ಮುಂಬೈ: ಸ್ಪಿನ್ನರ್ ಅಶ್ವಿನ್ ಕುಮಾರ್ ಮತ್ತು ರಿಯಾನ್ ರಿಕಲ್ಟನ್ ಸಿಡಿಲಬ್ಬರದ ಅರ್ಧಶತಕದ ನೆರವಿನಿಂದ ಮುಂಬೈ ಇಂಡಿಯನ್ಸ್ ತಂಡ ಐಪಿಎಲ್ ಟಿ-20 ಪಂದ್ಯದಲ್ಲಿ 8 ವಿಕೆಟ್ ಗಳಿಂದ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಮಣಿಸಿದೆ.
ವಾಂಖೇಡೆ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೆಕೆಆರ್ ತಂಡ 16.2 ಓವರ್ ಗಳಲ್ಲಿ 116 ರನ್ ಗಳ ಕಳಪೆ ಮೊತ್ತಕ್ಕೆ ಆಲೌಟ್ ಮಾಡಿದ ಮುಂಬೈ ಇಂಡಿಯನ್ಸ್ 12.5 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡು ಜಯಭೇರಿ ಬಾರಿಸಿತು.
ಸುಲಭ ಗುರಿ ಬೆಂಬತ್ತಿದ ಮುಂಬೈ ಇಂಡಿಯನ್ಸ್ ತಂಡ ರಿಯಾನ್ ರಿಕಲ್ಟನ್ 41 ಎಸೆತಗಳಲ್ಲಿ 4 ಬೌಂಡರಿ ಮತ್ತು 5 ಸಿಕ್ಸರ್ ಸಹಾಯದಿಂದ 62 ರನ್ ಸಿಡಿಸಿ ತಂಡಕ್ಕೆ ಸುಲಭ ಗೆಲುವು ತಂದುಕೊಟ್ಟರು. ರೋಹಿತ್ ಶರ್ಮ (13), ವಿಲ್ ಜಾಕ್ಸ್ (16) ಮತ್ತು ಸೂರ್ಯಕುಮಾರ್ ಯಾದವ್ (ಅಜೇಯ 27 ರನ್, 9 ಎಸೆತ, 3 ಬೌಂಡರಿ, 2 ಸಿಕ್ಸರ್) ಕಿರು ಕಾಣಿಕೆ ನೀಡಿದರು.
ಮಿಂಚಿದ ಅಶ್ವಿನ್
ಹೊಡಿಬಡಿ ಆಟಕ್ಕೆ ಮುಂದಾದ ಕೆಕೆಆರ್ ಮುಂಬೈನ ಶಿಸ್ತಿನ ದಾಳಿಗೆ ತತ್ತರಿಸಿ ದೊಡ್ಡ ಮೊತ್ತ ಕಲೆಹಾಕುವಲ್ಲಿ ವಿಫಲವಾಯಿತು. ಆರಂಭದಿಂದಲೇ ಸತತವಾಗಿ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದ ಕೆಕೆಆರ್ ಬ್ಯಾಟ್ಸ್ ಮನ್ ಗಳು ಮುಗ್ಗರಿಸಿದರು.
ಮೊದಲ ಪಂದ್ಯದ ಮೊದಲ ಎಸೆತದಲ್ಲೇ ಕ್ಯಾಚ್ ಹಾಗೂ ಮೊದಲ ಎಸೆತದಲ್ಲೇ ವಿಕೆಟ್ ಹಾಗೂ ಮೊದಲ ಪಂದ್ಯದಲ್ಲೇ 4 ವಿಕೆಟ್ ಪಡೆಯುವ ಮೂಲಕ ಅಶ್ವಿನ್ ಮಿಂಚಿದರು. ದೀಪಕ್ ಚಾಹರ್ 2 ಹಾಗೂ ಉಳಿದ ಬೌಲರ್ ಗಳು ತಲಾ 1 ವಿಕೆಟ್ ಗಳಿಸಿದರು.
ಕೆಕೆಆರ್ ಪರ ರಘುವಂಶಿ 16 ಎಸೆತಗಳಲ್ಲಿ 3 ಬೌಂಡರಿ ಮತ್ತು 1 ಸಿಕ್ಸರ್ ಸಹಾಯದಿಂದ 26 ರನ್ ಬಾರಿಸಿ ವೈಯಕ್ತಿಕ ಗರಿಷ್ಠ ಸಾಧನೆ ಮಾಡಿದರೆ, ರಮಣದೀಪ್ ಸಿಂಗ್ 12 ಎಸೆತಗಳಲ್ಲಿ 1 ಬೌಂಡರಿ ಮತ್ತು 2 ಸಿಕ್ಸರ್ ಸೇರಿದ 22 ರನ್ ಗಳಿಸಿದರು. ರಿಂಕು ಸಿಂಗ್ (17) ಮತ್ತು ನಾಯಕ ಅಜಿಂಕ್ಯ ರಹಾನೆ (11) ಎರಡಂಕಿಯ ಮೊತ್ತ ದಾಟಿದ್ದಕ್ಕೆ ಸಮಾಧಾನ ಹೊಂದಿದರು.