Tuesday, December 09, 2025
Menu

482 ಎಕರೆ ಅರಣ್ಯಭೂಮಿ ಕಬಳಿಕೆ ಯತ್ನ: ಸಿಐಡಿ ತನಿಖೆ ಕೋರಿ ಸಿಎಂಗೆ ಖಂಡ್ರೆ ಪತ್ರ

eshwar khandre

ಬೆಳಗಾವಿ: 532 ಎಕರೆ ಅರಣ್ಯ, ಸರ್ಕಾರಿ ಭೂಮಿ ಕಬಳಿಸಲು ನಕಲಿ ದಾಖಲೆ ಸಲ್ಲಿಸಿ ನ್ಯಾಯಾಲಯದಿಂದ ಆದೇಶ ಪಡೆದಿರುವ ವ್ಯಕ್ತಿಯ ಹಿಂದಿರುವವರ ಸಂಚನ್ನು ಬಯಲು ಮಾಡಿ, ಶಿಕ್ಷಿಸಲು ಸಿಐಡಿ ತನಿಖೆಗೆ ವಹಿಸುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ.

ಎಂ.ಬಿ. ನೇಮಣ್ಣ ಗೌಡ @ ಎಂ.ಬಿ. ಮನ್ಮಥ ಎಂಬ ವ್ಯಕ್ತಿ ಹೈಕೋರ್ಟ್ ನಲ್ಲಿ ರಿಟ್ ಅರ್ಜಿ ಸಲ್ಲಿಸಿ ಇನಾಮ್ ರದ್ದು ಕಾಯಿದೆ ಅಡಿ ಹಾಸನದ ವಿಶೇಷ ಜಿಲ್ಲಾಧಿಕಾರಿಗಳ ಆದೇಶದಂತೆ ಬೆಂಗಳೂರು ಕೆಂಗೇರಿ ಬಳಿಯ ಬಿಎಂ ಕಾವಲ್ ನಲ್ಲಿ ತಮಗೆ ಮಂಜೂರು ಮಾಡಲಾಗಿದೆ ಎನ್ನಲಾದ 482 ಎಕರೆ ಕಾಯ್ದಿಟ್ಟ ಅರಣ್ಯಭೂಮಿ ಸೇರಿದಂತೆ ಒಟ್ಟು 532 ಎಕರೆ ಜಮೀನಿನ ದಾಖಲೆಗಳನ್ನು 3 ತಿಂಗಳೊಳಗೆ ತಮ್ಮ ಹೆಸರಿಗೆ ಮಾಡಿಕೊಡುವಂತೆ ಆದೇಶ ಪಡೆದಿದ್ದಾರೆ.

90 ದಿನ ಪೂರ್ಣಗೊಳ್ಳಲು 1 ದಿನ ಬಾಕಿ ಇರುವವರೆಗೂ ಸರ್ಕಾರದ ಹೆಚ್ಚುವರಿ ಸರ್ಕಾರಿ ವಕೀಲ ಯೋಗಣ್ಣ ಈ ಮಾಹಿತಿಯನ್ನು ಸರ್ಕಾರಕ್ಕಾಗಲೀ, ಅರಣ್ಯ ಇಲಾಖೆಗಾಗಲೀ ನೀಡಿರುವುದಿಲ್ಲ ಬದಲಾಗಿ ಮೇಲ್ಮನವಿ ಸಲ್ಲಿಸಲು ಇದು ಸೂಕ್ತ ಪ್ರಕರಣವಲ್ಲ ಎಂದು ನಮೂದಿಸಿ ಅರ್ಜಿದಾರರಿಗೆ ಅನುಕೂಲ ಮಾಡಿಕೊಡುವಂತೆ ವರ್ತಿಸಿದ್ದು, ಇದು ಶಂಕಾಸ್ಪದವಾಗಿದೆ ಎಂದೂ ಪತ್ರದಲ್ಲಿ ತಿಳಿಸಿದ್ದಾರೆ.

