Menu

ಅಪ್ರಾಪ್ತೆ ಮೇಲೆ ಅತ್ಯಾಚಾರ ಬ್ಯಾಡ್ಮಿಂಟನ್ ಕೋಚ್ ಬಂಧನ

ಬೆಂಗಳೂರು: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಬ್ಯಾಡ್ಮಿಂಟನ್ ಕೋಚ್​ ನನ್ನು ಹುಳಿಮಾವು ಪೊಲೀಸರು ಬಂಧಿಸಿದ್ದಾರೆ.

ಅಪ್ರಾಪ್ತ 16 ವರ್ಷದ ಬಾಲಕಿಯ ತಾಯಿ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡು, ತಮಿಳುನಾಡು ಮೂಲದ 30 ವರ್ಷ ವಯಸ್ಸಿನ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಬಾಲಕಿಯ ಮೇಲೆ ಹಲವು ಬಾರಿ ಅತ್ಯಾಚಾರವೆಸಗಿದ್ದನೆನ್ನಲಾದ ಆರೋಪಿಯ ಮೊಬೈಲ್‌ ಫೋನ್‌ನಲ್ಲಿ ಸಂತ್ರಸ್ತ ಬಾಲಕಿಯಲ್ಲದೆ, ಇನ್ನೂ ಕೆಲ ಬಾಲಕಿಯರ ಬೆತ್ತಲೆ ಫೋಟೋ, ವಿಡಿಯೋಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಯಿ ದೂರಿನ ವಿವರ:

ಎಸ್ಎಸ್ಎಲ್‌ಸಿ ಪರೀಕ್ಷೆಯ ಫಲಿತಾಂಶದ ನಿರೀಕ್ಷೆಯಲ್ಲಿದ್ದ ಬಾಲಕಿ, ರಜಾ ದಿನಗಳನ್ನು ಕಳೆಯಲು ಅಜ್ಜಿಯ ಮನೆಗೆ ತೆರಳಿದ್ದಳು. ಫೋನ್‌ನಿಂದ ಅಪರಿಚಿತ ನಂಬರ್‌ಗೆ ಮೊಮ್ಮಗಳ ಬೆತ್ತಲೆ ಫೋಟೋ ರವಾನೆಯಾಗಿರುವುದನ್ನು ಗಮನಿಸಿದ್ದ ಸಂತ್ರಸ್ತೆಯ ಅಜ್ಜಿ, ತಕ್ಷಣ ಆಕೆಯ ಪೋಷಕರಿಗೆ ಮಾಹಿತಿ ನೀಡಿದ್ದರು.

ಬಾಲಕಿಯ ತಾಯಿಯು ಮಗಳನ್ನು ವಿಚಾರಿಸಿದಾಗ ಸಾಕಷ್ಟು ಬಾರಿ ಬ್ಯಾಡ್ಮಿಂಟನ್ ಕೋಚ್, ಲೈಂಗಿಕ ದೌರ್ಜನ್ಯ ಎಸಗಿರುವುದು ತಿಳಿದು ಬಂದಿದೆ. ಅನೇಕ ಸಂದರ್ಭಗಳಲ್ಲಿ ಡ್ಯಾನ್ಸ್ ಕ್ಲಾಸ್, ಟ್ಯೂಷನ್ ತ್ಯಜಿಸಿ ಆರೋಪಿಯನ್ನು ಭೇಟಿ ಮಾಡಿರುವುದಾಗಿ ಬಾಲಕಿಯು ತನ್ನ ತಾಯಿಯ ಬಳಿ ಹೇಳಿಕೊಂಡಿದ್ದಾಳೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಮಗಳಿಂದ ಎಲ್ಲ ವಿಚಾರ ತಿಳಿದು ಹುಳಿಮಾವು ಠಾಣೆಗೆ ಬಾಲಕಿಯ ತಾಯಿ ದೂರು ನೀಡಿದ್ದರು.

ವಿಡಿಯೋ ಚಿತ್ರೀಕರಣ:

ಬ್ಯಾಡ್ಮಿಂಟನ್ ತರಬೇತಿ ಪಡೆಯುತ್ತಿದ್ದ ಬಾಲಕಿಯನ್ನು ಸಾಕಷ್ಟು ಬಾರಿ ಆಕೆಯ ತರಬೇತುದಾರ ಖಾಸಗಿಯಾಗಿ ಭೇಟಿಯಾಗಿದ್ದಾನೆ. ತನ್ನ ಮನೆಗೂ ಕರೆದೊಯ್ದು ಕೃತ್ಯ ಎಸಗಿ ಫೋಟೋ, ವಿಡಿಯೋಗಳನ್ನು ಚಿತ್ರೀಕರಣ ಮಾಡಿಕೊಂಡಿರುವುದು ತನಿಖೆಯ ವೇಳೆ ತಿಳಿದು ಬಂದಿದೆ. ಆರೋಪಿಯ‌ ಮೊಬೈಲ್ ಫೋನ್‌ನಲ್ಲಿ ಇನ್ನೂ 7-8 ಬಾಲಕಿಯರ ಬೆತ್ತಲೆ ಫೋಟೋ, ವಿಡಿಯೋಗಳು ಪತ್ತೆಯಾಗಿವೆ. ಆರೋಪಿಯನ್ನು 8 ದಿನಗಳ ಕಾಲ ಕಸ್ಟಡಿಗೆ ಪಡೆದುಕೊಳ್ಳಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Related Posts

Leave a Reply

Your email address will not be published. Required fields are marked *