ಬೆಂಗಳೂರಿನ ಕಸವನ್ನು ದೊಡ್ಡಬಳ್ಳಾಪುರಕ್ಕೆ ನಿಯಮಬಾಹಿರವಾಗಿ ಸಾಗಿಸಲಾಗುತ್ತಿದೆ ಎನ್ನುವ ಬಿಜೆಪಿ ಶಾಸಕರ ಆರೋಪಕ್ಕೆ ಸಂಭಂಧಿಸಿದಂತೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದರು. ಎಲ್ಲಾ ಶಾಸಕರು ಕ್ಷೇತ್ರಕ್ಕೆ ಅನುದಾನ ಬೇಕೆಂದು ಆಕ್ಸಿಡೆಂಟ್ ವಿಚಾರ ಮುಂದಿಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡ್ತಿದ್ದಾರೆ. ಎಲ್ಲರೂ ಗೌರವದಿಂದ ಇರಲ್ಲ ಅಂದ್ರೆ ಕರುಣೆ ತೋರಿಸಲ್ಲ. ಎಸ್ಮಾ ಅಡಿಯಲ್ಲಿ ಕಾನೂನು ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದರು.
ಮಹದೇವಪುರದಲ್ಲಿ ಕಸ ವಿಲೇವಾರಿಗೆ ಅಡ್ಡಿಪಡಿಸಿರುವ ಬಗ್ಗೆ ಕೇಳಿದಾಗ ಎಲ್ಲಾದರೂ ಒಂದು ಕಡೆ ಒಂದು ಕಡೆ ಹಾಕಬೇಕಲ್ವಾ, ಅಲ್ಲೂ ಬೇಡ, ಇಲ್ಲೂ ಬೇಡ ಅಂದರೆ ಎಲ್ಲಿಗೆ ಹೋಗಬೇಕು, ಕಸ ಅಶೋಕ್ ಮನೆಗೆ, ವಿಜಯೇಂದ್ರ ಮನೆಗೆ ಅಥವಾ ಬಿಜೆಪಿ ಆಫೀಸಿಗೆ ಹೋಗಬೇಕು. ನಿನ್ನೆ ಲಿಂಬಾವಳಿ ಪ್ರತಿಭಟನೆ ಮಾಡಿದ್ದಾರೆ, ಇವತ್ತು ದೊಡ್ಡಬಳ್ಳಾಪುರ ಎಂಎಲ್‌ಎ ಮಾಡಿದ್ದಾರೆ. ತಮ್ಮ ಕ್ಷೇತ್ರಕ್ಕೆ ಅನುದಾನ ಬೇಕು ಎಂದು ಬ್ಲ್ಯಾಕ್ ಮೇಲ್ ಮಾಡ್ತಿದ್ದಾರೆ. ಇವರು ಯಾರಿಗೆ ಎಂದು ಬ್ಲಾಕ್ ಮೇಲ್ ಮಾಡುತ್ತಿ ದ್ದಾರೆ , ಸುಮ್ಮನೆ ಇರಲಿಲ್ಲ ಅಂದರೆ ಅಶೋಕ್, ವಿಜಯೇಂದ್ರ ಮನೆ ಮುಂದೆನೇ ಕಸ ಹಾಕಿಸ್ತೇನೆ ಅಥವಾ ಬಿಜೆಪಿ ಕಚೇರಿ ಮುಂದೆಯೇ ಕಸ ಹಾಕಿಸ್ತೇನೆ ಎಂದರು. ದೊಡ್ಡಬಳ್ಳಾಪುರದಲ್ಲಿ ಅಪಘಾತ ಆಗಬಾರದಿತ್ತು, ಆದರೆ ಆಗಿ ಹೋಗಿದೆ. ಅದಕ್ಕೆ ಪೊಲೀಸರು ಸೂಕ್ತ ಕಾನೂನು ಕ್ರಮ ಕೈಗೊಳ್ಳುತ್ತಾರೆ ಎಂದು ಪ್ರಶ್ನೆ ಯೊಂದಕ್ಕೆ ಉತ್ತರಿಸಿದರು.
ಯಾವ ಉದ್ದೇಶಕ್ಕೆ ಶಾಸಕರು ಬ್ಲಾಕ್ ಮೇಲ್ ಮಾಡುತ್ತಿದ್ದಾರೆ ಎಂದು ಕೇಳಿದಾಗ, “ಕಸವನ್ನು ಎಲ್ಲಾದರೂ ಒಂದು ಕಡೆ ಹಾಕಬೇಕಲ್ಲವೇ? ಈ ಹಿಂದಿನಿಂದ ಏನು ಕೆಲಸ ಮಾಡಿಕೊಂಡು ಬರಲಾಗುತ್ತಿತ್ತೊ ಅದೇ ಕೆಲಸವನ್ನು ಈಗಲೂ ಮಾಡಿಕೊಂಡು ಬರಲಾಗುತ್ತಿದೆ. ಅವರ ಕ್ಷೇತ್ರಗಳಿಗೆ ಅನುದಾನ ಬೇಕು ಎಂದು ಹೀಗೆ ಮಾಡುತ್ತಿದ್ದಾರೆ” ಎಂದು ಹೇಳಿದರು.