ಸುಮಾರು 25 ಸಾವಿರ ಕೋಟಿ ರೂ. ಬೆಲೆ ಬಾಳುವ ಈ ಭೂಮಿಯ ಬಗ್ಗೆ ಕೊನೆ ಕ್ಷಣದಲ್ಲಿ ಇಲಾಖೆಗೆ ಮಾಹಿತಿ ಬಂದಿದ್ದು, ಕೂಡಲೇ ತಾವು ಸಭೆ ನಡೆಸಿ ಮೇಲ್ಮನವಿ ಸಲ್ಲಿಸಲು ಸೂಚಿಸಿರುವುದಾಗಿ ತಿಳಿಸಿರುವ ಈಶ್ವರ ಖಂಡ್ರೆ, ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಿ ಭೂಮಿ ಮತ್ತು ಅರಣ್ಯ ಭೂಮಿ ಕಬಳಿಸಲು ಯತ್ನಿಸುತ್ತಿದ್ದು, ಮೇಲೆ ಹೇಳಲಾದ ವ್ಯಕ್ತಿ ಮನ್ಮಥ ಅಲಿಯಾಸ್ ನೇಮಣ್ಣ ಗೌಡ ಈ ಹಿಂದೆಯೂ ಇದೇ ರೀತಿ ಸುಳ್ಳು ಮತ್ತು ನಕಲಿ ದಾಖಲೆ ನೀಡಿ ಸರ್ಕಾರಿ ಭೂಮಿಯ ಮೇಲೆ ಹಕ್ಕು ಸಾಧಿಸಲು ಪ್ರಯತ್ನಿಸಿದ್ದಾರೆ.

ಈ ಸಂಬಂಧ ಚಿಕ್ಕಮಗಳೂರಿನ ಅಂದಿನ ಉಪ ವಿಭಾಗಾಧಿಕಾರಿ ದಬ್ಜೀತ್ ಕುಮಾರ್ ಸದರಿ ವ್ಯಕ್ತಿಯ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ 25.09.2024ರ ತಮ್ಮ ಆದೇಶದಲ್ಲಿ ತಿಳಿಸಿರುತ್ತಾರೆ. ಬೆಂಗಳೂರು ಬಿ.ಎಂ. ಕಾವಲ್ ವಿಚಾರ ನನ್ನ ಗಮನಕ್ಕೆ ಬಂದ ಕೂಡಲೇ ಚಿಕ್ಕಮಗಳೂರು ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಿಸಲು ಸೂಚಿಸಿದ್ದು, 28.11.2025ರಂದು ದೂರು ಸ್ವೀಕರಿಸಿರುವ ಮೂಡಿಗೆರೆ ಆರಕ್ಷಕ ವೃತ್ತ ನಿರೀಕ್ಷಕರು ಈವರೆಗೆ ಎಫ್.ಐ.ಆರ್. ದಾಖಲಿಸದೇ ಇರುವುದೂ ಅನುಮಾನಕ್ಕೆ ಕಾರಣವಾಗಿದೆ ಎಂದು ಈಶ್ವರ ಖಂಡ್ರೆ ಪತ್ರದಲ್ಲಿ ತಿಳಿಸಿದ್ದಾರೆ.

ಸಾವಿರಾರು ಕೋಟಿ ರೂ. ಬೆಲೆ ಬಾಳುವ ಸರ್ಕಾರಿ ಭೂಮಿ ಮತ್ತು ಅರಣ್ಯ ಭೂಮಿ ಕಬಳಿಸುವವರಿಗೆ ಪರೋಕ್ಷವಾಗಿ ಮತ್ತು ಪ್ರತ್ಯಕ್ಷವಾಗಿ ಕೆಲವು ಅಧಿಕಾರಿಗಳು ಮತ್ತು ಹೆಚ್ಚುವರಿ ಸರ್ಕಾರಿ ವಕೀಲರು ಸಹಾಯ ಮಾಡುತ್ತಿರುವುದು ಮೇಲ್ನೋಟಕ್ಕೆ ಕಾಣುತ್ತಿದ್ದು, ಈ ಬಗ್ಗೆ ಒಂದು ವಿಶೇಷ ತಂಡ ರಚಿಸಿ ಅಥವಾ ಸಿಐಡಿಗೆ ವಹಿಸಿ ಸಮಗ್ರ ತನಿಖೆ ಮಾಡಿಸಲು ಮತ್ತು ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲು ಅವರು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.

ಎಸಿಎಫ್ ವಿರುದ್ಧ ಕ್ರಮಕ್ಕೂ ಸೂಚನೆ:

ಈ ಮಧ್ಯೆ ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಿ ಭೂಮಿ ಕಬಳಿಸುವವರ ವಿರುದ್ಧ ಪ್ರಕರಣ ದಾಖಲಿಸುವಂತೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗೆ ಚಿಕ್ಕಮಗಳೂರಿನ ಅಂದಿನ ಉಪ ವಿಭಾಗಾಧಿಕಾರಿ ಸೂಚಿಸಿದ್ದರೂ, ದೂರು ದಾಖಲಿಸಲು ವಿಳಂಬ ಮಾಡಿರುವ ಬಗ್ಗೆಯೂ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಈಶ್ವರ ಖಂಡ್ರೆ ಸೂಚಿಸಿದ್ದಾರೆ.

Related Posts

Leave a Reply

Your email address will not be published. Required fields are marked *