ಕೋಲಾರದ ಶ್ರೀನಿವಾಸಪುರ ತಾಲೂಕಿನ ಉಪ್ಪಾರಪಲ್ಲಿ ಗ್ರಾಮದಲ್ಲಿ ಅಸ್ಸಾಂ ಮೂಲದ ದಂಪತಿ ಏಳು ದಿನಗಳ ಹೆಣ್ಣು ಶಿಶುವನ್ನು ಬಿಟ್ಟು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೆಹಮಾನ್ (28) ಮತ್ತು ಪತ್ನಿ ಫರಿಜಾ (22) ಆತ್ಮಹತ್ಯೆ ಮಾಡಿಕೊಂಡ ದಂಪತಿ ಎಂದು ಗುರುತಿಸಲಾಗಿದೆ.
ದಂಪತಿ ಅಸ್ಸಾಂನವರಾಗಿದ್ದು, ಕೆಲಸ ಅರಸಿ ಕರ್ನಾಟಕಕ್ಕೆ ಬಂದಿದ್ದರು. ಹದಿನೈದು ದಿನಗಳ ಹಿಂದೆ ಶ್ರೀನಿವಾಸರೆಡ್ಡಿ ಎಂಬವರಿಗೆ ಸೇರಿದ ಕೋಳಿ ಫಾರಂನಲ್ಲಿ ಕೆಲಸಕ್ಕೆ ಸೇರಿದ್ದರು. ಏಳು ದಿನಗಳ ಹಿಂದೆ ಫರಿಜಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು.
ಳಿ ಫಾರಂನ ಆವರಣದಲ್ಲಿಯೇ ವಾಸವಿದ್ದ ದಂಪತಿ, ಮಗುವಿನೊಂದಿಗೆ ಸಂತೋಷವಾಗಿದ್ದರು. ರೆಹಮಾನ್ ಮತ್ತು ಫರಿಜಾ ಇದ್ದಕ್ಕಿದ್ದಂತೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೋಳಿ ಫಾರಂನಲ್ಲಿ ಕೆಲಸಗಾರರು ಗಮನಿಸಿದಾಗ ದಂಪತಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು, ಕೂಡಲೇ ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ಮಾಡಿದರೂ ಅಷ್ಟರಲ್ಲಾಗಲೇ ಮೃತಪಟ್ಟಿದ್ದರು. ಮಗುವನ್ನು ಸ್ಥಳೀಯ ಮಕ್ಕಳ ಕಲ್ಯಾಣ ಸಮಿತಿ ಅಥವಾ ಸಂಬಂಧಿಕರಿಗೆ ಹಸ್ತಾಂತರಿಸುವ ನಿಟ್ಟಿನಲ್ಲಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ದಂಪತಿಯ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಆರ್ಥಿಕ ಸಮಸ್ಯೆಗಳು, ಕೌಟುಂಬಿಕ ಒತ್ತಡ ಅಥವಾ ವೈಯಕ್ತಿಕ ಸಮಸ್ಯೆಗಳು ದುರಂತಕ್ಕೆ ಕಾರಣವಾಗಿರಬಹುದೇ ಎಂಬುದರ ಕುರಿತು ರಾಯಲ್ನಾಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಮಹಿಳೆಯ ಕತ್ತು ಕೊಯ್ದು ಹತ್ಯೆ
ಹಾವೇರಿ ರಾಣೆಬೆನ್ನೂರು ತಾಲೂಕಿನಲ್ಲಿ ಒಂಟಿ ಮನೆಯಲ್ಲಿದ್ದ 45 ವರ್ಷದ ಮಹಿಳೆಯ ಕತ್ತು ಕೊಯ್ದು ಕೊಲೆ ಮಾಡಲಾಗಿದೆ. ಬ್ಯಾಡಗಿ ತಾಲೂಕಿನ ಕೆರೂಡಿ ಗ್ರಾಮದ ನಿವಾಸಿ ಲಲಿತಾ ಕರಬಸಪ್ಪ ಬ್ಯಾಡಗಿ (45) ಕೊಲೆಯಾದವರು.
ಲಲಿತಾ ಮಕ್ಕಳೊಂದಿಗೆ ಮನೆಯಲ್ಲಿ ವಾಸವಾಗಿದ್ದರು. ಕೊಲೆಯ ನಿಖರ ಕಾರಣ ಪತ್ತೆಯಾಗಿಲ್ಲ, ಪೊಲೀಸರು ತೀವ್ರ ತನಿಖೆ ಕೈಗೊಂಡು ಆರೋಪಿಗಾಗಿ ಶೋಧ ನಡೆಸುತ್ತಿದ್ದಾರೆ.


