ಮೌಂಟ್ ಲೆವೊಟೊಬಿ ಲಕಿ-ಲಕಿಯಲ್ಲಿ ಜ್ವಾಲಾಮುಖಿಯ ದಟ್ಟ ಹೊಗೆಯು 10 ಕಿ.ಮೀ ಎತ್ತರ ವ್ಯಾಪಿಸಿದ್ದು, ಸುರಕ್ಷತೆಯ ದೃಷ್ಟಿಯಿಂದ ಬಾಲಿಗೆ ಹೊರಟಿದ್ದ ಏರ್ ಇಂಡಿಯಾದ ವಿಮಾನವನ್ನು ಹಿಂತಿರುಗಿಸಲಾಗಿದೆ. ಬಾಲಿಗೆ ತೆರಳುವ ಹಲವು ಅಂತಾರಾಷ್ಟ್ರೀಯ ವಿಮಾನಗಳು ರದ್ದಾಗಿವೆ.
ಏರ್ ಇಂಡಿಯಾ ವಿಮಾನ ಬೆಳಗ್ಗೆ ದೆಹಲಿಯಿಂದ ಬಾಲಿಗೆ ಹೊರಟಿತ್ತು. ಜ್ವಾಲಾಮುಖಿ ಸ್ಫೋಟದ ಅಪಾಯ ಗಮನಿಸಿ ಮಾನವನ್ನು ಮಧ್ಯದಾರಿಯಲ್ಲೇ ದೆಹಲಿಗೆ ವಾಪಸ್ ಕರೆಸಲಾಯಿತು. ವಿಮಾನವು ದೆಹಲಿಯಲ್ಲಿ ಸುರಕ್ಷಿತವಾಗಿ ಇಳಿದಿದೆ ಎಂದು ಏರ್ ಇಂಡಿಯಾ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
ಪ್ರಯಾಣಿಕರಿಗೆ ಉಂಟಾದ ಅನನುಕೂಲತೆಗೆ ಏರ್ ಇಂಡಿಯಾ ವಿಷಾದ ವ್ಯಕ್ತಪಡಿಸಿದ್ದು, ಅವರಿಗೆ ಪರ್ಯಾಯ ವ್ಯವಸ್ಥೆಗಳನ್ನು ಕಲ್ಪಿಸಲು ಕ್ರಮ ಕೈಗೊಂಡಿದೆ. ಪ್ರಯಾಣಿಕರಿಗೆ ಎರಡು ಆಯ್ಕೆಗಳನ್ನು ನೀಡಲಾಗಿದೆ, ಸಂಪೂರ್ಣ ಮೊತ್ತವನ್ನು ಹಿಂದಿರುಗಿಸಲಾಗುವುದು ಅಥವಾ ಸ್ಥಿತಿಗತಿ ಸುಧಾರಿಸಿದ ಬಳಿಕ ಬೇರೆ ವಿಮಾನದಲ್ಲಿ ಪ್ರಯಾಣದ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದೆ.
ಇಂಡೋನೇಷ್ಯಾದ ಫ್ಲೋರ್ಸ್ ದ್ವೀಪದಲ್ಲಿರುವ 1,584 ಮೀಟರ್ ಎತ್ತರದ ಮೌಂಟ್ ಲೆವೊಟೊಬಿ ಲಕಿ-ಲಕಿ ಜ್ವಾಲಾಮುಖಿಯ ಸ್ಫೋಟದಿಂದ ದಟ್ಟ ಬೂದಿ ಮತ್ತು ಹೊಗೆಯಿಂದ ತುಂಬಿದೆ. ಬಾಲಿಯ ಡೆನ್ಪಾಸರ್ನ ವಿಮಾನ ನಿಲ್ದಾಣದ ಕಾರ್ಯಾಚರಣೆ ಸ್ಥಗಿತಗೊಂಡಂತಾಗಿದೆ. ಏರ್ ಇಂಡಿಯಾ, ಸಿಂಗಾಪುರ್ ಏರ್ಲೈನ್ಸ್, ಏರ್ ನ್ಯೂಜಿಲೆಂಡ್, ಜೆಟ್ಸ್ಟಾರ್, ವರ್ಜಿನ್ ಆಸ್ಟ್ರೇಲಿಯಾ, ಮತ್ತು ಚೀನಾದ ಜುನ್ಯಾವೊ ಏರ್ಲೈನ್ಸ್ ಸೇರಿದಂತೆ ಹಲವು ವಿಮಾನಯಾನ ಸಂಸ್ಥೆಗಳು ಬಾಲಿಗೆ ತೆರಳುವ ವಿಮಾನಗಳನ್ನು ರದ್ದುಗೊಳಿಸಿವೆ.