ಭಾರತದ ರಕ್ಷಣಾ ಕ್ಷೇತ್ರದ ಬೆಳವಣಿಗೆಯಲ್ಲಿ ರಾಜಧಾನಿ ಬೆಂಗಳೂರಿನ ಕೊಡುಗೆ ಪ್ರಮುಖವಾಗಿದೆ. ಇಲ್ಲಿ ರಕ್ಷಣಾ ಇಲಾಖೆಯ ಪ್ರಮುಖ ಸಂಸ್ಥೆಗಳು ನೆಲೆ ಯೂರಿದ್ದು, ಭಾರತದ ಮೂರೂ ರಕ್ಷಣಾ ಪಡೆಗಳಿಗೆ ಅಗತ್ಯ ಅತ್ಯಾಧುನಿಕ ಉಪಕರಣಗಳನ್ನು ಒದಗಿಸುವಲ್ಲಿ ನಿರಂತರವಾಗಿ ಕೆಲಸ ಮಾಡುತ್ತಿವೆ. ಬೆಂಗಳೂರು ಭಾರತದ ಡಿಫೆನ್ಸ್ ಹಬ್ ಆಗಿದೆ. ಏರೋ ಇಂಡಿಯಾ ಕೇವಲ ಒಂದು ವೈಮಾನಿಕ ಪ್ರದರ್ಶನಲ್ಲ, ಬದಲಾಗಿ ಭಾರತದ ರಕ್ಷಣಾ ಸಾಮರ್ಥ್ಯದ ಜಾಗತಿಕ ಪ್ರದರ್ಶನ ಆಗಿದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ವೈಮಾನಿಕ ಪ್ರದರ್ಶನ ʻಏರೋ ಇಂಡಿಯಾ 2025ʼ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಡಿಕೆಶಿ, ರಕ್ಷಣಾ ಕ್ಷೇತ್ರದಲ್ಲಿ ಉದ್ಯೋಗ ಹೆಚ್ಚಳಕ್ಕೂ ಬೆಂಗಳೂರು ಅವಕಾಶ ಕಲ್ಪಿಸಿದೆ. ಬೆಂಗಳೂರು ಏರೋಸ್ಪೇಸ್ ಉದ್ಯಮದಲ್ಲಿ ಅತ್ಯುತ್ತಮ ಪ್ರತಿಭೆಗಳನ್ನು ಹೊಂದಿದೆ. ಇದು ವಿಮಾನ ಮತ್ತು ಹೆಲಿ ಕಾಪ್ಟರ್ ಉತ್ಪಾದನಾ ಸೌಲಭ್ಯಗಳನ್ನು ಸ್ಥಾಪಿಸಲು ಸೂಕ್ತ ಸ್ಥಳವಾಗಿದೆ. ತಯಾರಕರಿಗೆ ಪ್ರೋತ್ಸಾಹ ನೀಡುವ ಮೂಲಕ ಪ್ರತಿಭಾ ಪಲಾಯನವನ್ನು ತಡೆದು ನಮ್ಮ ದೇಶದ ಪ್ರತಿಭೆಗಳನ್ನು ಭಾರತದೊಳಗೆ ಉಳಿಸಿಕೊಳ್ಳಬಹುದು. ಸರ್ಕಾರವು ಕರ್ನಾಟಕದಾದ್ಯಂತ ಅಂದರೆ ಬೆಂಗಳೂರು, ಬೆಳಗಾವಿ, ಮೈಸೂರು, ತುಮಕೂರು ಮತ್ತು ಚಾಮರಾಜನಗರಗಳಲ್ಲಿ ಏರೋಸ್ಪೇಸ್ ಮತ್ತು ರಕ್ಷಣಾ ಕೇಂದ್ರಗಳನ್ನು ಅಭಿವೃದ್ಧಿಪಡಿಸುತ್ತಿದೆ ಎಂದರು.
2013 ರಲ್ಲಿ ಏರೋಸ್ಪೇಸ್ ನೀತಿಯನ್ನು ಘೋಷಿಸಿದ ಮೊದಲ ರಾಜ್ಯ ಕರ್ನಾಟಕ. ನಮ್ಮ ರಾಜ್ಯವು ದೇವನಹಳ್ಳಿ ಬಳಿ ಏರೋಸ್ಪೇಸ್ ಕಂಪನಿಗಳಿಗಾಗಿ 1 ಸಾವಿರ ಎಕರೆ ಪ್ರದೇಶವನ್ನು ಮೀಸಲಿಟ್ಟು ಏರೋಸ್ಪೇಸ್ ಪಾರ್ಕ್ ಸ್ಥಾಪಿಸಿದೆನಮ್ಮ ರಾಜ್ಯ ಸರ್ಕಾರ ರಕ್ಷಣಾ ಕ್ಷೇತ್ರದಲ್ಲಿ ಕೆಲಸ ಮಾಡುವ ಸ್ಟಾರ್ಟ್‌ಅಪ್‌ಗಳಿಗೆ ಪೂರಕ ವಾತಾವರಣ ಕಲ್ಪಿಸಿದ್ದು, ಭಾರತದ ನೆಲ, ಜಲ ಹಾಗೂ ವಾಯು ಗಡಿಗಳನ್ನು ಕಾಪಾಡುವ ಮಹತ್ತರ ಕಾರ್ಯದಲ್ಲಿ ಬೆಂಗಳೂರು ತನ್ನದೇ ಆದ ಪಾತ್ರವನ್ನು ನಿರ್ವ ಹಿಸುತ್ತಿದೆ ಎಂದು ಡಿಕೆಶಿ ಹೆಮ್ಮೆ ವ್ಯಕ್ತಪಡಿಸಿದರು.
