Menu

ಕಾರವಾರದಲ್ಲಿ ಏಷ್ಯಾದಲ್ಲೇ ಅತಿ ದೊಡ್ಡ ನೌಕಾನೆಲೆ ಆರಂಭ

ಕಾರವಾರ:ಹಿಂದೂ ಮಹಾಸಾಗರಕ್ಕೆ ಅಂಟಿಕೊಂಡಿರುವ 9 ದೇಶಗಳ ಜೊತೆ ಮೈತ್ರಿ ಮಾಡಿಕೊಂಡು ನೌಕಾಪಡೆಯಲ್ಲಿ ವಿನೂತನ ಕಾರ್ಯಾಚರಣೆಯು ಭಾನುವಾರದಿಂದ ಆರಂಭವಾಗಿದೆ.

ಜಿಲ್ಲೆಯ ಕದಂಬ ನೌಕಾನೆಲೆ, ಎಷ್ಯಾದಲ್ಲೇ ಅತಿದೊಡ್ಡ ನೌಕಾನೆಲೆ ಮಾಡುವ ಗುರಿಯನ್ನು ಹೊಂದಿರುವ ಕೇಂದ್ರ ಸರ್ಕಾರ, ಸಾವಿರಾರು ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುತ್ತಿದೆ. ರಾಷ್ಟ್ರೀಯ ಸಾಗರ ದಿನವಾದ ಭಾನುವಾರ ಕದಂಬ ನೌಕಾ ನೆಲೆಯಲ್ಲಿ ಐಓಎಸ್ ಸಾಗರ ಹೆಸರಿನ ಕಾರ್ಯಾಚರಣೆಗೆ ರಕ್ಷಣಾ ಸಚಿವ ರಾಜನಾಥ ಸಿಂಗ್‌ ಅವರು ಚಾಲನೆ ನೀಡಿದ್ದಾರೆ.

ಕೀನ್ಯಾ, ಮಡ್ಗಾಸ್ಕರ್‌, ಮಾಲ್ಡೀವ್ಸ್‌, ಮಾರಿಶಸ್‌, ಮೊಝಾಂಬಿಕ್‌, ಶ್ರೀಲಂಕಾ, ದಕ್ಷಿಣ ಆಫ್ರಿಕಾ, ಕೊಮೊರೋಸ್‌, ಸೇಂಚ್‌ಹೆಲ್ಸ್‌ ಹೀಗೆ 9 ದೇಶಗಳ ಜೊತೆ ಮೈತ್ರಿ ಮಾಡಿಕೊಂಡಿರುವ ಭಾರತ, ತಮ್ಮ ದೇಶದ ರಕ್ಷಣೆಯ ಜೊತೆಗೆ ಬೇರೆ ದೇಶದ ರಕ್ಷಣೆಗೂ ಮುಂದಾಗಿ ಐಓಎಸ್ ಸಾಗರ ಕಾರ್ಯಾಚರಣೆಯನ್ನು ಆರಂಭಿಸಿದೆ.

ಐಎನ್ ಎಸ್ ಸುನೈನಾ ಎಂಬ ಹಡಗು ಹಿಂದೂ ಮಹಾಸಾಗರದಲ್ಲಿ ಕಾರ್ಯಾಚರಣೆ ಮಾಡಲಿರುವ ವಿಶೇಷ ಅಂಡರ್ ಪೆಟ್ರೋಲಿಂಗ್ ಯುದ್ದ ನೌಕೆ ಆಗಿದೆ. ಈ ನೌಕೆಯಲ್ಲಿ ಒಟ್ಟು 120 ಕ್ಕೂ ಹೆಚ್ಚು ಸಿಬ್ಬಂದಿಗಳು ಕಾರ್ಯ ನಿರ್ವಹಿಸಿತ್ತಿದ್ದು, ಆ ಪೈಕಿ 9 ದೇಶಗಳ 44 ಸಿಬ್ಬಂದಿಗಳು ಮತ್ತು ಭಾರತ ದೇಶದ 76 ಸಿಬ್ಬಂದಿಗಳು ಕಾರ್ಯನಿರ್ವಹಿಸಲಿದ್ದಾರೆ.

ಭಾರತದಿಂದ ಕ್ರಾಂತಿ:

ಈ ಸಂದರ್ಭದಲ್ಲಿ ಮಾತನಾಡಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಇಂಡಿಯನ್ ಒಸಿಯನ್ ರೀಜನ್ ಕೇವಲ ರಕ್ಷಣೆಗೆ ಸಿಮಿತವಾಗಿಲ್ಲ. ಪ್ರವಾಸೋದ್ಯಮ, ವ್ಯಾಪಾರ ಉದ್ಯೋಗ ಸೇರಿದಂತೆ ಅನೇಕ ರಂಗದಲ್ಲಿ ವ್ಯಾಪಿಸಿದೆ.

