Menu

ಬಾಗಲಕೋಟೆ: ಕೈ ಟಿಕೆಟ್‌ಗೆ ಮೇಟಿ ಕುಟುಂಬದ ಫೈಟ್‌ ಮಧ್ಯೆ ಗೋವಿಂದರಾಜ ನಾಮಪತ್ರ ಸಲ್ಲಿಕೆ, ಬಿಜೆಪಿಯಿಂದ ಚರಂತಿಮಠ

ಬಾಗಲಕೋಟೆ ವಿಧಾನಸಭಾ ಕ್ಷೇತ್ರ ಉಪಚುನಾವಣೆಗೆ ಮೇಟಿ ಕುಟುಂಬದಿಂದ ಕಾಂಗ್ರೆಸ್‌ ಟಿಕೆಟ್‌ಗಾಗಿ ಪೈಪೋಟಿ ನಡೆಯುತ್ತಿರುವ ಮಧ್ಯೆಯೇ  ಗೋವಿಂದರಾಜ ಬಳ್ಳಾರಿ ಎಂಬುವರು ಕಾಂಗ್ರೆಸ್ ಅಭ್ಯರ್ಥಿ ಎಂದು ನಾಮಪತ್ರ ಸಲ್ಲಿಸಿದ್ದು, ತೀವ್ರ ಕುತೂಹಲ ಕೆರಳಿಸಿದೆ.

ಗೋವಿಂದರಾಜು ತಾವು  ಆಕಾಂಕ್ಷಿಯೆಂದು ಹೇಳಿದ್ದು,  ಯಾರಿಗೆ ಟಿಕೆಟ್ ಎನ್ನುವುದು ಫೈನಲ್ ಆಗಿಲ್ಲದಿದ್ದರೂ ಅವರು ಈಗ ನಾಮಪತ್ರ ಸಲ್ಲಿಸಿದ್ದಾರೆ. ಹೀಗಾಗಿಯೇ ಪಕ್ಷ ಇದನ್ನು ಯಾವ ರೀತಿಯಲ್ಲಿ ಸ್ವೀಕರಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಕಾಂಗ್ರೆಸ್ ಟಿಕೆಟ್‌ಗಾಗಿ ಫೈಟ್ ನಡೆದಿದ್ದರೆ,  ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ  ಪತ್ನಿಯೊಂದಿಗೆ ತೆರಳಿ ಶುಕ್ರವಾರ ಸಾಂಕೇತಿಕವಾಗಿ  ನಾಮಪತ್ರ ಸಲ್ಲಿಸಿದರು.  ಮನೆಯಲ್ಲಿ ಗೋ ಪೂಜೆ ನೆರವೇರಿಸಿ, ನೇರವಾಗಿ ಚುನಾವಣಾಧಿಕಾರಿಗಳ ಕಚೇರಿಗೆ ಪತ್ನಿಯೊಂದಿಗೆ ಆಗಮಿಸಿದ ಚರಂತಿಮಠ, ಚುನಾವಣಾಧಿಕಾರಿ ಸಂತೋಷ ಜಗಲಾಸರ ಅವರಿಗೆ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದರು. ಮಾರ್ಚ 23ರಂದು ತಮ್ಮ ಪಕ್ಷದ ಕೇಂದ್ರ ಸಚಿವರು, ರಾಜ್ಯದ ನಾಯಕರು ಜತೆಗೂಡಿ ಮತ್ತೊಮ್ಮೆ ನಾಮಪತ್ರ ಸಲ್ಲಿಸಲಿದ್ದಾರೆ.

ಮಾರ್ಚ 23ರಂದು ನಾಮಪತ್ರ ಸಲ್ಲಿಸಲು ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಸಂಸದರಾದ ಜಗದೀಶ ಶೆಟ್ಟರ, ಗೋವಿಂದ ಕಾರಜೋಳ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಶ್ರೀರಾಮುಲು ಸೇರಿದಂತೆ ಅನೇಕ ನಾಯಕರು ಆಗಮಿಸಲಿದ್ದಾರೆ. 24ರಿಂದ ನಮ್ಮ ಪ್ರಚಾರ ಆರಂಭಿಸುತ್ತೇವೆ ಎಂದು ತಿಳಿಸಿದರು.

