Sunday, September 28, 2025
Menu

ವಿಪ್ರೋ ಕ್ಯಾಂಪಸ್‌ನಲ್ಲಿ ವಾಹನ ಸಂಚಾರಕ್ಕೆ ಅನುಮತಿ ಸಾಧ್ಯವಿಲ್ಲ: ಸಿಎಂ ಮನವಿಯನ್ನು ತಿರಸ್ಕರಿಸಿದ ಅಜೀಂ ಪ್ರೇಮ್‌ಜಿ

ಬೆಂಗಳೂರು ಸಂಚಾರ ದಟ್ಟಣೆ ನಿವಾರಣೆಗೆ ಸರ್ಜಾಪುರದ ವಿಪ್ರೋ ಕ್ಯಾಂಪಸ್ ಮೂಲಕ ವಾಹನಗಳ ಸೀಮಿತ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕೆಂದು ಸಿಎಂ ಸಿದ್ದರಾಮಯ್ಯ ಮಾಡಿದ್ದ ಮನವಿಯನ್ನು ಅಜೀಮ್ ಪ್ರೇಮ್ ಜೀ ತಿರಸ್ಕರಿಸಿದ್ದಾರೆ.

ವಿಪ್ರೋ ಖಾಸಗಿ ಆಸ್ತಿಯಾಗಿದ್ದು, ಕಟ್ಟುನಿಟ್ಟಿನ ಭದ್ರತಾ ನಿಯಮಗಳನ್ನ ಹೊಂದಿದೆ. ಸಾರ್ವಜನಿಕ ರಸ್ತೆಗಾಗಿ ನಮ್ಮ ಕ್ಯಾಂಪಸ್ ತೆರೆದಿಡಲು ಸಾಧ್ಯವಿಲ್ಲಎಂದು ಸಿದ್ದರಾಮಯ್ಯನವರ ಪತ್ರಕ್ಕೆ ಪ್ರತ್ಯುತ್ತರ ನೀಡಿದ್ದಾರೆ.

ಸಿದ್ದರಾಮಯ್ಯ ಅವರ ಮನವಿಗೆ ಪ್ರತಿಕ್ರಿಯಿಸಿದ ಪ್ರೇಮ್‌ಜಿ, ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಮೂಲಕ ಸಂಚಾರ ದಟ್ಟಣೆ ಪರಿಹಾರಕ್ಕಾಗಿ ವೈಜ್ಞಾನಿಕ ಹಾಗೂ ತಾಂತ್ರಿಕ ಅಧ್ಯಯನ ನಡೆಸಲು ತಾವು ಸಿದ್ದರಾಗಿದ್ದೇವೆ ಎಂದು ತಿಳಿಸಿದ್ದಾರೆ. ಆದರೆ ಕ್ಯಾಂಪಸ್ ಒಳಗಿನ ರಸ್ತೆ ಸಾರ್ವಜನಿಕರಿಗೆ ತೆರೆಯುವ ಪ್ರಶ್ನೆಯೇ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಈ ನಿರ್ಧಾರದಿಂದಾಗಿ, ಐಟಿ ಕಾರಿಡಾರ್ ಪ್ರದೇಶದ ವಾಹನ ದಟ್ಟಣೆ ನಿವಾರಣೆಗಾಗಿ ಸರ್ಕಾರಕ್ಕೆ ಪರ್ಯಾಯ ಮಾರ್ಗಗಳನ್ನು ಹುಡುಕಬೇಕಾಗಿದೆ.