ಆವಿಷ್ಕಾರ ಮತ್ತು ಜಾಗತಿಕ ಪಾಲುದಾರಿಕೆಯನ್ನು ಆಕರ್ಷಿಸುವ ಈ ಪ್ರಯಾಣದಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಬೆಂಗಳೂರು ದೇಶದ ಏರೋಸ್ಪೇಸ್ ರಾಜ ಧಾನಿಯಾಗಿದೆ. ಶೇ. 60ರಷ್ಟು ಏರೋಸ್ಪೇಸ್ ಉತ್ಪಾದನೆ ಮತ್ತು ರಕ್ಷಣಾ ಸಂಶೋಧನೆಯಲ್ಲಿ ಬೆಂಗಳೂರು ಕೊಡುಗೆ ನೀಡುತ್ತಿದೆ. ಬೆಂಗಳೂರು ವಾಣಿಜ್ಯ ಮತ್ತು ರಕ್ಷಣಾ ವಿಮಾನ ನಿಲ್ದಾಣಗಳನ್ನು ಹೊಂದಿರುವ ವಿಶ್ವದ ಏಕೈಕ ನಗರವಾಗಿದೆ. ರಕ್ಷಣಾ ಸಚಿವರು ಕರ್ನಾಟಕದಲ್ಲಿ ಏರೋಸ್ಪೇಸ್ ಉದ್ಯಮವನ್ನು ಸ್ಥಾಪಿಸಲು ಹಾಗೂ ವಿಮಾನ ಮತ್ತು ಹೆಲಿಕಾಪ್ಟರ್‌ಗಳ ತಯಾರಕರನ್ನು ಹೆಚ್ಚು, ಹೆಚ್ಚು ಬೆಂಗಳೂರಿನ ಕಡೆಗೆ ಗಮನ ಹರಿಸುವಂತೆ ಪ್ರೋತ್ಸಾಹ ನೀಡಬೇಕಾಗಿ ಮನವಿ ಮಾಡುತ್ತೇನೆ ಎಂದರು.
ಬೆಂಗಳೂರಿನಲ್ಲಿ ವೈಮಾನಿಕ ಪ್ರದರ್ಶನ ʻಏರೋ ಇಂಡಿಯಾ 2025ʼಕ್ಕೆ ಕೇಂದ್ರ ಸಚಿವ ರಾಜನಾಥ್ ಸಿಂಗ್ ಚಾಲನೆ ನೀಡಿದ್ದು, ಉಪಮುಖ್ಯಮಂತ್ರಿ ಡಿ.ಕೆ. ಶಿವ ಕುಮಾರ್, ಮೂರೂ ರಕ್ಷಣಾ ಪಡೆಗಳ ಮುಖ್ಯಸ್ಥರು, ರಕ್ಷಣಾ ಖಾತೆ ರಾಜ್ಯ ಸಚಿವ ಸಂಜಯ್ ಸೇಠ್, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಡಾ ಶಾಲಿನಿ ರಜನೀಶ್ ಮತ್ತಿತರರು ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದರು.
ಸಚಿವ ರಾಜನಾಥ್ ಸಿಂಗ್ ಮಾತನಾಡಿ, ಭಾರತದ ವಾಯುಪಡೆಯ ರಕ್ಷಣಾ ಸಾಮರ್ಥ್ಯದ ಪ್ರದರ್ಶನಕ್ಕೆ ಏರೋ ಇಂಡಿಯಾ ಒಂದು ಉತ್ತಮ ವೇದಿಕೆ. ಭಾರತದಲ್ಲಿ ಮಹಾಕುಂಭ ಮೇಳ ನಡೆಯುತ್ತಿದೆ. ಏರೋ ಇಂಡಿಯಾ ರೂಪದಲ್ಲಿ ಮತ್ತೊಂದು ಮಹಾಕುಂಭಕ್ಕೆ ಭಾರತ ಸಾಕ್ಷಿಯಾಗಿದೆ. ಪ್ರಯಾಗ್ ರಾಜ್ ಮಹಾ ಕುಂಭವು ಆತ್ಮಾವಲೋಕನಕ್ಕಾಗಿ ನಡೆದರೆ, ಏರೋ ಇಂಡಿಯಾದ ಮಹಾಕುಂಭವು ಸಂಶೋಧನೆಗಾಗಿ ನಡೆಯುತ್ತಿದೆ. ಇದು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ‘ವಿಕಾಸ್ ಭಿ, ವಿರಾಸತ್ ಭಿ’ ಎಂಬ ಘೋಷಣೆಗೆ ಪೂರಕ ಎಂದು ಹೇಳಿದ್ದಾರೆ.