Menu

ಕಂಡಕ್ಟರ್ ಮೇಲೆ ಹಲ್ಲೆ ಅತ್ಯಂತ ಖಂಡನೀಯ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸೂಚನೆ

laxmi hebbalkar

ಬೆಳಗಾವಿ: ಬೆಳಗಾವಿಯಲ್ಲಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನಿರ್ವಾಹಕನ ಮೇಲೆ ಹಲ್ಲೆ ಮಾಡಿರುವುದು ಖಂಡನೀಯ. ಸರ್ಕಾರಿ ನೌಕರನ ಮೇಲೆ ಹಲ್ಲೆ ಮಾಡಿದ ತಪ್ಪಿತಸ್ಥರಿಗೆ ಶಿಕ್ಷೆಯಾಗಲೇ ಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ಕುವೆಂಪುನಗರದ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿದ ಸಚಿವರು, ಘಟನೆ ನಡೆದ ತಕ್ಷಣವೇ ನಾನು ಪೊಲೀಸ್ ಅಧಿಕಾರಿಗಳನ್ನು ಸಂಪರ್ಕಿಸಿ, ಆರೋಪಿಗಳನ್ನು ಬಂಧಿಸುವಂತೆ ಸೂಚನೆ ನೀಡಿದೆ. ಬೆಳಗಾವಿಯಲ್ಲಿ ಭಾಷಾ ಸೌಹಾರ್ದತೆ ವೃದ್ಧಿಸುತ್ತಿದೆ, ನಾಡ ಪ್ರೇಮ ಪಸರಿಸುತ್ತಿದೆ. ಇದರ ಮಧ್ಯೆ ಸಮಾಜಘಾತುಕ ಕಿಡಿಗೇಡಿಗಳು ಭಾಷೆಯ ಹೆಸರಿನಲ್ಲಿ ಪುಂಡತನ ಮೆರೆಯುತ್ತಿರುವುದು ಅತ್ಯಂತ ಖಂಡನೀಯ ಎಂದರು.

ನಾವು ಎಲ್ಲರೂ ಸ್ವರಾಜ್ಯದ ಬಗ್ಗೆ ಮಾತನಾಡುತ್ತೇವೆ. ನಾವು ಮೊದಲಿಗೆ ಭಾರತೀಯರು, ಕನ್ನಡಿಗರು, ಕರ್ನಾಟಕದ ಸುವರ್ಣ ಮಹೋತ್ಸವನ್ನು ಅದ್ದೂರಿಯಾಗಿ ಅಚರಿಸಿದ್ದೇವೆ. ಸ್ವರಾಜ್ಯದ ಬಗ್ಗೆ ಮಾತನಾಡುವಾಗ ಕೆಲವೊಂದು ಪುಂಡರು ಬಂದು ರಾಜಕಾರಣದ ಬೇಳೆ ಬೇಯಿಸಿಕೊಳ್ಳಲು ಮುಂದಾಗಿರುವುದನ್ನು ಖಂಡಿಸುತ್ತೇನೆ ಎಂದು ಹೇಳಿದರು.

ನನ್ನ ಕ್ಷೇತ್ರದಲ್ಲಿ ಈ ಘಟನೆ ನಡೆದಿದ್ದು, ನಾವು ಭಾಷಾ ವಿವಾದವನ್ನೇ ಬೇರು ಸಮೇತ ಕಿತ್ತು ಹಾಕಿದ್ದೇವೆ. ನಮಗೆ ರಜೆ ದಿನಗಳು ಇವೆ. ಆದರೆ, ಸಾರಿಗೆ, ಆರೋಗ್ಯ, ಪೊಲೀಸ್ ಇಲಾಖೆ ನೌಕರರು ಹಬ್ಬದಿನಗಳಲ್ಲೂ ದುಡಿಯುತ್ತಾರೆ. ಇಂಥವರ ಮೇಲೆ ಹಲ್ಲೆ ಮಾಡಿರುವುದು ಖಂಡನೀಯ. ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದರು.

ಮೊದಲಿಗೆ ನಾವು ಭಾರತೀಯರು. ದೇಶ ಅಂತ ಬಂದರೆ ಎಲ್ಲರೂ ಒಂದೇ. ನಾವು ನಾವುಗಳೇ ಜಗಳವಾಡುವುದು ಬೇಡ. ಎಲ್ಲರಿಗೂ ಭಾಷಾ ಅಭಿಮಾನ ಇರುತ್ತದೆ. ಈ ಪ್ರಕರಣವನ್ನು ಇಲ್ಲಿಗೆ ನಿಲ್ಲಿಸೋಣ ಎಂದು ಹೇಳಿದರು.

ಕಂಡಕ್ಟರ್ ವಿರುದ್ಧ ಪೋಕ್ಸೋ ಪ್ರಕರಣ ದಾಖಲು ಸಂಬಂಧ ಪ್ರತಿಕ್ರಿಯಿಸಿದ ಸಚಿವರು, ಈ ಕುರಿತು ತನಿಖೆಯಿಂದ ಸತ್ಯಾಸತ್ಯತೆ ಹೊರಬರಲಿದೆ. ಕೆಳಹಂತದ ಅಧಿಕಾರಿಗಳಿಂದ ಕೆಲವು ತಪ್ಪುಗಳಾಗಿವೆ. ಈ ಸಂಬಂಧ ನಾನು ಈಗಾಗಲೇ ಗೃಹ ಸಚಿವರು, ಡಿಐಜಿ ಅವರೊಂದಿಗೆ ಮಾತನಾಡಿದ್ದು, ಸೂಕ್ತ ರೀತಿಯಲ್ಲಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡಿರುವೆ ಎಂದರು.

Related Posts

Leave a Reply

Your email address will not be published. Required fields are marked *