ನವದೆಹಲಿ: ಸೈಬರ್ ವಂಚನೆ ಜಾಲದ ಮೇಲೆ ನೆಲೆಗಳ ಮೇಲೆ ದಾಳಿ ನಡೆಸಿದ ಸ್ಥಳೀಯ ಪೊಲೀಸರು 105 ಭಾರತೀಯರು ಸೇರಿದಂತೆ 3000 ಮಂದಿಯನ್ನು ಬಂಧಿಸಿದ್ದಾರೆ.
ಕಾಂಬೋಡಿಯಾದಲ್ಲಿ ಕಳೆದ 15 ದಿನಗಳಲ್ಲಿ 138 ನೆಲೆಗಳ ಮೇಲೆ ದಾಳಿ ನಡೆಸಿದ ಸ್ಥಳೀಯ ಪೊಲೀಸರು 3000 ಮಂದಿಯನ್ನು ಬಂಧಿಸಿದ್ದಾರೆ. ಇದರಲ್ಲಿ 105 ಭಾರತೀಯರು ಹಾಗೂ 606 ಮಂದಿ ಮಹಿಳೆಯರು ಇದ್ದಾರೆ.
ಕಾಂಬೋಡಿಯಾ ಮತ್ತು ಭಾರತ ನಡುವೆ ಇತ್ತೀಚೆಗೆ ಉನ್ನತ ಮಟ್ಟದ ಸಭೆ ನಡೆದಿದ್ದು, ಸಭೆಯಲ್ಲಿ ಕಾಂಬೋಡಿಯಾದಿಂದ ಭಾರತೀಯ ನಾಗರಿಕರನ್ನು ಗುರಿಯಾಗಿಸಿ ನಡೆಸುತ್ತಿದ್ದ ಡಿಜಿಟಲ್ ಅರೆಸ್ಟ್ ಸೇರಿದಂತೆ ಸೈಬರ್ ದಾಳಿ ಮೂಲಕ ಕೋಟ್ಯಂತರ ರೂಪಾಯಿ ಸುಲಿಗೆ ಮಾಡುತ್ತಿದ್ದ ವಂಚಕರ ವಿರುದ್ಧ ಕ್ರಮ ಕೈಗೊಳ್ಳಲು ತೀರ್ಮಾನ ಕೈಗೊಳ್ಳಲಾಗಿತ್ತು.
ದಾಳಿಯ ವೇಳೆ ಭಾರತೀಯರು ಮಾತ್ರವಲ್ಲದೇ ಚೀನಾ, ವಿಯೆಟ್ನಾಂ, ಇಂಡೋನೇಷ್ಯಾ ಸೇರಿದಂತೆ ಹಲವು ರಾಷ್ಟ್ರಗಳ ಪ್ರಜೆಗಳು ಸೇರಿದ್ದಾರೆ. ದಾಳಿಯಲ್ಲಿ ವಂಚಕರ ಬಳಿ ಇದ್ದ ಲ್ಯಾಪ್ ಟಾಪ್, ಪೊಲೀಸ್ ಸಮವಸ್ತ್ರ, ನಕಲಿ ಐಡಿ ಕಾರ್ಡ್, ಡ್ರಗ್ಸ್, ಶಸ್ತ್ರಾಸ್ತ್ರ, ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬಂಧಿತ ಭಾರತೀಯರನ್ನು ಸ್ವದೇಶಕ್ಕೆ ಕರೆತರುವ ಪ್ರಯತ್ನವನ್ನು ಭಾರತ ಆರಂಭಿಸಿದೆ. ಕಾಂಬೊಡಿಯಾದಲ್ಲಿ ಕುಳಿತು ಭಾರತೀಯರನ್ನು ಸೈಬರ್ ಕ್ರೈಮ್ ಮೂಲಕ ವಂಚಿಸುತ್ತಿದ್ದ ಭಾರತೀಯರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
ಬಂಧಿತರಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಚೀನಾದವರು ಇದ್ದಾರೆ. ಚೀನಾದ 1028, ವಿಯೆಟ್ನಾಂನ 693, ಇಂಡೋನೇಷ್ಯಾದ 366, ಭಾರತೀಯರು 105, ಬಾಂಗ್ಲಾದೇಶ 101, ಥಾಯ್ಲೆಂಡ್ ನ 82, ಕೊರಿಯಾದ 57, ಪಾಕಿಸ್ತಾನದ 81, ನೇಪಾಳದ 13, ಮಲೇಷ್ಯಾದ ನಾಲ್ವರು ಅಲ್ಲದೇ ನೈಜಿರಿಯಾ, ಫಿಲಿಪ್ಪೆನ್ಸ್, ಉಗಾಂಡ, ಸಿಯಾರಾ ಲೆವೊನ್, ಲಾವೋಸ್, ಮಂಗೋಲಿಯಾ, ರಷ್ಯಾ ಮತ್ತು ಮ್ಯಾನ್ಮರ್ ಸೇರಿದಂತೆ ವಿವಿಧ ದೇಶಗಳ ಪ್ರಜೆಗಳು ಸಿಕ್ಕಿಬಿದ್ದಿದ್ದಾರೆ.