿಸಿದ್ದೇನೆ. ಆಳವಾಗಿ ಬೇರೂರಿರುವ ಐತಿಹಾಸಿಕ ಮತ್ತು ಸಾಂಸ್ಕೃತಿಕ ಸಂಬಂಧಗಳನ್ನು ಹೊಂದಿರುವ ಇಬ್ಬರು ನಿಕಟ ನೆರೆಹೊರೆಯವರಾಗಿ ನಮ್ಮ ಎರಡೂ ದೇಶಗಳ ಜನರ ಶಾಂತಿ, ಪ್ರಗತಿ ಮತ್ತು ಸಮೃದ್ಧಿಗೆ ಭಾರತದ ನಿರಂತರ ಬದ್ಧತೆಯನ್ನು ನಾನು ಪುನರುಚ್ಚರಿಸಿ ದ್ದೇನೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.


