ಮಾರ್ಚ್ 22ರಂದು ಆರಂಭವಾಗಲಿರುವ ಐಪಿಎಲ್ ಟೂರ್ನಿ ಸೇರಿ ಪ್ರಾಂಚೈಸಿ ಇತರ ಕಾರ್ಯಕ್ರಮಗಳಲ್ಲಿ ತಂಬಾಕು ಮತ್ತು ಮದ್ಯ ಜಾಹೀರಾತುಗಳಿಗೆ ನಿರ್ಬಂಧ ವಿಧಿಸಿ ಕೇಂದ್ರ ಆರೋಗ್ಯ ಸಚಿವಾಲಯ ಐಪಿಎಲ್ ಟೂರ್ನಿ ಮುಖ್ಯಸ್ಥರಿಗೆ ಸೂಚನೆ ನೀಡಿದೆ.
ಕಳೆದ ವಾರ ಐಪಿಎಲ್ ಟೂರ್ನಿ ಮುಖ್ಯಸ್ಥ ಅರುಣ್ ಧುಮಾಲ್ ಮತ್ತು ಐಪಿಎಲ್ ಆಡಳಿತ ಮಂಡಳಿಗೆ ಪತ್ರ ಬರೆದಿರುವ ಕೇಂದ್ರ ಆರೋಗ್ಯ ಸಚಿವಾಲಯ, ಕ್ರೀಡಾಂಗಣ ಮತ್ತು ಟಿವಿಯಲ್ಲಿ ತಂಬಾಕು ಉತ್ಪನ್ನ, ಮದ್ಯ ಪ್ರಚಾರದ ಜಾಹೀರಾತುಗಳನ್ನು ನಿಷೇಧಿಸುವಂತೆ ಸೂಚನೆ ನೀಡಿದೆ.
ಕೇಂದ್ರ ಆರೋಗ್ಯ ಸೇವೆಗಳ ಮಹಾನಿರ್ದೇಶಕ (ಡಿಜಿಎಚ್‌ಎಸ್) ಅತುಲ್ ಗೋಯೆಲ್ ಈ ಪತ್ರ ಬರೆದಿದ್ದು, ಕ್ರಿಕೆಟಿಗರು ಯಾವುದೇ ರೀತಿಯ ತಂಬಾಕು ಅಥವಾ ಮದ್ಯದ ಜಾಹೀರಾತುಗಳಿಗೆ ಬೆಂಬಲ ಸೂಚಿಸಬಾರದು ಎಂದು ತಿಳಿಸಿದ್ದಾರೆ.
ಐಪಿಎಲ್ ಭಾರತದಲ್ಲಿ ಅತಿಹೆಚ್ಚು ವೀಕ್ಷಕರನ್ನು ಹೊಂದಿದ್ದು, ಮದ್ಯ, ತಂಬಾಕು ವರ್ಗಕ್ಕೆ ಸಂಬಂಧಿಸಿದ ಉತ್ಪನ್ನಗಳ ಜಾಹೀರಾತಿನಲ್ಲಿ ಪಂದ್ಯದ ವಿಮರ್ಶಕರು ಸೇರಿ ಕ್ರಿಕೆಟಿಗರು ಭಾಗವಹಿಸುವುದನ್ನು ತಡೆಗಟ್ಟುವಂತೆ ಪತ್ರದಲ್ಲಿ ತಿಳಿಸಲಾಗಿದೆ.