ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಜಾತಕದಲ್ಲಿ ಸಿಎಂ ಆಗುವ ಯೋಗವಿದೆ, ನವೆಂಬರ್ 26ರ ಬಳಿಕ ಅವರಿಗೆ ಮುಖ್ಯಮಂತ್ರಿ ಸ್ಥಾನ ಲಭಿಸಲಿದೆ. ಅವರು ಸಿಎಂ ಆಗೋದನ್ನು ಯಾರೂ ತಡೆಯಲಾಗದು ಎಂದು ಜ್ಯೋತಿಷಿ ಡಾ. ಬಿ.ಸಿ. ವೆಂಕಟೇಶ್ ಭವಿಷ್ಯ ಹೇಳಿದ್ದಾರೆ.
ಚಿಕ್ಕಮಗಳೂರು ಕೊಪ್ಪ ತಾಲೂಕಿನ ಪಂಚಲಿಂಗೇಶ್ವರ ಮಲಾಯಾಚಲ ಗೋವಂಶ ಆಶ್ರಮದ ವೇದಜ್ಞಾನಿ ಡಾ. ವೆಂಕಟೇಶ್ ಗುರೂಜಿಯವರು ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಜಾತಕ ಅಧ್ಯಯನದ ನಂತರ ಈ ಭವಿಷ್ಯ ನುಡಿದಿದ್ದಾರೆ. ಶಿವಕುಮಾರ್ ಜಾತಕದಲ್ಲಿ ಮುಖ್ಯಮಂತ್ರಿ ಆಗುವ ಸ್ಪಷ್ಟ ಯೋಗವಿದೆ. ಸಿಎಂ ಆಗುತ್ತಾರೆ, 2031ರವರೆಗೆ ಅವರು ರಾಜನಂತೆ ಆಡಳಿತ ಮಾಡುವ ಸಾಧ್ಯತೆ ಇದೆ ಎಂದು ಗುರೂಜಿ ತಿಳಿಸಿದ್ದಾರೆ.
ಒಂದೂವರೆ ವರ್ಷಗಳ ಹಿಂದೆ ಅವರಿಗೆ ಜಾತಕ ಪರಿಶೀಲನೆ ಮಾಡಿ ಮಂತ್ರಾಕ್ಷತೆ ನೀಡಿ ಬಂದಿದ್ದೇನೆ. ಡಿಕೆಶಿಗಾಗಿಯೇ ನಿತ್ಯ ದುರ್ಗಾ ಪಾರಾಯಣ ಮಾಡುತ್ತೇನೆ ಎಂದು ಹೇಳಿದರು. ಅವರು ಮುಖ್ಯಮಂತ್ರಿಯಾಗುವುದು ಖಂಡಿತ, ಜೊತೆಯಲ್ಲಿರುವ ಯಾರಾದರೂ ಮೋಸ ಮಾಡಿದರೆ ಮಾತ್ರ ತಾತ್ಕಾಲಿಕ ವ್ಯತ್ಯಯ ಉಂಟಾಗುವ ಸಾಧ್ಯತೆಯಿದೆ ಎಂದಿದ್ದಾರೆ.
ಕಾಂಗ್ರೆಸ್ನ ಕೆ. ರಾಜಣ್ಣ ಅವರು ನವೆಂಬರ್ನಲ್ಲಿ ಕ್ರಾಂತಿಯಾಗಲಿದೆ ಎಂದು ಹೇಳಿ ರಾಜ್ಯ ರಾಜಕೀಯ ವಲಯದಲ್ಲಿ ಬಹಳಷ್ಟು ಚರ್ಚೆ ಹುಟ್ಟು ಹಾಕಿದ್ದಾರೆ. ಬಿಜೆಪಿ ಮುಖಂಡರು ಕೂಡ ನವೆಂಬರ್ನಲ್ಲಿ ಮುಖ್ಯಮಂತ್ರಿ ಬದಲಾವಣೆಯಾಗಲಿದ್ದಾರೆ ಎಂದು ಹೇಳಿಕೊಂಡು ಬರುತ್ತಿದ್ದಾರೆ.