ಕಳೆದ ಸಲದ ಚುನಾವಣೆ ಸಂದರ್ಭವೇ ಬೇರೆ. ಈಗಿನ ಚುನಾವಣೆಯ ಸಂದರ್ಭವೇ ಬೇರೆ. ಒಂದಕ್ಕೊಂದು ಸಂಬಂಧವಿಲ್ಲ. ಸರಕಾರ ಠಿಕಾಣೆ ಹೂಡಿದರೂ ಅವರೆಲ್ಲ ನಲತ್ತೆಂಟು ಗಂಟೆ ಮೊದಲು ಊರು ಬಿಡಬೇಕು. ಕೊನೆಗೆ ಇಲ್ಲಿ ಇರುವವರು ಮತದಾರರು ಮಾತ್ರ. ಅವರೇ ನಿರ್ಧಾರ ಮಾಡಲಿದ್ದಾರೆ ಎಂದರು.

ಕಾಂಗ್ರೆಸ್ ಟಿಕೆಟ್‌ಗಾಗಿ ಮೇಟಿ ಅವರ ನಾಲ್ವರು ಮಕ್ಕಳು  ಪಟ್ಟು ಹಿಡಿದಿದ್ದು, ಕೊನೆ ಗಳಿಗೆಯಲ್ಲಿ ಯಾರಿಗೆ ಟಿಕೆಟ್ ಸಿಗಲಿದೆ ಎಂದು ಎಲ್ಲರೂ ಎದುರು ನೋಡುತ್ತಿದ್ದಾರೆ. ಪುತ್ರರಾದ ಮಲ್ಲಿಕಾರ್ಜುನ ಹಾಗೂ ಉಮೇಶ ನಡುವೆ ಟಿಕೆಟ್ಗೆ ಪೈಟ್ ಇದೆ. ಮಲ್ಲಿಕಾರ್ಜುನ್ ಗೆ ನೀಡಿದರೆ ಪುತ್ರಿ ಮಹಾದೇವಿ ಪಕ್ಷೇತರಳಾಗಿ ಸ್ಪರ್ಧೆ ಮಾಡುವುದು ಖಚಿತವಾಗಿದೆ. ಹೀಗಾಗಿಯೇ ಉಮೇಶಗೆ ಟಿಕೆಟ್ ನೀಡಲು ಕಾಂಗ್ರೆಸ್ ನಿರ್ಧರಿಸಿದಂತಿದ್ದು, ಆಗ ಮಲ್ಲಿಕಾರ್ಜುನ ನಡೆ ಏನು ಎಂಬುದು  ಕುತೂಹಲ ಕೆರಳಿಸಿದೆ.

5 ಅಭ್ಯರ್ಥಿಗಳಿಂದ ಒಟ್ಟು 7 ನಾಮಪತ್ರಗಳು ಸಲ್ಲಿಕೆಯಾಗಿದೆ ಎಂದು ಚುನಾವಣಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ಸಂತೋಷ ಜಗಲಾಸರ ತಿಳಿಸಿದ್ದಾರೆ. ಪಕ್ಷೇತರ ಅಭ್ಯರ್ಥಿಯಾಗಿ ಆನಂದ ಜಕಾತಿ, ಬ್ಲೂ ಇಂಡಿಯಾ ಪಾರ್ಟಿಯಿಂದ ತಳವಾರ ಶಿವಕುಮಾರ ತಲಾ 2 ನಾಮಪತ್ರ ಸಲ್ಲಿಸಿದರೆ, ಉತ್ತಮ ಪ್ರಜಾಕೀಯ ಪಕ್ಷದಿಂದ ಅಂತೋಷ ಸವ್ವಾಸೆ, ಭಾರತೀಯ ಜನತಾ ಪಕ್ಷದಿಂದ ವೀರಭದ್ರಯ್ಯ ಚರಂತಿಮಠ, ಇಂಡಿಯನ್ ನ್ಯಾಶನಲ್ ಕಾಂಗ್ರೆಸ್ನಿಂದ ಗೋವಿಂದರಾಜ ಟಿ. ಬಳ್ಳಾರಿ ತಲಾ ಒಂದು ನಾಮಪತ್ರ ಸೇರಿ ಒಟ್ಟು 7 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ತಿಳಿಸಿದ್ದಾರೆ.

