ರಾತ್ರಿ ಕರ್ತವ್ಯ ಮುಗಿಸಿ ಬೆಳಗಿನ ಜಾವ ಮನೆಗೆ ಬಂದ ಎಎಸ್‌ಐವೊಬ್ಬರು ಹೃದಯಾಘಾತದಿಂದ ಕುಸಿದು ಮೃತಪಟ್ಟಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ.
ಸಂತೇಮರಹಳ್ಳಿ ಪೊಲೀಸ್ ಠಾಣೆಯ ಎಎಸ್‌ಐ ನಾಗನಾಯಕ ಹೃದಯಾಘಾತದಿಂದ ಮೃತಪಟ್ಟವರು. ನಾಗನಾಯಕ ರಾತ್ರಿ ಡ್ಯೂಟಿ ಮುಗಿಸಿ ಚಾಮರಾಜ ನಗರದ ಪೊಲೀಸ್ ಗೃಹಕ್ಕೆ ಬೆಳಗ್ಗೆ ಬಂದಿದ್ದರು. ಹಾಗೆ ಬಂದವರು ಏಕಾಏಕಿ ಕುಸಿದು ಬಿದ್ದಿದ್ದಾರೆ. ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಅವರು ಅಸು ನೀಗಿದ್ದಾರೆ.
ಆಸ್ತಿಗಾಗಿ ಮಗನಿಂದ ತಾಯಿ ಮೇಲೆ ಹಲ್ಲೆ
ಮುಳಬಾಗಿಲು ತಾಲೂಕಿನ ದೇವರಾಯಸಮುದ್ರ ಗ್ರಾಮದಲ್ಲಿ ಆಸ್ತಿ ಮತ್ತು ಹಣಕ್ಕಾಗಿ ಮಗನೊಬ್ಬ ತಾಯಿಯ ಮೇಲೆಯೇ ದೊಣ್ಣೆಯಿಂದ ಭೀಕರವಾಗಿ ಹಲ್ಲೆ ನಡೆಸಿದ್ದಾನೆ.
ದೇವರಾಯಸಮುದ್ರದ ಸುಬ್ರಮಣ್ಯಂ ಎಂಬಾತ ತಾಯಿ ನಾರಾಯಣಮ್ಮ ಮೇಲೆ ಹಲ್ಲೆ ಮಾಡಿದ್ದಾನೆ. ತಾಯಿಯ ಹೆಸರಿನಲ್ಲಿರುವ ಜಮೀನು, ಮನೆ ಹಾಗೂ ಫ್ಲೋರ್ ಮಿಲ್ ತನ್ನ ಹೆಸರಿಗೆ ವರ್ಗಾಯಿಸಬೇಕು ಎಂದು ಪೀಡಿಸುತ್ತಿದ್ದ ಸುಬ್ರಮಣ್ಯಂ, ತಾಯಿಯನ್ನು ಎಳೆದಾಡಿ ದೊಣ್ಣೆಯಿಂದ ಹಲ್ಲೆ ಮಾಡಿರುವ ದೃಶ್ಯಗಳು ಮನೆಯಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.
ನಾರಾಯಣಮ್ಮ ರಕ್ಷಿಸಲು ಬಂದ ನಾದಿನಿ ಸ್ವಾತಿ ಎಂಬವರ ಮೇಲೆಯೂ ಸುಬ್ರಮಣ್ಯಂ ಹಲ್ಲೆ ನಡೆಸಿದ್ದಾನೆ. ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.


