ಬೆಳಗಾವಿ ತಾಲೂಕಿನ ಮಚ್ಚೆ ಗ್ರಾಮದ ರಾಮನಗರದಲ್ಲಿ ಮಹಿಳೆಯೊಬ್ಬರು ಕುದಿಯುತ್ತಿದ್ದ ಅಡುಗೆ ಎಣ್ಣೆ ಸುರಿದು ಪತಿಯ ಹತ್ಯೆಗೆ ವಿಫಲ ಯತ್ನ ನಡೆಸಿದ್ದಾರೆ. ವೈಶಾಲಿ ಪಾಟೀಲ್ (48) ಕಾದ ಅಡುಗೆ ಎಣ್ಣೆಯನ್ನು ಪತಿ ಸುಭಾಷ ಪಾಟೀಲ್ (55)ಗೆ ಸುರಿದಿದ್ದು, ಅವರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಂತಾಜನಕ ಸ್ಥಿತಿಯಲ್ಲಿದ್ದಾರೆ.
ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಸುಭಾಷ್ ಪಾಟೀಲ್ ಸಿಲಿಂಡರ್ ವಿತರಣೆ ಕೆಲಸ ಮಾಡುತ್ತಿದ್ದರು. ಕೆಲಸ ಮುಗಿಸಿ ಮನೆಗೆ ವಾಪಸಾದ ಸುಭಾಷ್ ರಾತ್ರಿ ಊಟಕ್ಕೆ ಕುಳಿತಿದ್ದ ವೇಳೆ ಈ ಘಟನೆ ನಡೆದಿದೆ.
ಪತಿ ಬೇರೆ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿರುವುದಾಗಿ ವೈಶಾಲಿಗೆ ಅನುಮಾನವಿದ್ದು, ಹಲವು ವರ್ಷಗಳಿಂದ ದಂಪತಿ ಮಧ್ಯೆ ಕಲಹ ನಡೆಯುತ್ತಿದೆ. ಈ ಬಾರಿ ವೈಶಾಲಿ ಕಾದಿರುವ ಅಡುಗೆ ಎಣ್ಣೆಯನ್ನು ಏಕಾಏಕಿ ಪತಿಯ ತಲೆಯ ಮೇಲೆ ಸುರಿದಿದ್ದಾರೆ. ಬಿಸಿ ಎಣ್ಣೆಯಿಂದ ಸುಟ್ಟುಹೋಗಿರುವ ಸುಭಾಷ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ವೈದ್ಯರು ಅವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿಸಿದ್ದಾರೆ.
ಸುಭಾಷ್ ಮತ್ತು ವೈಶಾಲಿ ಮಧ್ಯೆ ದೀರ್ಘಕಾಲದಿಂದ ಭಿನ್ನಾಭಿಪ್ರಾಯಗಳು ಇದೆ, ವೈಶಾಲಿಯ ಸಂಶಯ ಇದಕ್ಕೆ ಕಾರಣ ಎಂದು ಪೊಲೀಸರು ಶಂಕಿಸಿದ್ದಾರೆ. ವೈಶಾಲಿ ಕೋಪಗೊಂಡು ಈ ಕೃತ್ಯ ಎಸಗಿರುವುದೇ ಅಥವಾ ಪೂರ್ವಯೋಜಿತವೇ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ವೈಶಾಲಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು, ಕೊಲೆ ಯತ್ನದ ಆರೋಪದಡಿ ಪ್ರಕರಣ ದಾಖಲಾಗಿದೆ.