ಆಯುರ್ವೇದ ಚಿಕಿತ್ಸಾ ಪದ್ಧತಿ ಸುಮಾರು 5 ಸಾವಿರ ವರ್ಷಗಳ ಇತಿಹಾಸವಿದ್ದು, ಇದು ನಮ್ಮ ಮೂಲ. ಆಯುರ್ವೇದ ನಮ್ಮ ಆಸ್ತಿಯಾಗಿದ್ದು ಇದನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅಭಿಪ್ರಾಯಪಟ್ಟರು.
ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾ ವಿಶ್ವವಿದ್ಯಾಲಯದ ಪುರುಷ ವಿದ್ಯಾರ್ಥಿನಿಲಯದ ನೂತನ ಕಟ್ಟಡವನ್ನು ಶಿವಕುಮಾರ್ ಉದ್ಘಾಟಿಸಿ ಮಾತನಾಡಿದರು.
“ಬೀಜ ಬಿತ್ತಿದಾಗ ಬೆಳೆ ಬರುತ್ತದೆ. ಜ್ಞಾನ ಬಿತ್ತಿದರೆ ಉತ್ತಮವಾದ ಪ್ರಜೆಗಳಾಗುತ್ತಾರೆ. ಆರೋಗ್ಯ ಉಳಿಸಿಕೊಳ್ಳಲು ಸುಮಾರು 5 ಸಾವಿರ ವರ್ಷಗಳ ಹಿಂದೆ ಪಾಲಿಸಿಕೊಂಡು ಬಂದ ಪದ್ಧತಿ ಆಯುರ್ವೇದ. ಇದು ಭಾರತದ ಆಸ್ತಿ. ಇದನ್ನು ನಾವು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ. ನಮ್ಮ ದೇಶದ ಆಯುರ್ವೇದ, ಯೋಗ ಹಾಗೂ ಆಧ್ಯಾತ್ಮಿಕತೆಯನ್ನು ಇಡೀ ವಿಶ್ವ ಗಮನಿಸಿ ಪಾಲಿಸುತ್ತಿದೆ. ವಿಶ್ವದುದ್ದಗಲಕ್ಕೆ ಇವುಗಳಿಗೆ ಗೌರವ ಸಿಗುತ್ತಿದೆ. ಆಧುನಿಕ ಕಾಲದಲ್ಲೂ ಆಯುರ್ವೇದ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ನಮಿಸಲು ಬಯಸುತ್ತೇನೆ” ಎಂದರು.
“ಈ ಪದ್ಧತಿ ಮೇಲೆ ಜನರಿಗೆ ದೊಡ್ಡ ವಿಶ್ವಾಸವಿದೆ. ಮನುಷ್ಯನಲ್ಲಿ ನಂಬಿಕೆಗಿಂತ ದೊಡ್ಡ ಗುಣ ಮತ್ತೊಂದಿಲ್ಲ. ಸಂಸ್ಕೃತ ವಿವಿ ಉಪಕುಲಪತಿಗಳಾದ ಅಹಲ್ಯಾ ಅವರು ಬಂದಾಗ ನೀವು ಜೋರಾದ ಚಪ್ಪಾಳೆ ಹೊಡೆದಿರಿ. ಅವರ ಮೇಲಿನ ನಂಬಿಕೆಯಿಂದ ನೀವು ಚಪ್ಪಾಳೆ ತಟ್ಟಿದ್ದೀರಿ. ಅದೇ ರೀತಿ ಆಯುರ್ವೇದ ಪದ್ಧತಿಯ ವೈದ್ಯರಿಗೂ ಬೇರೆ ವೈದ್ಯರಿಗೂ ಸಮಾನ ಗೌರವ ನೀಡುವಂತಾದರೆ ಜನರಿಗೆ ನಂಬಿಕೆ ಹುಟ್ಟುತ್ತದೆ. ನೀವು ಯಾವುದೇ ಕಾರಣಕ್ಕೂ ಆತ್ಮವಿಶ್ವಾಸ ಕಳೆದುಕೊಳ್ಳಬಾರದು. ನೀವು ರೋಗಿಗಳಿಗೆ ಚಿಕಿತ್ಸೆ ನೀಡುವಾಗ ಪ್ರಕೃತಿಯನ್ನು ಅನುಸರಿಸುತ್ತೀರಿ. ನೀವು ನಿಮ್ಮ ಸೇವೆಗಳ ಮೂಲಕ ಹೆಚ್ಚು ಗೌರವ ಸಂಪಾದಿಸಬೇಕು. ನಿಮ್ಮ ಆಯುರ್ವೇದ ಪದ್ಧತಿ ಬಿಡಬೇಡಿ” ಎಂದು ಸಲಹೆ ನೀಡಿದರು.
