ಕೋಲಾರದ ಬಂಗಾರಪೇಟೆ ತಾಲೂಕಿನ ಕಲ್ಕೆರೆ ಬಳಿ ಸೋಮವಾರ ರಾತ್ರಿ ಬೆಂಗಳೂರು- ಚೆನ್ನೈ ಎಕ್ಸ್ಪ್ರೆಸ್ ಹೈವೇನಲ್ಲಿ ಭೀಕರ ಅಪಘಾತ ಸಂಭವಿಸಿ ಮೂವರು ಮೃತಪಟ್ಟಿದ್ದಾರೆ. ಶಿವರಾಜ್ , ಅಶೋಕ, ವಿಕ್ರಂಪಾಲ್ ಮೃತಪಟ್ಟವರು.
ಅಡುಗೆ ಕ್ಯಾಟರಿಂಗ್ ಗೆ ತೆರಳುತ್ತಿದ್ದ ಟೆಂಪೋ ಹಾಗೂ ಈಚರ್ ವಾಹನ ಡಿಕ್ಕಿಯಾಗಿ ಈ ದುರಂತ ನಡೆದಿದೆ. ಘಟನೆಯಲ್ಲಿ ಗಾಯಗೊಂಡಿರುವ ಇಬ್ಬರ ಸ್ಥಿತಿ ಚಿಂತಾಜನಕವಾಗಿದ್ದು, ಗಾಯಾಳುಗಳನ್ನು ಕೋಲಾರ ಜಿಲ್ಲಾಸ್ಪತ್ರೆ ಹಾಗೂ ಬೆಂಗಳೂರಿನ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. 20 ಕ್ಕೂ ಅಧಿಕ ಜನರಿಗೆ ಗಂಭೀರ ಗಾಯಗಳಾಗಿವೆ.
ದಕ್ಷಿಣ ಕನ್ನಡ ಜಿಲ್ಲೆಯ ಕುಂದಾಪುರ ಶ್ರೀ ಕೃಷ್ಣ ಕೆಟರಿಂಗ್ ನ ಕುಂದಾಪುರ ಕಾರ್ಮಿಕರು ಕೆಜಿಎಫ್ ಬಳಿ ಕ್ಯಾಟರಿಂಗ್ ಮುಗಿಸಿ ಹೊಸಕೋಟೆ ಕಡೆಗೆ ತೆರಳುತ್ತಿದ್ದು, ಟೆಂಪೋದಲ್ಲಿ 24 ಜನರಿದ್ದರು.
ಮೃತದೇಹಗಳನ್ನು ಬಂಗಾರಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಸ್ತರಿಗೆ ಹಸ್ತಾಂತರವಾಗಲಿದೆ. ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಮೀನು ವಿಚಾರವಾಗಿ ಗುಂಪುಗಳ ನಡುವೆ ಗಲಾಟೆ
ಮೈಸೂರು ಜಿಲ್ಲೆ ಹೆಚ್ ಡಿ ಕೋಟೆಯಲ್ಲಿ ಜಮೀನು ವಿಚಾರವಾಗಿ ಹೊಡೆದಾಟ ನಡೆದು ಗಾಯಗೊಂಡವರು ಆಸ್ಪತ್ರೆ ಸೇರಿದ ಮೇಲೆ ಅಲ್ಲೂ ಮುಂದುವರಿದಿದೆ. ಅಪ್ಸರ್ ಹಾಗೂ ರವಿ ಪರಸ್ಪರ ಹಲ್ಲೆ ಮಾಡಿಕೊಂಡಿದ್ದು, ಗಲಾಟೆ ನಿಯಂತ್ರಿಸಲು ಆಸ್ಪತ್ರೆ ಸಿಬ್ಬಂದಿ ಹರಸಾಹಸ ಪಟ್ಟರು.
ಹೆಚ್ ಡಿ ಕೋಟೆ ಇನ್ಸಪೆಕ್ಟರ್ ಗಂಗಾಧರ್ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ನಿಯಂತ್ರಣ ಮಾಡಿ, ಎರಡು ಗುಂಪುಗಳ ವಿರುದ್ಧ ಕೇಸ್ ದಾಖಲಿಸಿದ್ದಾರೆ. ಎಚ್.ಡಿ.ಕೋಟೆ ತಾಲೂಕಿನ ಶರೀಫ್ ಕಾಲೋನಿ ಸರ್ವೆ ನಂ 1/687ರ ಜಮೀನು ವಿವಾದ ಕುರಿತು ಜಮೀನಿನಲ್ಲಿ ನಾಗಮೂರ್ತಿ ರವಿ ಗುಂಪು ಹಾಗೂ ನಯಾಜ್ ಅಪ್ಸರ್ ಗುಂಪಿನ ನಡುವೆ ಹೊಡೆದಾಟ ನಡೆದಿದೆ.
ನಂತರ ನಾಗಮೂರ್ತಿ ಹಾಗೂ ರವಿ ಎಚ್.ಡಿ.ಕೋಟೆ ಆಸ್ಪತ್ರೆಗೆ ದಾಖಲಾಗಿದ್ದು, ಆಸ್ಪತ್ರೆಗೆ ಬಂದು ನಯಾಜ್ ಅಪ್ಸರ್ ಇತರರು ಹಲ್ಲೆ ಮಾಡಿದ್ದಾರೆ. ತುರ್ತು ಚಿಕಿತ್ಸಾ ಕೊಠಡಿಯಲ್ಲೇ ಎರಡೂ ಗುಂಪುಗಳವರು ಹೊಡೆದಾಡಿದ್ದಾರೆ. ನಯಾಜ್, ಅಪ್ಸರ್, ನಾಗಮೂರ್ತಿ, ರವಿ ಪ್ರವೀಣ್ ಸೇರಿ 13 ಜನರ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.