ಭಾರತ ಉಗ್ರರ ವಿರುದ್ಧ ಆಪರೇಷನ್ ಸಿಂಧೂರ್ ನಡೆಸಿದ ಮರುದಿನವೇ ಪಾಕಿಸ್ತಾನದ ವಿರುದ್ಧ ಬಲೂಚಿಸ್ತಾನ್ ಬಂಡೆದ್ದು, ತಾನು ಸ್ವತಂತ್ರವೆಂದು ಘೋಷಿಸಿ ಕೊಂಡಿದೆ.
ಬಲೂಚಿಸ್ತಾನ್ ಗುರುವಾರ ಬಾಂಬ್ ದಾಳಿ ನಡೆಸಿ ಪಾಕಿಸ್ತಾನದ 14 ಯೋಧರ ಬಲಿ ಪಡೆದಿತ್ತು. ಇಂದು ಬಲೂಚಿಸ್ತಾನ್ ನಾಯಕರು ಪಾಕಿಸ್ತಾನದಿಂದ ಬೇರೆ ಯಾಗಿ ಸ್ವತಂತ್ರವಾಗಿದ್ದೇವೆ ಎಂದು ಘೋಷಣೆ ಮಾಡಿದ್ದಾರೆ.
ಬರಹಗಾರ ಮೀರ್ ಯಾರ್ ಬಲೂಚ್ ಅವರು, ಪಾಕಿಸ್ತಾನದಿಂದ ಬಲೂಚಿಸ್ತಾನ ಸ್ವತಂತ್ರಗೊಂಡಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಘೋಷಿಸಿದ್ದಾರೆ. ಬಲೂಚಿಸ್ತಾನಕ್ಕೆ ವಿಶ್ವಸಂಸ್ಥೆ ಮಾನ್ಯತೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ದೆಹಲಿಯಲ್ಲಿ ಬಲೂಚ್ ರಾಯಭಾರ ಕಚೇರಿಯನ್ನು ಸ್ಥಾಪಿಸಲು ಭಾರತಕ್ಕೆ ಮನವಿ ಮಾಡಿದ್ದಾರೆ. ಈ ಪ್ರದೇಶಕ್ಕೆ ವಿಶ್ವಸಂಸ್ಥೆಯ ಶಾಂತಿಪಾಲಕರು ಆಗಮಿಸಬೇಕು ಎಂದು ಕೋರಿದ್ದಾರೆ.
ಬಲೂಚ್ ಜನರ ಪರವಾಗಿ ಹೆಸರುವಾಸಿಯಾಗಿರುವ ಮೀರ್ ಯಾರ್ ಬಲೂಚ್, ಟ್ವಿಟ್ಟರ್‌ನಲ್ಲಿ ಈ ವಿಚಾರಕ್ಕೆ ಸಂಬಂಧಿಸಿದಂತೆ ಸರಣಿ ಪೋಸ್ಟ್ ಮಾಡಿದ್ದು, ಪಾಕಿಸ್ತಾನಿ ಸೈನ್ಯವು ಈ ಪ್ರದೇಶವನ್ನು ತೊರೆಯಬೇಕೆಂದು ಒತ್ತಾಯಿಸಿದ್ದಾರೆ. ಬಲೂಚಿಸ್ತಾನದ ನಿಯಂತ್ರಣವನ್ನು ಶೀಘ್ರದಲ್ಲೇ ಸ್ವತಂತ್ರ ಬಲೂಚಿಸ್ತಾನ್ ರಾಜ್ಯದ ಹೊಸ ಸರ್ಕಾರಕ್ಕೆ ಹಸ್ತಾಂತರಿಸಲಾಗುವುದು, ಪರಿವರ್ತನಾ ನಿರ್ಣಾಯಕ ಮಧ್ಯಂತರ ಸರ್ಕಾರವನ್ನು ಘೋಷಿಸಲಾಗುವುದು ಎಂದು ತಿಳಿಸಿದ್ದಾರೆ.
ಭಯೋತ್ಪಾದಕ ರಾಷ್ಟ್ರ ಪಾಕಿಸ್ತಾನದ ಪತನ ಹತ್ತಿರವಾಗಿರುವುದರಿಂದ ಶೀಘ್ರದಲ್ಲೇ ಸ್ವತಂತ್ರ ದೇಶವೆಂದು ಘೋಷಣೆ ಮಾಡಬೇಕು. ನಾವು ನಮ್ಮ ಸ್ವಾತಂತ್ರ್ಯವನ್ನು ಪ್ರತಿಪಾದಿಸಿದ್ದೇವೆ ಮತ್ತು ದೆಹಲಿಯಲ್ಲಿ ಬಲೂಚಿಸ್ತಾನದ ಅಧಿಕೃತ ಕಚೇರಿ ಮತ್ತು ರಾಯಭಾರ ಕಚೇರಿ ಸ್ಥಾಪಿಸಲು ಅನುಮತಿಸುವಂತೆ ಭಾರತವನ್ನು ವಿನಂತಿಸುತ್ತೇವೆ ಎಂದು ಮೀರ್ ಯಾರ್ ಬಲೂಚ್ ಹೇಳಿದ್ದಾರೆ.
ಬಲೂಚಿಸ್ತಾನದ ಕರೆನ್ಸಿ ಮತ್ತು ಪಾಸ್‌ಪೋರ್ಟ್ ಮುದ್ರಣಕ್ಕಾಗಿ ಶತಕೋಟಿ ಹಣ ಬಿಡುಗಡೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ. ವಿಶ್ವಸಂಸ್ಥೆಯು ಶಾಂತಿಪಾಲನಾ ತಂಡವನ್ನು ಬಲೂಚಿಸ್ತಾನಕ್ಕೆ ತಕ್ಷಣವೇ ಕಳುಹಿಸಬೇಕು, ಪಾಕಿಸ್ತಾನ ಆಕ್ರಮಿತ ಸೈನ್ಯವು ಬಲೂಚಿಸ್ತಾನದ ಭೂ, ವಾಯುಪ್ರದೇಶ ಮತ್ತು ಸಮುದ್ರವನ್ನು ತೊರೆಯಬೇಕು, ಬಲೂಚಿಸ್ತಾನದಲ್ಲಿ ಎಲ್ಲಾ ಶಸ್ತ್ರಾಸ್ತ್ರಗಳು ಮತ್ತು ಆಸ್ತಿಯನ್ನು ಪಾಕಿಸ್ತಾನ ಬಿಟ್ಟು ಬಿಡುವಂತೆ ಒತ್ತಾಯಿಸುತ್ತೇವೆ ಎಂದು ಟ್ವೀಟ್ ಮಾಡಿದ್ದಾರೆ.