“ಈ ಆಯುರ್ವೇದ ಆಸ್ಪತ್ರೆಯಲ್ಲಿ ನಾನೇ ಬಂದು ಚಿಕಿತ್ಸೆ ಪಡೆಯುತ್ತೇನೆ. ನಾವು ಈ ಪದ್ಧತಿಯನ್ನು ಉಳಿಸಿಕೊಳ್ಳಬೇಕು. ತಾಲೂಕು ಮಟ್ಟದಲ್ಲಿ 5 ಹಾಸಿಗೆಗಳ ಆಸ್ಪತ್ರೆ, ಜಿಲ್ಲಾ ಮಟ್ಟದಲ್ಲಿ ಕನಿಷ್ಠ 10 ಹಾಸಿಗೆಗಳ ಆಸ್ಪತ್ರೆ ಇರಬೇಕು, ಅದಕ್ಕೆ ವೈದ್ಯರನ್ನು ನೇಮಿಸಬೇಕು ಎಂದು ಸಚಿವರಾದ ದಿನೇಶ್ ಗುಂಡೂರಾವ್ ಅವರು ಪ್ರಯತ್ನಿಸುತ್ತಿದ್ದಾರೆ. ನಾವು ಏನು ಬೇಕಾದರೂ ಸಂಪಾದನೆ ಮಾಡಬಹುದು. ಆದರೆ ಆರೋಗ್ಯ ಸಂಪಾದನೆ ಬಹಳ ಕಷ್ಟ. ಈಗ ಜನ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿದ್ದಾರೆ. ಸಾವಯವ ಉತ್ಪನ್ನ, ಸಿರಿಧಾನ್ಯಗಳತ್ತ ಮುಖ ಮಾಡುತ್ತಿದ್ದಾರೆ” ಎಂದರು.
“ದೇಶದಲ್ಲಿ ಅತಿ ಹೆಚ್ಚು ಮೆಡಿಕಲ್ ಕಾಲೇಜುಗಳಿರುವುದು ನಮ್ಮ ರಾಜ್ಯದಲ್ಲಿ. ಆಯುರ್ವೇದಕ್ಕೆ ಮಹಾರಾಷ್ಟ್ರ ನಂತರ ನಮ್ಮ ರಾಜ್ಯದಲ್ಲಿ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತಿದೆ. ಆಯುರ್ವೇದ ನಮ್ಮ ಮೂಲ. ನಾವು ನಮ್ಮ ಮೂಲವನ್ನು ಮರೆಯಬಾರದು. ದಿನೇಶ್ ಗುಂಡೂರಾವ್ ಅವರು ಆರೋಗ್ಯ ಇಲಾಖೆ ಜವಾಬ್ದಾರಿ ವಹಿಸಿಕೊಂಡ ನಂತರ ಇಲಾಖೆಗೆ ಜೀವ ತುಂಬಿದ್ದಾರೆ. ಸರ್ಕಾರದದ ಸೇವೆಗಳು ಹಾಗೂ ಸರ್ಕಾರಿ ಆಸ್ಪತ್ರೆಗಳ ಸೇವೆಗಳನ್ನು ಪಡೆಯಬಹುದು ಎಂದು ಹಳ್ಳಿಗಳಿಂದ ಬೆಂಗಳೂರಿನವರೆಗೂ ಜನರಲ್ಲಿ ಅರಿವು ಮೂಡಿಸಿದ್ದಾರೆ. ಅವರಿಗೆ ಸರ್ಕಾರ ಹಾಗೂ ಜನರ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ” ಎಂದು ತಿಳಿಸಿದರು.