11.6ಕೋಟಿ ರೂ. ಮೌಲ್ಯದ ಡ್ರಗ್ಸ್ ಸಾಗಿಸುತ್ತಿದ್ದ ಆರೋಪದಡಿ ಗೋವಾದ ಪೊಲೀಸರು ಬೆಂಗಳೂರು ಮೂಲದ 23 ವರ್ಷದ ಯುವಕನನ್ನು ಬಂಧಿಸಿ 11 ಕೆಜಿಗಿಂತ ಹೆಚ್ಚು ಗಾಂಜಾವನ್ನು ಜಪ್ತಿ ಮಾಡಿದ್ದಾರೆ.
ಮಾದಕ ದ್ರವ್ಯ ವಿರುದ್ಧ ಕಾರ್ಯಾಚರಣೆ ಇತಿಹಾಸದಲ್ಲಿ ಒಂದೇ ದಿನದಲ್ಲಿ ಇಷ್ಟೊಂದು ಡೊಡ್ಡ ಪ್ರಮಾಣದಲ್ಲಿ ಡ್ರಗ್ಸ್ ಜಪ್ತಿ ಮಾಡಿಕೊಂಡಿದ್ದು ಇದೇ ಮೊದಲು. ಆರೋಪಿ ನೇಪಾಳದಿಂದ ಭಾರತಕ್ಕೆ ಮಾದಕ ದ್ರವ್ಯಗಳನ್ನು ಸಾಗಿಸುತ್ತಿದ್ದನು. ಈತನ ಮೇಲೆ ರಾಜ್ಯ ಗುಪ್ತಚರ ಇಲಾಖೆ ತಿಂಗಳಿನಿಂದ ನಿಗಾ ಇಟ್ಟಿತ್ತು. ಮಾದಕ ದ್ರವ್ಯ ತೆಗೆದುಕೊಂಡು ಗೋವಾಕ್ಕೆ ಬಂದಿದ್ದ ಯುವಕನ ಬಗ್ಗೆ ರಾಜ್ಯ ಗುಪ್ತಚರ ಇಲಾಖೆ ನೀಡಿದ ಖಚಿತ ಮಾಹಿತಿ ಆಧರಿಸಿ, ಗುಯಿರಿಮ್‌ನಲ್ಲಿ ಬಂಧಿಸಿದ್ದಾಗಿ ಗೋವಾ ಪೊಲೀಸರು ತಿಳಿಸಿದ್ದಾರೆ.
ಪ್ರಕರಣ ಸಂಬಂಧ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಗುಪ್ತಾ ಮಾತನಾಡಿ, ಆರೋಪಿಯ ವಿರುದ್ಧ ಎನ್ಡಿಪಿಎಸ್ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ. ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಮಾತನಾಡಿ, ಗೋವಾ ಸರ್ಕಾರವು ಮಾದಕ ದ್ರವ್ಯ ಸರಬರಾಜು ಮತ್ತು ಸೇವಿಸುವರ ವಿರುದ್ಧ ನಿರಂತರ ಕಾರ್ಯಾಚರಣೆ ನಡೆಸುತ್ತಿದೆ.ಎನ್ಡಿಪಿಎಸ್ ಕಾಯ್ದೆಯಡಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ ಎಂದಿದ್ದಾರೆ.
ರಾಜ್ಯದಲ್ಲಿ ಮಾದಕ ವ್ಯಾಪಾರವನ್ನು ಮಟ್ಟ ಹಾಕಲು ಗೋವಾ ಪೊಲೀಸರು ‘ಆಪರೇಷನ್ ಪ್ರಹಾರ್‘ ಅನ್ನು ಪ್ರಾರಂಭಿಸಿದ್ದಾರೆ. 2025 ರ ಮೊದಲ ಎರಡು ತಿಂಗಳಲ್ಲಿ ಉತ್ತರ ಗೋವಾದಲ್ಲಿ 18 ಜನರನ್ನು ಬಂಧಿಸಿ 40 ಲಕ್ಷ ರೂ. ಮೌಲ್ಯದ ಮಾದಕವಸ್ತುಗಳನ್ನು ವಶಪಡಿಸಿಕೊಂಡಿದ್ದರು.


