ವಿಶಾಖಪಟ್ಟಣ: ಬಾಲಂಗೋಚಿ ಬ್ಯಾಟ್ಸ್ ಮನ್ ಗಳು ತೋರಿದ ಅಭೂತಪೂರ್ವ ಹೋರಾಟದಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸೋಲಿನ ದವಡೆಯಿಂದ ಗೆಲುವು ಕಸಿದುಕೊಂಡು ಬೀಗಿದರೆ, ಗೆದ್ದೇ ಬಿಟ್ಟೆವು ಎಂದು ಬೀಗುತ್ತಿದ್ದ ಲಕ್ನೋ ಸೂಪರ್ ಜೈಂಟ್ಸ್ 1 ವಿಕೆಟ್ ನಿಂದ ಸೋಲುಂಡಿದೆ.
ವಿಶಾಖಪಟ್ಟಣದಲ್ಲಿ ಸೋಮವಾರ ನಡೆದ ಐಪಿಎಲ್ ಟಿ-20 ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 209 ರನ್ ಗಳಿಸಿದರೆ, ಡೆಲ್ಲಿ ಕ್ಯಾಪಿಟಲ್ಸ್ ತಂಡ 3 ಎಸೆತಗಳು ಬಾಕಿ ಇರುವಂತೆಯೇ 9 ವಿಕೆಟ್ ಕಳೆದುಕೊಂಡು ಜಯಭೇರಿ ಬಾರಿಸಿತು. ಇದು ಡೆಲ್ಲಿ ಕ್ಯಾಪಿಟಲ್ಸ್ ಐಪಿಎಲ್ ಇತಿಹಾಸದಲ್ಲೇ ಅತೀ ದೊಡ್ಡ ಮೊತ್ತ ಚೇಸ್ ಮಾಡಿದ ದಾಖಲೆ ಬರೆಯಿತು.
ಕಠಿಣ ಗುರಿ ಬೆಂಬತ್ತಿದ ಡೆಲ್ಲಿ ತಂಡ 65 ರನ್ ಗೆ 5 ವಿಕೆಟ್ ಕಳೆದುಕೊಂಡು ಹೀನಾಯ ಸೋಲಿನತ್ತ ಮುಖ ಮಾಡಿತ್ತು. ಆದರೆ ಅಶುತೋಷ್ ಶರ್ಮ ಕೊನೆಯವರೆಗೂ ನಿಂತು ಹೋರಾಡಿ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟರು. 7ನೇ ಕ್ರಮಾಂಕದಲ್ಲಿ ಆಡಲು ಬಂದ ಅಶುತೋಷ್ ಶರ್ಮ 31 ಎಸೆತಗಳಲ್ಲಿ 5 ಬೌಂಡರಿ ಮತ್ತು 5 ಸಿಕ್ಸರ್ ಸೇರಿದಂತೆ 66 ರನ್ ಬಾರಿಸಿ ಅಜೇಯರಾಗಿ ಉಳಿದರು.
ಅಶುತೋಷ್ ಗೆ ಉತ್ತಮ ಬೆಂಬಲ ನೀಡಿದ ತ್ರಿಸ್ಟನ್ ಸ್ಟಬ್ಸ್ 22 ಎಸೆತಗಳಲ್ಲಿ 1 ಬೌಂಡರಿ ಮತ್ತು 3 ಸಿಕ್ಸರ್ ಒಳಗೊಂಡ 34 ರನ್ ಬಾರಿಸಿದ್ದೂ ಅಲ್ಲದೇ 48 ರನ್ ಜೊತೆಯಾಟ ನಿಭಾಯಿಸಿದರು. ನಂತರ ವಿಪ್ರಾಜ್ ನಿಗಮ್ 39 ರನ್ ಬಾರಿಸಿದ್ದೂ ಅಲ್ಲದೇ 7ನೇ ವಿಕೆಟ್ ಗೆ 55 ರನ್ ಜೊತೆಯಾಟ ನಿಭಾಯಿಸಿದರು.
