ಬಾಂಗ್ಲಾದೇಶದ ವಾಯುಪಡೆ ಎಫ್-7 ಬಿಜಿಐ ತರಬೇತಿ ವಿಮಾನ ಶಾಲೆಯೊಂದರ ಮೇಲೆ ಪತನಗೊಂಡ ಪರಿಣಾಮ ಪೈಲೆಟ್ ಸೇರಿದಂತೆ 19 ಮಂದಿ ಮೃತಪಟ್ಟಿದ್ದಾರೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವಿಶೇಷ ಸಹಾಯಕ ಪ್ರೊಫೆಸರ್ ಎಂಡಿ ಸಯದುರ್ ರೆಹಮಾನ್ ಮಾತನಾಡಿ, ಬಾಂಗ್ಲಾದೇಶದ ವಾಯುಪಡೆಯ ಎಫ್-7 ಬಿಜಿಐ ತರಬೇತಿ ಜೆಟ್ ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ನಿಯಂತ್ರಣ ಕಳೆದುಕೊಂಡು ಢಾಕಾದ ಉತ್ತರದಲ್ಲಿರುವ ಮೈಲ್‌ಸ್ಟೋನ್ ಶಿಕ್ಷಣ ಸಂಸ್ಥೆಯ ಕಟ್ಟಡಕ್ಕೆ ಅಪ್ಪಳಿಸಿದೆ. ಪರಿಣಾಮ ಪೈಲಟ್ ಸೇರಿ 16 ಜನ ಮೃತಪಟ್ಟಿದ್ದು, 70ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಅಗ್ನಿಶಾಮಕ ದಳದ ಕರ್ತವ್ಯ ಅಧಿಕಾರಿ ಲಿಮಾ ಖಾನ್ ಮಾತನಾಡಿ, ತರಬೇತಿ ಜೆಟ್ ಪತನಗೊಂಡ ಸ್ವಲ್ಪ ಸಮಯದ ನಂತರ ಗಾಯಗೊಂಡವರನ್ನು ಸಿಎಂಹೆಚ್ ಆಸ್ಪತ್ರೆಗೆ ರವಾನಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಬಾಂಗ್ಲಾದೇಶ ಸೇನೆಯ ಸಾರ್ವಜನಿಕ ಸಂಪರ್ಕ ಕಚೇರಿ ಬಿಡುಗಡೆಗೊಳಿಸಿದ ಹೇಳಿಕೆಯಲ್ಲಿ, ಪತನಗೊಂಡ ಎಫ್-7 ಬಿಜಿಐ ಜೆಟ್ ಬಾಂಗ್ಲಾದೇಶದ ವಾಯುಪಡೆಗೆ ಸೇರಿದ್ದು ಎಂದು ದೃಢಪಡಿಸಿದೆ. ಸದ್ಯ ಘಟನಾ ಸ್ಥಳದಲ್ಲಿ ಮೂರು ಅಗ್ನಿಶಾಮಕ ದಳದ ವಾಹನಗಳು ಕಾರ್ಯನಿರ್ವಹಿಸುತ್ತಿದ್ದು, ಪರಿಸ್ಥಿತಿಯನ್ನು ನಿರ್ವಹಿಸುವಲ್ಲಿ ತೊಡಗಿಕೊಂಡಿದ್ದಾರೆ.
ಸೋಮವಾರ ಮಧ್ಯಾಹ್ನ 1:06ರ ಸುಮಾರಿಗೆ ಬಾಂಗ್ಲಾದೇಶದ ವಾಯುಪಡೆಯ ಎಫ್-7 ಬಿಜಿಐ ತರಬೇತಿ ಜೆಟ್ ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಢಾಕಾದ ಉತ್ತರದ ಮೈಲ್‌ಸ್ಟೋನ್ ಶಿಕ್ಷಣ ಸಂಸ್ಥೆಯ ಕ್ಯಾಂಟೀನ್ ಮೇಲೆ ಪತನಗೊಂಡಿತ್ತು.
ಅಪಘಾತಕ್ಕೀಡಾದ F-7BGI ತರಬೇತಿ ವಿಮಾನವು ಬಾಂಗ್ಲಾದೇಶದ ನಿರ್ವಹಿಸುತ್ತಿರುವ 16 (ಈಗ 15) ವಿಮಾನಗಳಲ್ಲಿ ಒಂದಾಗಿದೆ. ಇದು ಚೀನಾದ J-7 ಯುದ್ಧ ವಿಮಾನದ ಮುಂದುವರಿದ ಆವೃತ್ತಿಯ ವಿಮಾನವಾಗಿದೆ.