ಮುಂಬರುವ ಎಲ್ಲ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಇವಿಎಂ ವ್ಯವಸ್ಥೆ ಬದಲಿಗೆ ಮತಪತ್ರ (ಬ್ಯಾಲೆಟ್ ಪೇಪರ್)ಬಳಕೆಗೆ ಶಿಫಾರಸ್ಸು ಮಾಡಲು ರಾಜ್ಯ ಸಚಿವ ಸಂಪುಟ ನಿರ್ಣಯ ಕೈಗೊಂಡಿದೆ.
ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆ ಚುನಾವಣಾ ಪ್ರಕ್ರಿಯೆಯಲ್ಲಿ ಅಗತ್ಯವಾದ ಕೆಲವು ಕಾನೂನು ಹಾಗೂ ನಿಯಮಾವಳಿಗಳನ್ನು ತಿದ್ದುಪಡಿ ಮಾಡಲು ಒಪ್ಪಿಗೆ ನೀಡಿದೆ.
ರಾಜ್ಯ ಚುನಾವಣಾ ಆಯೋಗಕ್ಕೆ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಿಗೆ ಮತದಾರರ ಪಟ್ಟಿಯನ್ನು ಸಿದ್ದಪಡಿಸಲು ಅಗತ್ಯ ಪರಿಷ್ಕರಣೆ ಮಾಡಲು ಅಗತ್ಯ ಕಾನೂನು ತಿದ್ದುಪಡಿ ಮತ್ತು ನಿಯಮಾ ವಳಿ ರಚನೆ ಮಾಡಲು ಹಾಗೂ ಈ ಹಿಂದೆ ವಿಧಾನಸಭೆ ಚುನಾವಣೆಯ ಡಾಟಾವನ್ನು ಬಳಸಿಕೊಳ್ಳಲಾಗುತ್ತಿತ್ತು. ಈಗ ಮತದಾರ ಪಟ್ಟಿಯನ್ನು ಪರಿಷ್ಕರಣೆ, ತಿದ್ದುಪಡಿ, ಪುನರ್ರಚನೆ ಮಾಡಿ, ಉತ್ತಮ ಗುಣಮಟ್ಟದ ಮತದಾರರ ಪಟ್ಟಿಯನ್ನು ರಾಜ್ಯ ಚುನಾವಣಾ ಆಯೋಗ ತಯಾರು ಮಾಡಿಕೊಳ್ಳಲು ಅನುಕೂಲವಾಗುವಂತೆ ರಾಜ್ಯ ಚುನಾವಣಾ ಆಯೋಗಕ್ಕೆ ಶಿಫಾರಸು ಮಾಡಲು ನಿರ್ಣಯ ಕೈಗೊಳ್ಳಲಾಗಿದೆ.
ರಾಜ್ಯ ಚುನಾವಣಾ ಆಯೋಗ ಸ್ವಾತಂತ್ರ ಸಂಸ್ಥೆಯಾಗಿದ್ದು, ಚುನಾವಣಾ ಪಟ್ಟಿ ತಯಾರು ಮಾಡುವ ಜವಾಬ್ದಾರಿ ಅದರದ್ದೇ ಆಗಿದೆ. ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆಯ 165 ನೇ ಪರಿಚ್ಛೇಧ ಹಾಗೂ ಮುನಿಸಿಪಾಲಿಟಿ ಕಾಯ್ದೆಯ 14 ನೇ ಪರಿಚ್ಛೇಧದಡಿ ಮತ್ತು ಜಿಬಿಎ ಕಾಯ್ದೆಯ 35 ಪರಿಚ್ಛೇಧದಡಿ ಚುನಾವಣೆಗಳು ಹೇಗೆ ನಡೆಯಬೇಕೆಂದು ವಿವರಿಸುತ್ತವೆ. ಪಂಚಾಯತ್ ರಾಜ್ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಿಗೆ ಈ ಹೊಸ ನಿಯಮಗಳನ್ನು ಹಾಗೂ ಚುನಾವಣಾ ಪ್ರಕ್ರಿಯೆ ಪದ್ಧತಿಗಳನ್ನು ಶಿಫಾರಸು ಮಾಡಲು ಸಚಿವ ಸಂಪುಟ ನಿರ್ಣಯಿಸಿದೆ.