ಪೂರನ್-ಮಾರ್ಷ್ ಮಿಂಚಿನ ಜೊತೆಯಾಟ
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಗುಜರಾತ್ ಸೂಪರ್ ಜೈಂಟ್ಸ್ ತಂಡ ಆರಂಭಿಕ ಮಿಚೆಲ್ ಮಾರ್ಷ್ ಮತ್ತು ನಿಕೊಲಸ್ ಪೂರನ್ ಸಿಡಿಲಬ್ಬರದ ಆಟದಿಂದ ಬೃಹತ್ ಮೊತ್ತ ದಾಖಲಿಸಿತು.
ಆರಂಭದಿಂದಲೇ ಹೊಡಿಬಡಿ ಆಟಕ್ಕೆ ಮುಂದಾದ ಏಡ್ರಿಯನ್ ಮರ್ಕರಂ (15) ಬೇಗನೆ ನಿರ್ಗಮಿಸಿದರು. ನಂತರ ಜೊತೆಯಾದ ಮಿಚೆಲ್ ಮಾರ್ಷ್ ಮತ್ತು ಎರಡನೇ ಕ್ರಮಾಂಕದಲ್ಲಿ ಬಡ್ತಿ ಪಡೆದು ಬಂದ ನಿಕೊಲಸ್ ಪೂರನ್ ಎರಡನೇ ವಿಕೆಟ್ ಗೆ 87 ರನ್ ಜೊತೆಯಾಟದಿಂದ ತಂಡವನ್ನು ಬೃಹತ್ ಮೊತ್ತದತ್ತ ಮುನ್ನಡೆಸಿದರು.
ಮಾರ್ಷ್ 36 ಎಸೆತಗಳಲ್ಲಿ 6 ಬೌಂಡರಿ ಮತ್ತು 6 ಸಿಕ್ಸರ್ ನೆರವಿನೊಂದಿಗೆ 72 ರನ್ ಚಚ್ಚಿದರೆ, ಪೂರನ್ 30 ಎಸೆತಗಳಲ್ಲಿ 6 ಬೌಂಡರಿ ಮತ್ತು 7 ಸಿಕ್ಸರ್ ನೊಂದಿಗೆ 75 ರನ್ ಚಚ್ಚಿದರು.
ನಂತರ ಡೆಲ್ಲಿ ಬೌಲರ್ ಗಳು ನೀಡಿದ ತಿರುಗೇಟಿನಿಂದ ತತ್ತರಿಸಿದ ಲಕ್ನೋ ನಾಟಕೀಯ ಕುಸಿತ ಅನುಭವಿಸಿತು. ಇದರಿಂದ ತಂಡದ ರನ್ ವೇಗದಲ್ಲಿ ಕುಸಿತ ಉಂಟಾಯಿತು. ಡೇವಿಡ್ ಮಿಲ್ಲರ್ 19 ಎಸೆತಗಳಲ್ಲಿ 1 ಬೌಂಡರಿ ಮತ್ತು ಕೊನೆಯ ಓವರ್ ನ ಕೊನೆಯ 2 ಎಸೆತಗಳಲ್ಲಿ ಸತತ ಸಿಕ್ಸರ್ ಸೇರಿದಂತೆ 27 ರನ್ ಬಾರಿಸಿ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು.
ಮಿಚೆಲ್ ಸ್ಟಾರ್ಕ್ 3 ವಿಕೆಟ್ ಕಿತ್ತರೆ, ಕುಲದೀಪ್ ಯಾದವ್ 2 ಮತ್ತು ವಿಪ್ರಾಜ್ ನಿಗಮ್, ಮುಖೇಶ್ ಕುಮಾರ್ ತಲಾ 1 ವಿಕೆಟ್ ಗಳಿಸಿದರು.