ಬಾಗಲಕೋಟೆಯ ಬನಹಟ್ಟಿ ನಗರದಲ್ಲಿ ಪ್ರೇಯಸಿ ಆತ್ಮಹತ್ಯೆ ಮಾಡಿಕೊಂಡ ಸುದ್ದಿ ತಿಳಿದು ರಬಕವಿಬನಹಟ್ಟಿಯ ಅಸ್ಕಿ ಗ್ರಾಮದಲ್ಲಿ ಪ್ರಿಯಕರನೂ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಪವಿತ್ರಾ ಒಂಟಿ (19) ಮತ್ತು ಕಾರ್ತಿಕ್ ನಾಯಕ್(19) ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು.
ಪವಿತ್ರಾ ಬನಹಟ್ಟಿಯ ಕೆಹೆಚ್‌ಡಿಸಿ ಕಾಲೋನಿ ನಿವಾಸಿ. ಕಾರ್ತಿಕ್ ಅಸ್ಕಿ ಗ್ರಾಮದ ಹುಡುಗ. ಮಂಗಳವಾರ ಇವರಿಬ್ಬರ ಮಧ್ಯೆ ಜಗಳ ನಡೆದಿತ್ತು. ಬಳಿಕ ಮನನೊಂದು ಪವಿತ್ರಾ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಸುದ್ದಿ ಕೇಳಿದ ನಂತರ ಮನನೊಂದು ಪ್ರಿಯಕರ ಕಾರ್ತಿಕ್ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಘಟನಾ ಸ್ಥಳಕ್ಕೆ ಬನಹಟ್ಟಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ತುಂಗಾ ನದಿಯಲ್ಲಿ ಮುಳುಗಿದ್ದ ಯುವಕನ ಶವ ಪತ್ತೆ
ತೀರ್ಥಹಳ್ಳಿಯಲ್ಲಿ ತುಂಗಾ ನದಿಯಲ್ಲಿ ಈಜಲು ಹೋಗಿ ಕಣ್ಮರೆಯಾಗಿದ್ದ ಯುವಕನ ಶವ ಪತ್ತೆಯಾಗಿದೆ. ಮುಳುಗು ತಜ್ಞ ಈಶ್ವರ್ ಮಲ್ಪೆ ಶವಕ್ಕಾಗಿ ನದಿಯಲ್ಲಿ ಹುಡುಕಾಟ ನಡೆಸಿದ್ದು, ನದಿಗೆ ಇಳಿದಿದ್ದ ಪಕ್ಕದಲ್ಲೇ ಶವ ಸಿಕ್ಕಿದೆ.
ತೀರ್ಥಹಳ್ಳಿ ತಾಲೂಕಿನ ಸೀಬಿನಕೆರೆ ನಿವಾಸಿ ಅಕ್ಷಯ್ (26) ಮೃತಪಟ್ಟ ಯುವಕ ಎಂದು ಗುರುತಿಸಲಾಗಿದೆ. ಏ.7ರಂದು ಸಂಜೆ ಕಲ್ಲು ಬಂಡೆ ಮೇಲೆ ಮೊಬೈಲ್, ಚಪ್ಪಲಿ, ಬಟ್ಟೆಯನ್ನು ಇಟ್ಟು ಈಜಲು ಹೋಗಿದ್ದ ಆತ ನಾಪತ್ತೆಯಾಗಿದ್ದ. ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


