ಬೆಂಗಳೂರು: ಭಾರತೀಯ ಸಶಸ್ತ್ರ ಪಡೆ(ಐಎಎಫ್) ಅಧಿಕಾರಿಯೊಬ್ಬರಿಗೆ ನಗರದಲ್ಲಿ ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆ ಮಾಡಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಐಎಎಫ್ ಅಧಿಕಾರಿ ಶಿಲಾಧಿತ್ಯ ಬೋಸ್ ಅವರ ಪತ್ನಿ ಮಧುಮಿತಾ ದತ್ತ ನೀಡಿದ ದೂರಿನ ಮೇರೆಗೆ ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಸಿ.ವಿ.ರಾಮನ್ ನಗರದ ಗೋಪಾಲನ್ ಗ್ರ್ಯಾಂಡ್ ಮಾಲ್ ಬಳಿ ಕಾರಿನಲ್ಲಿ ಭಾನುವಾರ ಸಂಜೆ ಅಧಿಕಾರಿಯು ಪತ್ನಿಯೊಂದಿಗೆ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದಾಗ ಅಪರಿಚಿತರಿಬ್ಬರು ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾರೆ.
ಹಲ್ಲೆಗೊಳಾಗದ ಅಧಿಕಾರಿಯ ಮುಖ ಮತ್ತು ತಲೆಗೆ ಗಾಯಗಳಾಗಿದ್ದು, ರಕ್ತ ಹರಿದಿದೆ. ತಮ್ಮ ಮೇಲೆ ಆದ ಹಲ್ಲೆ ಕುರಿತು ವಿವರಿಸಿ ಅಧಿಕಾರಿ ವಿಡಿಯೋ ಮಾಡಿದ್ದಾರೆ. ಈ ಘಟನೆಯು ವೈರಲ್ ಆಗಿ ವ್ಯಾಪಕ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಎಫ್‌ಐಆರ್ ದಾಖಲಾಗಿದೆ. ನಗರದ ಡಿಆರ್‌ಡಿಒ ಕಾಲೋನಿ ನಿವಾಸಿಯಾದ ಐಎಎಫ್ ಅಧಿಕಾರಿ ಶಿಲಾಧಿತ್ಯ ಬೋಸ್ ಅವರ ಪತ್ನಿ ಮಧುಮಿತಾ ಕೂಡ ಐಎಎಫ್‌ನ ಸ್ಕ್ಯಾಡ್ರನ್ ಲೀಡರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಹಲ್ಲೆಯಿಂದ ಮುಖ ಹಾಗೂ ಕತ್ತಿನ ಭಾಗದಿಂದ ರಕ್ತ ಸೋರುತ್ತಿರುವ ನಡುವೆಯೇ ವಿಡಿಯೋ ಮಾಡಿದ್ದ ಐಎಎಫ್ ಅಧಿಕಾರಿ, ನಾವು ಕಾರಿನಲ್ಲಿ ಹೋಗುವಾಗ ಬೈಕ್‌ನಲ್ಲಿ ಹಿಂದಿನಿಂದ ಬಂದ ಒಬ್ಬ ವ್ಯಕ್ತಿ ನಮ್ಮ ಕಾರನ್ನು ನಿಲ್ಲಿಸಿ, ಏಕಾಏಕಿ ಕನ್ನಡದಲ್ಲಿ ಅವಾಚ್ಯ ಶಬ್ದಗಳಿಂದ ಬೈಯಲು ಶುರು ಮಾಡಿದ. ಕಾರಿನ ಮೇಲಿನ ಸ್ಟಿಕ್ಕರ್ ನೋಡಿ ನೀವು ಡಿಆರ್‌ಡಿಒಗೆ ಸೇರಿದವರಾ? ಎಂದು ಕೇಳಿದೆ. ಈ ವೇಳೆ ನಾನು ಕೆಳಗಿಳಿದಾಗ, ವ್ಯಕ್ತಿಯೊಬ್ಬ ನನ್ನ ಮೇಲೆ ಬೈಕ್ ಕೀಯಿಂದ ಹಲ್ಲೆ ನಡೆಸಿದ್ದಾನೆ ಎಂದು ತಿಳಿಸಿದ್ದರು.
ಹಲ್ಲೆ ಮಾಡಿದ್ದ ವ್ಯಕ್ತಿ ಮತ್ತೆ ಒಂದು ಕಲ್ಲನ್ನು ಎತ್ತಿಕೊಂಡು ನನ್ನ ಕಾರಿಗೆ ಹೊಡೆಯಲು ಯತ್ನಿಸಿದ. ಅದು ನನ್ನ ತಲೆಗೆ ಬಡಿಯಿತು ಎಂದು ಅಧಿಕಾರಿ ಹೇಳಿದ್ದರು.
ಹಲ್ಲೆ ವೇಳೆ ನನ್ನ ಪತ್ನಿ ಪಕ್ಕದಲ್ಲೇ ಇದ್ದಿದ್ದರಿಂದ ಆಕೆ ನನ್ನನ್ನು ಅಲ್ಲಿಂದ ಕರೆದುಕೊಂಡು ಹೋದಳು. ಬಳಿಕ ಘಟನೆ ಬಗ್ಗೆ ನಾವು ದೂರು ನೀಡಲು ಹೋದಾಗ ಪೊಲೀಸರು ಸೂಕ್ತ ರೀತಿಯಲ್ಲಿ ಸ್ಪಂದಿಸಿಲ್ಲ ಎಂದು ಆರೋಪಿಸಿದ್ದರು.