ಈ ಕಾರ್ಯಾಚರಣೆ ಮೂಲಕ ಕೇವಲ ದೇಶದ ರಕ್ಷಣೆಗೆ ಮಾತ್ರ ಸೀಮಿತವಾಗಿಲ್ಲ. ಇತರ ದೇಶದ ಜೊತೆಗೆ ಒಳ್ಳೆಯ ಬಾಂದವ್ಯ ವೃದ್ಧಿ ಆಗುತ್ತದೆ. ಸಮುದ್ರ ಕಾರ್ಯವ್ಯಾಪಿ ಕ್ಷೇತ್ರದಲ್ಲಿ ಭಾರತ ಬಹಳಷ್ಟು ಕ್ರಾಂತಿ ಮಾಡುತ್ತಿದೆ. ಭಾರತ ಅಷ್ಟೆ ಅಲ್ಲ ಬೇರೆ ದೇಶದ ರಕ್ಷಣೆಗೂ ಬಹುಮುಖ್ಯ ಪಾತ್ರ ವಹಿಸಿದೆ. ಬೇರೆ ದೇಶಗಳಿಗೆ ರಕ್ಷಣೆ ವಿಚಾರದಲ್ಲಿ ನಮ್ಮ ದೇಶ ಮೊದಲು. ಬೇರೆ ದೇಶಗಳ ಜೊತೆಗೆ ನಮ್ಮ ನೌಕಾ ಸೇನೆ ಅಭಿವೃದ್ಧಿ ಆಗಬೇಕೆಂಬುವುದು ನಮ್ಮ ಆಶಯ ಎಂದಿದ್ದಾರೆ.

ಬಾಂಧವ್ಯ, ಸಹಕಾರ ವೃದ್ಧಿ:

ಒನ್‌ ಓಶನ್‌ ಒನ್‌ ಮಿಷನ್‌ ಎಂಬ ಉಪಕ್ರಮದಡಿ ಭಾರತ ಈ ಹೆಜ್ಜೆ ಇಟ್ಟಿದ್ದು, ಹಿಂದು ಮಹಾಸಾಗರ ವ್ಯಾಪ್ತಿಯ ಭಾರತ ಮಿತ್ರ ರಾಷ್ಟ್ರಗಳ ನಡುವೆ ಸಮುದ್ರ ವ್ಯವಹಾರದ ಬಾಂಧವ್ಯ ವೃದ್ಧಿ, ಪರಸ್ಪರ ಸಹಕಾರ ವೃದ್ಧಿ ಮಾಡಿಕೊಳ್ಳುವ ಜತೆಗೆ ಹಿಂದು ಮಹಾಸಾಗರದ ರಕ್ಷಣೆ ಅದರ ಸುತ್ತಲಿನ ಬಳಕೆದಾರ ರಾಷ್ಟ್ರಗಳಿಗೆ ಸೇರಿದ್ದು ಎಂಬ ಸಂದೇಶವನ್ನು ವಿಶ್ವಕ್ಕೆ ಸಾರಲು ಭಾರತ ಹೊರಟಿದೆ ಎಂದು ಹೇಳಿದರು

ಪ್ರಧಾನಿ ಹೊಗಳಿದ ಕಾಗೇರಿ:

ಈ ವೇಳೆ ಪ್ರಧಾನಿ ನರೇಂದ್ರ ಮೋದಿಯವರನ್ನ ಹಾಡಿ ಹೊಗಳಿದ ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ದೇಶದ ರಕ್ಷಣೆಯ ವಿಚಾರದಲ್ಲಿ ಹಾಗೂ ಬೇರೆ ದೇಶಗಳ ಜೊತೆಗೆ ಒಳ್ಳೆಯ ಸಂಬಂಧವನ್ನ ವೃದ್ದಿಸಿ ಭಾರತವನ್ನ ವಿಶ್ವ ಗುರು ಮಾಡುವ ನಿಟ್ಟಿನಲ್ಲಿ ನಿರಂತರ ಕಾರ್ಯ ನಡೆದಿದೆ.‌ ಅದರ ಭಾಗವಾಗಿ ಕಾರವಾರದ ಕದಂಬ ನೌಕಾನೆಲೆಯಿಂದ ಐತಿಹಾಸಿಕ ಐಎನ್ ಎಸ್ ಸುನೈನಾ ಎಂಬ ಹಡಗಿನ ಮೂಲಕ 9 ದೇಶಗಳ ಜೊತೆಗೆ ರಕ್ಷಣೆಗಾಗಿ ಕೈ ಜೊಡಿಸಿದೆ. ಅಲ್ಲದೆ ದೇಶದ ವ್ಯಾಪಾರ ವ್ಯವಹಾರ ಹಾಗೂ ಪ್ರವಾಸೋದ್ಯಮಕ್ಕೂ ಇದು ಪುಷ್ಠಿ ನೀಡಲಿದೆ ಎಂದು ತಿಳಿಸಿದರು.

ಎಷ್ಯಾದಲ್ಲೇ ಅತಿ ದೊಡ್ಡ ನೌಕಾ ನೆಲೆ ಮಾಡುವ ಗುರಿ ಹೊಂದಿರುವ ಭಾಗವಾಗಿ‌, ಇಂದು ಸುಮಾರು 1900 ಕೋಟಿ ರೂಪಾಯಿಯ ಯೋಜನೆಗೆ ರಕ್ಷಣಾ ಸಚಿವ ಚಾಲನೆ ನೀಡಿದ್ದಾರೆ. ಅಲ್ಲದೆ ಈ ನೌಕಾ ನೆಲೆ ಇನ್ನಷ್ಟು ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಹಿರಿಯ ಅಧಿಕಾರಿಗಳ ಜೊತೆ ವಿಶೇಷ ಸಭೆ ಮಾಡಲಾಗಿದೆ.

Related Posts

Leave a Reply

Your email address will not be published. Required fields are marked *