ಬಿ.ಸರೋಜಾದೇವಿ ಒಬ್ಬ ಮೇರು ನಟಿ. ಪಂಚಭಾಷೆ ತಾರೆಯಾಗಿ ಕನ್ನಡ, ತಮಿಳು, ತೆಲುಗು ಹಿಂದಿ ಭಾಷೆಗಳಲ್ಲಿ ಪಾತ್ರಗಳನ್ನು ಮಾಡಿ ಸೈ ಎನಿಸಿಕೊಂಡಿದ್ದ ಅದ್ಭುತ ನಟಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಮಲ್ಲೇಶ್ವರಂನ 11 ನೇ ಅಡ್ಡ ರಸ್ತೆಯಲ್ಲಿರುವ ಬಹುಭಾಷಾ ತಾರೆ ಹಿರಿಯ ನಟಿ ದಿವಂಗತ ಪದ್ಮಭೂಷಣ ಶ್ರೀ ಮತಿ ಬಿ ಸರೋಜ ದೇವಿ ಇವರ ಪ್ರಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದ ನಂತರ ಮಾಧ್ಯಮ ದವರೊಂದಿಗೆ ಮಾತನಾಡಿದರು.
ಬಹುಭಾಷಾ ನಟಿ ಬಿ.ಸರೋಜಾದೇವಿ ಅವರ ನಿಧನ ಇಡೀ ಚಿತ್ರರಂಗಕ್ಕೆ ದೊಡ್ಡ ಆಘಾತವನ್ನುಂಟು ಮಾಡಿದೆ. ಚಿಕ್ಕವಯಸ್ಸಿನಲ್ಲಿಯೇ ಸಿನಿಮಾರಂಗವನ್ನು ಪ್ರವೇಶಿ ಏಳು ದಶಕಗಳ ಕಾಲ ಕಲಾವಿದೆಯಾಗಿದ್ದವರು. ಅಭಿನವ ಸರಸ್ವತಿ ಎಂಬ ಬಿರುದು ಚಿಕ್ಕವಯಸ್ಸಿಗೆ ದೊರೆತಿತ್ತು. ಎಲ್ಲಾ ಭಾಷೆಯ ಹೆಸರಾಂತ ನಟರೊಂದಿಗೆ ನಟಿಸಿದ್ದರು.ದಿಲೀಪ್ ಕುಮಾರ್, ರಾಜೇಂದ್ರ ಕುಮಾರ್, ದೇವ್ ಆನಂದ್, ಎಂ.ಜಿ.ಆರ್, ಎನ್.ಟಿ.ಆರ್, ಶಿವಾಜಿ ಗಣೇಶನ್, ರಾಜ್ ಕುಮಾರ್ ಅವರೊಂದಿಗೂ ಅನೇಕ ಚಿತ್ರಗಳಲ್ಲಿ ನಟಿಸಿದ್ದರು ಎಂದರು.
ಯಾವುದೇ ಪಾತ್ರಕ್ಕೂ ಜೀವ ತುಂಬುತ್ತಿದ್ದರು. ಖಾಸಗಿ ಜೀವನದಲ್ಲಿಯೂ ಶಿಸ್ತುಬದ್ಧ ಜೀವನವನ್ನು ನಡೆಸಿದವರು. ಕನ್ನಡ ಚಿತ್ರರಂಗ ಬೆಳೆಯಲು ಅಪಾರ ಕೊಡುಗೆಯನ್ನು ಕೊಟ್ಟಿದ್ದಾರೆ. ಅವರ ಸಾವಿನಿಂದ ಚಿತ್ರರಂಗಕ್ಕೆ ಅಪಾರವಾದ ನಷ್ಟವಾಗಿದೆ. ಅವರ ಆತ್ಮಕ್ಕೆ ಚಿರಶಾಂತಿ ದೊರಕಲಿ ಹಾಗೂ ಅವರ ಕುಟುಂಬ ವರ್ಗದವರಿಗೆ ಅವರ ಸಾವಿನಿಂದಾದ ದುಃಖವನ್ನು ಭರಿಸುವ ಶಕ್ತಿ ದೊರೆಯಲಿ ಎಂದು ಪ್ರಾರ್ಥಿಸುವುದಾಗಿ ತಿಳಿಸಿದರು. ಅವರ ಅಂತ್ಯ ಸಂಸ್ಕಾರವನ್ನು ಸಕಲ ಸರ್ಕಾರಿ ಗೌರವದೊಂದಿಗೆ ನೆರವೇರಿಸಲಾಗುವುದು. ಅವರ ಹುಟ್ಟೂರಿನಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದರು.
ಅನೇಕ ಬಾರಿ ಸರೋಜಾದೇವಿಯವರನ್ನು ಭೇಟಿ ಮಾಡಿದ್ದೇನೆ. ಎಲ್ಲರೊಂದಿಗೆ ಆತ್ಮೀಯವಾಗಿ, ಪ್ರೀತಿಯಿಂದ ಮಾತನಾಡುತ್ತಿದ್ದರು. ದೊಡ್ಡ ವ್ಯಕ್ತಿತ್ವವಿದ್ದ ನಟಿ ಅವರು ಎಂದು ತಿಳಿಸಿದರು. ಅವರ ಸಿನಿಮಾಗಳಲ್ಲಿ ಮಲ್ಲಮ್ಮನ ಪವಾಡ, ಕಿತ್ತೂರು ಚೆನ್ನಮ್ಮ, ಭಾಗ್ಯವಂತರು, ಬಬ್ರುವಾಹನ, ನ್ಯಾಯವೇ ದೇವರು ಸೇರಿದಂತೆ ಅನೇಕ ಚಿತ್ರಗಳನ್ನು ನೋಡಿರುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.
ಸರೋಜಾದೇವಿಯವರ ಹೆಸರನ್ನು ಅವರು ವಾಸಿಸುತ್ತಿದ್ದ ರಸ್ತೆಗೆ ಇಡಬೇಕೆಂಬ ಆಸೆಯಿತ್ತು ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಈ ಬಗ್ಗೆ ಬಿಬಿಎಂಪಿಯೊಂದಿಗೆ ಚರ್ಚಿಸುವುದಾಗಿ ಹೇಳಿದರು.