ಇತ್ತೀಚೆಗೆ ಕರ್ನಾಟಕದಲ್ಲಿ ಮತದಾರರ ಪಟ್ಟಿ ತಯಾರಿಕೆಯಲ್ಲಿಯೇ ಬಹಳ ವ್ಯತ್ಯಾಸಗಳಾಗಿರುವುದನ್ನು ಜನ ಕಂಡುಕೊಂಡಿದ್ದು, ದೊಡ್ಡ ಪ್ರಮಾಣದಲ್ಲಿ ದೂರುಗಳು ಬಂದಿವೆ. ದೊಡ್ಡ ಪ್ರಮಾಣ ದಲ್ಲಿ ಇಲ್ಲದ ಮತದಾರರನ್ನು ಸೇರಿಸಿದ್ದಾರೆ ಎಂಬ ಬಗ್ಗೆ ದೂರುಗಳನ್ನು ಕಳೆ ಎಂದು ತಿಂಗಳಿನಿಂದ ಚರ್ಚೆಯಾಗುತ್ತಿದ್ದು, ಇವಿಎಂ ಬಗ್ಗೆ ಸಾಮಾನ್ಯವಾಗಿ ವಿಶ್ವಾಸಾರ್ಹತೆ ಕಡಿಮೆಯಾಗುತ್ತಿದೆ. ವಿಶ್ವಾಸಾರ್ಹತೆಯ ಕೊರತೆಯನ್ನು ಗಮನಿಸಿ, ಜನರ ಮನಸ್ಥಿತಿ ಹಾಗೂ ಅಭಿಪ್ರಾಯದ ಹಿನ್ನೆಲೆಯಲ್ಲಿ ಇವಿಎಂ ಬದಲಿಗೆ ಬ್ಯಾಲೆಟ್ ಮೂಲಕ ಚುನಾವಣೆಯಾಗಬೇಕು ಎಂಬ ಉದ್ದೇಶವೇ ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡ ನಿರ್ಣಯಗಳ ಹಿನ್ನೆಲೆಯಾಗಿದೆ.28. ಚುನಾವಣಾ ಆಯೋಗ ಹೇಗಿರಬೇಕು , ಏನು ಮಾಡಬೇಕು ಎನ್ನುವ ಬಗ್ಗೆ ಕಾನೂನು ಇದೆ. ರಾಜ್ಯ ರಚಿಸಿರುವ ಕಾನೂನಿನ ಅನ್ವಯ ಅದು ಕಾರ್ಯನಿರ್ವಹಿಸುತ್ತದೆ ಎಂದರು. ಮುಂದಿನ 15 ದಿನಗಳಲ್ಲಿ ಅಗತ್ಯವಿರುವ ಕಾನೂನು ಬದಲಾವಣೆಗಳನ್ನು ಮಾಡಲಾಗುವುದು. ಯಾವುದೇ ಬದಲಾವಣೆಯಾದರೂ ಅದು ಸಚಿವ ಸಂಪುಟಕ್ಕೆ ಬಂದು ರಾಜ್ಯಪಾಲರಿಗೆ ಹೋಗಬೇಕು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್‌ಕೆ ಪಾಟೀಲ್ ತಿಳಿಸಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಡಿ “ಆಶಾಕಿರಣ” ಯೋಜನೆಯನ್ನು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ರೂ.52.85 ಕೋಟಿಗಳ ಅಂದಾಜು ಮೊತ್ತದಲ್ಲಿ ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಕನಕಪುರ ತಾಲೂಕಿನಲ್ಲಿ ಹೊಸ ವೈದ್ಯಕೀಯ ಕಾಲೇಜು ಸ್ಥಾಪಿಸಲು ಮೊದಲನೇ ಹಂತದಲ್ಲಿ ಕರ್ನಾಟಕ ಗೃಹ ಮಂಡಳಿಯಿಂದ ರೂ.65.00 ಕೋಟಿಗಳ ವೆಚ್ಚದಲ್ಲಿ ಜಮೀನು ಖರೀದಿಸಲು ಆಡಳಿತಾತ್ಮಕ ಅನುಮೋದನೆಗೆ ನಿರ್ಣಯಿಸಲಾಗಿದೆ.
ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ತರಗತಿ 1 ರಿಂದ 10 ವರೆಗೆ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಶ್ರೀ ಸತ್ಯ ಸಾಯಿ ಅನ್ನಪೂರ್ಣ ಟ್ರಸ್ಟ್, ಮುದ್ದೇನಹಳ್ಳಿ, ಚಿಕ್ಕಬಳ್ಳಾಪುರ ಜಿಲ್ಲೆ ಸಂಸ್ಥೆಯ ವತಿಯಿಂದ ಸಾಯಿ ಶ್ಯೂರ್ ರಾಗಿ ಹೆಲ್ತ್ ಮಿಕ್ಸ್ ಪುಡಿಯನ್ನು ಬಿಸಿ ಹಾಲಿನೊಂದಿಗೆ ಮಿಶ್ರಣ ಮಾಡಿ ವಿತರಿಸಲಾಗು ತ್ತಿರುವ ಕಾರ್ಯಕ್ರಮವನ್ನು ವಾರದ ಮೂರು ದಿನಗಳ ಬದಲಾಗಿ ಐದು ದಿನಗಳಿಗೆ ವಿಸ್ತರಣೆ, ಯೋಜನೆಯ ಶೇಕಡಾ 25 ರಷ್ಟು ವೆಚ್ಚವನ್ನು ಅಂದರೆ ರೂ.27.02 ಕೋಟಿಗಳನ್ನುರಾಜ್ಯ ಸರ್ಕಾರದಿಂದ ಭರಿಸಲು ಅನುಮೋದನೆ ನೀಡಲು ಸಚಿವ ಸಂಪುಟ ನಿರ್ಧರಿಸಿದೆ.
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ ಬೆಂಗಳೂರು ನಗರದ ವಿವಿಧ ಸ್ಥಳಗಳಲ್ಲಿ ಹೊಸದಾಗಿ 06 ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳ ನಿರ್ಮಾಣ ಕಾಮಗಾರಿ ಹಾಗೂ 07 ವರ್ಷಗಳ ಕಾರ್ಯಾಚರಣೆ ಮತ್ತು ನಿರ್ವಹಣೆ (O&M) ಯ ರೂ.956.67 ಕೋಟಿಗಳ ಅಂದಾಜು ಮೊತ್ತದ ಯೋಜನೆಗೆ ಅನುಮೋದನೆ ನೀಡಲು ಸಚಿವ ಸಂಪುಟ ನಿರ್ಧರಿಸಿದೆ.
ನಗರಾಭಿವೃದ್ಧಿ ಇಲಾಖೆ (ಬಿಬಿಎಂಪಿ)ಯಡಿ ಬೆಂಗಳೂರು ಮೆಟ್ರೋ ರೈಲು ಯೋಜನೆಯ ಹಂತ-3ರ ಜೆ.ಪಿ ನಗರ 4ನೇ ಹಂತದಿAದ ಹೆಬ್ಬಾಳದವರೆಗೆ (ಓಆರ್ಆರ್ ಪಶ್ಚಿಮ) ಹಾಗೂ ಹೊಸಹಳ್ಳಿಯಿಂದ ಮಾಗಡಿ ರಸ್ತೆ ಮಾರ್ಗವಾಗಿ ಕಡಬಗೆರೆವರೆಗೆ ಎರಡು ಕಾರಿಡಾರ್ಗಳಲ್ಲಿ 37.121 ಕಿ.ಮೀ.ಗಳ ಉದ್ದದ ಡಬಲ್ ಡೆಕ್ಕರ್ ನಿರ್ಮಾಣದಲ್ಲಿ, ಮೆಟ್ರೋ ವಯಾಡಕ್ಟ್ ಜೊತೆಗೆ ಎಲಿವೇಟೆಡ್ ರಸ್ತೆಯನ್ನು ರೂ.9700.00 ಕೋಟಿಗಳ ಅಂದಾಜು ಮೊತ್ತದಲ್ಲಿ ನಿರ್ಮಾಣ ಮಾಡಲು ಸಚಿವ ಸಂಪುಟ ಅನುಮೋದನೆ ನೀಡಿದೆ. ರಾಜ್ಯ ಸರ್ಕಾರವು 2025-26 ನೇ ಸಾಲಿನ ಬಜೆಟ್ನಲ್ಲಿ ಒದಗಿಸಲಾದ ರೂ. 4000.00 ಕೋಟಿಗಳ ಬಜೆಟ್ ಅನುದಾನದ ಮೂಲಕ ಯೋಜನೆಯ ಸಂಪೂರ್ಣ ವೆಚ್ಚವನ್ನು ಭರಿಸುತ್ತದೆ.