ಬೆಂಗಳೂರು  ಹೊರ ವರ್ತುಲ ರಸ್ತೆ ಕಾರಿಡಾರ್‌ನಲ್ಲಿ, ಅದರಲ್ಲೂ ಮುಖ್ಯವಾಗಿ ಇಬ್ಲೂರು ಜಂಕ್ಷನ್ ಬಳಿ ಸಂಚಾರ ದಟ್ಟಣೆ ತಗ್ಗಿಸಲು ನಿಮ್ಮ ಕ್ಯಾಂಪಸ್‌ ಮೂಲಕ ವಾಹನ ಸಂಚಾರಕ್ಕೆ ಅವಕಾಶ ನೀಡಬೇಕು ಸಿದ್ದರಾಮಯ್ಯ ಅವರು ವಿಪ್ರೋ ಸಂಸ್ಥಾಪಕ ಅಜೀಂ ಪ್ರೇಮ್‌ಜಿ ಅವರಿಗೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದರು.

ಬೆಂಗಳೂರು ಎದುರಿಸುತ್ತಿರುವ ಪ್ರಮುಖ ಸವಾಲುಗಳಲ್ಲಿ ಪೀಕ್ ಅವರ್‌ ಸಂಚಾರ ದಟ್ಟಣೆಯೂ ಒಂದು. ಇದು ಚಲನಶೀಲತೆ, ಉತ್ಪಾದಕತೆ ಮತ್ತು ನಗರ ಜೀವನದ ಗುಣಮಟ್ಟದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಕರ್ನಾಟಕದ ಐಟಿ ಪರಿಸರ ವ್ಯವಸ್ಥೆಯ ಪ್ರಗತಿಗೆ ಮತ್ತು ಒಟ್ಟಾರೆ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ವಿಪ್ರೋದ ನಿರಂತರ ಕೊಡುಗೆಯನ್ನು ಪ್ರಾಮಾಣಿಕವಾಗಿ ಪ್ರಶಂಸಿಸುತ್ತೇನೆ ಎಂದು ಹೇಳಿದ್ದರು.

ಇಬ್ಲೂರು ಜಂಕ್ಷನ್‌ನಲ್ಲಿರುವ ಹೊರ ವರ್ತುಲ ರಸ್ತೆ ಕಾರಿಡಾರ್‌ನಲ್ಲಿ ಪೀಕ್ ಸಮಯದಲ್ಲಿ ತೀವ್ರ ಸಂಚಾರ ದಟ್ಟಣೆಯಾಗುತ್ತಿದೆ. ಪರಸ್ಪರ ಒಪ್ಪಿದ ನಿಯಮಗಳು ಮತ್ತು ಅಗತ್ಯ ಭದ್ರತಾ ಪರಿಗಣನೆ ಗಳಿಗೆ ಒಳಪಟ್ಟು ವಿಪ್ರೋ ಕ್ಯಾಂಪಸ್ ಮೂಲಕ ಸೀಮಿತ ವಾಹನ ಸಂಚಾರಕ್ಕೆ ಅವಕಾಶ ನೀಡುವ ಸಾಧ್ಯತೆಯನ್ನು ನಾನು ನಿರೀಕ್ಷಿಸುತ್ತೇನೆ. ಸಂಚಾರ ಮತ್ತು ನಗರ ಚಲನಶೀಲತೆ ತಜ್ಞರ ಪ್ರಾಥಮಿಕ ಮೌಲ್ಯಮಾಪನಗಳ ನಂತರ ಹೊರ ವರ್ತುಲ ರಸ್ತೆ ಕಾರಿಡಾರ್‌ನ ಪಕ್ಕದ ಪ್ರದೇಶಗಳಲ್ಲಿ ಪೀಕ್ ಕಚೇರಿ ಸಮಯದಲ್ಲಿ ವಿಪ್ರೋ ಕ್ಯಾಂಪಸ್ ಮೂಲಕ ವಾಹನ ಸಂಚಾರಕ್ಕೆ ಅವಕಾಶ ನೀಡಿದರೆ ಶೇ.30 ರಷ್ಟು ದಟ್ಟಣೆ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಸಿಎಂ ವಿವರಿಸಿದ್ದಾರೆ.

Related Posts

Leave a Reply

Your email address will not be published. Required fields are marked *