ಚರಂತಿಮಠ  7.91 ಕೋಟಿ ರೂ. ಚರಾಸ್ತಿ, 9.89 ಕೋಟಿ ಸ್ಥಿರಾಸ್ತಿ

ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಅವರು ಚುನಾವಣೆ ಆಯೋಗಕ್ಕೆ  ಆಸ್ತಿ ವಿವರ ಸಲ್ಲಿಸಿದ್ದು, ಚರಾಸ್ತಿ ಹಾಗೂ ಸ್ಥಿರಾಸ್ತಿ ಸೇರಿ ಒಟ್ಟು 17 ಕೋಟಿ 80ಲಕ್ಷ ರೂ. ಎಂದು ಘೋಷಿಸಿಕೊಂಡಿದ್ದಾರೆ.
7..91 ಕೋಟಿ ರೂ.ಗಳ ಚರಾಸ್ತಿ ಹೊಂದಿದ್ದು, 9.89 ಕೋಟಿ ರೂ.ಗಳ ಸ್ಥಿರಾಸ್ತಿ ಹೊಂದಿದ್ದಾರೆ. ಅವರ ಹೆಸರಿನಲ್ಲಿ 4.65 ಕೋಟಿ ರೂ.ಗಳ ಸಾಲವಿದೆ.  ಚುನಾವಣಾ ನಾಮಪತ್ರದ ಜತೆಗೆ ಅವರು ಸಲ್ಲಿಸಿರುವ ಆಸ್ತಿ ವಿವರದಲ್ಲಿ ತಮ್ಮ ಹೆಸರಿನಲ್ಲಿ 7.91 ಕೋಟಿ ರೂ.ಗಳ ಚರಾಸ್ತಿ, ಪತ್ನಿ ಹೆಸರಿನಲ್ಲಿ 12.95 ಲಕ್ಷ ರೂ.ಗಳ ಚರಾಸ್ತಿ, ಎಚ್ಯುಎಫ್(ಹಿಂದೂ ಅವಿಭಜಿತ ಕುಟುಂಬ) ಹೆಸರಿನಲ್ಲಿ 74 ಲಕ್ಷ ರೂ.ಗಳ ಚರಾಸ್ತಿ ಇದೆ.

ಇನ್ನು ತಮ್ಮ ಹೆಸರಿನಲ್ಲಿ 9.89 ಕೋಟಿ ರೂ.ಗಳ ಸ್ಥಿರಾಸ್ತಿಯಿದ್ದು, ಎಚ್ಯುಎಫ್ ಅಡಿಯಲ್ಲಿ 1.90 ಕೋಟಿ ರೂ.ಗಳ ಸ್ವ ಅರ್ಜಿತ ಆಸ್ತಿ, 5.02 ಕೋಟಿ ರೂ.ಗಳ ಪಿತ್ರಾರ್ಜಿತ ಆಸ್ತಿ ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ. ತಮ್ಮ ಬಳಿ 50 ಗ್ರಾಂ ಚಿನ್ನ, 1 ಕೆಜಿ ಬೆಳ್ಳಿಯಿದ್ದು, ಪತ್ನಿ ಬಳಿ 225 ಗ್ರಾಂ ಚಿನ್ನ, 2.5 ಕೆಜಿ ಬೆಳ್ಳಿ, 442.50 ಗ್ರಾಂ ಚಿನ್ನವು ಪಿತ್ರಾರ್ಜಿತವಾಗಿದೆ ಎಂದು ಅಫಿಡೆವಿಟ್ನಲ್ಲಿ ಉಲ್ಲೇಖಿಸಲಾಗಿದೆ.

Related Posts

Leave a Reply

Your email address will not be published. Required fields are marked *