Menu

ರಾಜ್ಯದ ಶಾಲೆಗಳಲ್ಲಿ ಇನ್ಮುಂದೆ ವಿದ್ಯಾರ್ಥಿಗಳ ಪೋಟೊ ಕ್ಲಿಕ್ಕಿಸಿ ಹಾಜರಾತಿ ದಾಖಲು

ಕರ್ನಾಟಕದ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಶಿಕ್ಷಕರು ಮೊಬೈಲ್‌ನಲ್ಲಿ ವಿದ್ಯಾರ್ಥಿಗಳ ಫೋಟೋ ಕ್ಲಿಕ್ಕಿಸಿಕೊಂಡು ಹಾಜರಾತಿ ದಾಖಲಿಸಿಕೊಳ್ಳ ಲಿದ್ದಾರೆ. ʼನಿರಂತರʼ ಹೆಸರಿನಲ್ಲಿ ಈ ಕಾರ್ಯಕ್ರಮ ಅನುಷ್ಠಾನಗೊಳ್ಳುತ್ತಿದ್ದು, ಮಕ್ಕಳ ಹಾಜರಾತಿಗೆ ಇನ್ಮುಂದೆ ಆನ್‌ಲೈನ್ ಸಿಸ್ಟಮ್ ಜಾರಿಯಾಗಲಿದೆ.

ಪ್ರಸಕ್ತ ವರ್ಷದಿಂದಲೇ ಎಐ ಫೇಶಿಯಲ್ ರೆಕಗ್ನಿಷನ್ ತಂತ್ರಜ್ಞಾನ ಆಧಾರಿತ ಹಾಜರಾತಿ ವ್ಯವಸ್ಥೆ ಜಾರಿಗೆ ಸರ್ಕಾರ ಮತ್ತು ಶಿಕ್ಷಣ ‌ಇಲಾಖೆ ಆದೇಶ ಹೊರಡಿಸಿದ್ದು, 2025-26ನೇ ಶೈಕ್ಷಣಿಕ ಸಾಲಿನಿಂದಲೇ ಹೊಸ ವ್ಯವಸ್ಥೆ ಜಾರಿಗೆ ಬರುತ್ತಿದೆ.

ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಈ ವ್ಯವಸ್ಥೆ ಜಾರಿಯಾಗುತ್ತಿದ್ದು, 52,686 ಶಾಲೆಗಳಲ್ಲಿ ಆನ್‌ಲೈನ್ ಹಾಜರಾತಿ ವ್ಯವಸ್ಥೆ ಬರಲಿದೆ. ಯೋಜನೆಯಡಿ ರಾಜ್ಯದ 40,74,525 ಸರ್ಕಾರಿ ಹಾಗೂ 11,81,213 ಅನುದಾನಿತ ಸೇರಿ ಒಟ್ಟು 52,686 ಶಾಲೆಗಳ 52 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ ಹಾಜರಾತಿಯನ್ನು ಕೃತಕ ಬುದ್ಧಿಮತ್ತೆ ಚಾಲಿತ, ಮುಖ ಚಹರೆ ಗುರುತು ಆಧಾರಿತವಾಗಿ (ಎಐ ಫೇಶಿಯಲ್ ರೆಕಗ್ನಿಷನ್) ತೆಗೆದುಕೊಳ್ಳಲಾಗುತ್ತದೆ.

5 ಕೋಟಿ ರೂ. ವೆಚ್ಚದ ಈ ಯೋಜನೆಯನ್ನು ಕರ್ನಾಟಕ ಸ್ಟೇಟ್ ಡೇಟಾ ಸೆಂಟರ್ (ಕೆಎಸ್‌ಡಿಸಿ) ಮೂಲಕ ನಿರ್ವಹಣೆ ಮಾಡಲಾಗುತ್ತದೆ. ಇದು ಗರಿಷ್ಠ ಗೌಪ್ಯತೆ ಮತ್ತು ಸುರಕ್ಷತೆ ಕಾಪಾಡುತ್ತದೆ. ಕೈಯಿಂದ ಬರೆಯುವ ಹಾಜರಾತಿಯಲ್ಲಿನ ನ್ಯೂನತೆ, ನಕಲಿ ಹಾಜರಾತಿ ತಪ್ಪಿಸಬಹುದು. ನಿಖರವಾದ ಮಾಹಿತಿ ರಿಯಲ್‌ ಟೈಮ್‌ನಲ್ಲಿ ಲಭ್ಯವಾಗುವುದರಿಂದ ಮಕ್ಕಳ ಹಾಜರಾತಿಯ ಮೇಲ್ವಿಚಾರಣೆ ಸಾಧ್ಯವಾಗಲಿದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.

ಶಿಕ್ಷಕರ ಮೊಬೈಲ್‌ಗೆ ಅಳವಡಿಸಲಾಗಿರುವ ಸಾಫ್ಟ್‌ವೇರ್‌ನಲ್ಲಿ ಮಕ್ಕಳ ಫೋಟೋ ಕ್ಲಿಕ್ಕಿಸಿಕೊಳ್ಳಲಾಗುತ್ತದೆ. ಅದರಲ್ಲಿ ಮಕ್ಕಳ ಹೆಸರು ಮತ್ತು ತರಗತಿ ವಿವರ ಮೊದಲೇ ಫೀಡ್‌ ಮಾಡಲಾಗಿದ್ದು, ಫೋಟೋ ಕ್ಲಿಕ್ಕಿಸಿದ ಕೂಡಲೇ ಆ್ಯಪ್‌ನಲ್ಲಿ ಹೆಸರು, ಸಮಯ ಸಹಿತ ಹಾಜರಾತಿ ದಾಖಲಾಗುತ್ತದೆ. ಈ ವಿವರ ನೇರವಾಗಿ ಕೇಂದ್ರ ಕಚೇರಿಗೆ ರವಾನೆಯಾಗಿ ಏಕಕಾಲದಲ್ಲಿ ನಿಖರ ಮಾಹಿತಿ ಶಿಕ್ಷಣ ಇಲಾಖೆಯ ಪ್ರಧಾನ ಕಚೇರಿಗೆ ತಲುಪುತ್ತದೆ. ಸಂಭವನೀಯ ನಕಲಿ ಹಾಜರಾತಿಗೂ ಕಡಿವಾಣ ಬೀಳಲಿದೆ. ವಿದ್ಯಾರ್ಥಿಗಳ ಹಾಜರಾತಿಯಲ್ಲಿ ನಿಖರತೆ ದೊರೆಯುತ್ತದೆ. ಹಾಜರಾತಿಯಲ್ಲಿ ಕೊರತೆ ಬಂದರೆ ನಿತ್ಯವೂ ಮೇಲ್ವಿಚಾರಣೆ ಮಾಡಬಹುದು. ಯೋಜನೆಗಳ ಅನುಷ್ಠಾನಕ್ಕೆ ನಿಖರ ಮಾಹಿತಿ ಲಭ್ಯವಾಗುತ್ತದೆ.

Related Posts

Leave a Reply

Your email address will not be published. Required fields are marked *