ಕಸದ ಲಾರಿಯಿಂದ ಅಪಘಾತವಾಗಿದೆ ಎನ್ನುವ ಕಾರಣಕ್ಕೆ ಹೀಗೆ ಮಾಡುತ್ತಿದ್ದಾರೆ ಎಂದು ಕೇಳಿದಾಗ, “ಅಪಘಾತ ಆಗಬಾರದಿತ್ತು ಆಗಿದೆ. ಇದಕ್ಕೆ ಕಾನೂನಾತ್ಮಕ ಕ್ರಮ ತೆಗೆದುಕೊಳ್ಳಬೇಕು. ಅದನ್ನು ಬಿಟ್ಟು ಕಸ ವಿಲೇವಾರಿ ನಿಲ್ಲಿಸಿರುವುದು ಸರಿಯಲ್ಲ. ಎಸ್.ಟಿ.ಸೋಮಶೇಖರ್, ಶಿವಣ್ಣ, ಕೃಷ್ಣಬೈರೇಗೌಡ ಅವರ ಕ್ಷೇತ್ರಗಳಲ್ಲೂ ಕಸ ವಿಲೇವಾರಿ ಮಾಡಲಾಗುತ್ತಿದೆ” ಎಂದು ತಿಳಿಸಿದರು.
“ಈಗ ಹೊಸದಾಗಿ ಎರಡು ಜಾಗಗಳನ್ನು ಖರೀದಿ ಮಾಡಲಾಗಿದೆ. ಅಲ್ಲಿ ಕಸ ವಿಲೇವಾರಿಗೆ ಕಾನೂನಿನ ಪ್ರಕಾರ ಟೆಂಡರ್ ಕರೆಯಲಾಗಿದೆ. ಒಂದಷ್ಟು ಕಾನೂನಾತ್ಮಕ ವಿಚಾರಗಳನ್ನು ಬಗೆಹರಿಸಿ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ” ಎಂದರು.
ಹಿಂದಿನ ಸರ್ಕಾರಕ್ಕಿಂತ ಈಗಿನ ಸರ್ಕಾರದಲ್ಲಿ ಕಮಿಷನ್ ಹೆಚ್ಚಿದೆ, ಕಾಮಗಾರಿ ನಿಲ್ಲಿಸುತ್ತೇವೆ ಎಂದು ಗುತ್ತಿಗೆದಾರರ ಸಂಘ ತಿಳಿಸಿರುವ ಬಗ್ಗೆ ಕೇಳಿದಾಗ, “ಇದರ ಬಗ್ಗೆ ದೂರು ನೀಡಲು ಅವರಿಗೆ ತಿಳಿಸಿ. ಅವರುಗಳು ಮೊದಲು ಕಾಮಗಾರಿ ನಿಲ್ಲಿಸಲಿ. ಯಡಿಯೂರಪ್ಪ ಅವರ ಸರ್ಕಾರ ಇದ್ದಾಗ ಅನುದಾನವಿಲ್ಲ ಕೆಲಸ ತೆಗೆದುಕೊಳ್ಳಬೇಡಿ ಎಂದು ಹೇಳಿಲ್ಲವೇ? ಆರ್ಥಿಕ ಲಭ್ಯತೆ ಇಲ್ಲದೇ ಇದ್ದರೂ ಬಿಜೆಪಿ ಸರ್ಕಾರದ ಅವಧಿಯಲ್ಲಿ ಗುತ್ತಿಗೆ ಕೆಲಸಗಳನ್ನು ತೆಗೆದುಕೊಳ್ಳಲಾಯಿತು. ಬೆಂಗಳೂರು ನಗರದಲ್ಲಿ ಎಷ್ಟು ಹೊಂದಿಸಬೇಕೋ ಆ ಕೆಲಸವನ್ನು ನಾನು ಮಾಡಿದ್ದೇನೆ. ಉದಾಹರಣೆಗೆ 10 ಸಾವಿರ ಕೋಟಿ ಅನುದಾನವಿದ್ದರೆ 30- 40 ಸಾವಿರ ಕೋಟಿ ಟೆಂಡರ್ ಕರೆದಿದ್ದಾರೆ. ಇದೆಲ್ಲದ್ದಕ್ಕೂ ಬಿಜೆಪಿ ಸರ್ಕಾರ ಕಾರಣ. ಈಗ ಬಿಲ್ ಬಿಲ್ ಎಂದರೆ ಏನು ಮಾಡು ವುದು. ಅಂದು ಏಕೆ ಕೆಲಸಗಳನ್ನು ತೆಗೆದುಕೊಂಡರು. ನನ್ನ ಇಲಾಖೆಯ ದಾಖಲೆಗಳನ್ನು ನೀಡುತ್ತೇನೆ. ಹಣ ಇಲ್ಲ ಎಂದು ಗೊತ್ತಿದ್ದರೂ ಕೆಲಸಗಳನ್ನು ಏಕೆ ಪ್ರಾರಂಭ ಮಾಡಿದರು” ಎಂದು ಹೇಳಿದರು.
ನಿಮಗೂ ಕೆಲಸ ನಿಲ್ಲಿಸುತ್ತೇವೆ ಎಂದು ಬ್ಲಾಕ್ ಮೆಲ್ ಮಾಡುತ್ತಿದ್ದಾರೆಯೇ ಎಂದು ಕೇಳಿದಾಗ, “ಕೆಲಸ ನಿಲ್ಲಿಸಿಕೊಳ್ಳುವವರು ನಿಲ್ಲಿಸಿಕೊಳ್ಳಲಿ. ಏನು ಬೇಕಾದರೂ ಮಾಡಿಕೊಳ್ಳಲಿ. ನಮ್ಮ ಸರ್ಕಾರ ಬಜೆಟ್ ಪ್ರಕಾರ ಹಣ ನೀಡುತ್ತಿದೆ. ಎಷ್ಟು ಆಗುತ್ತದೆಯೋ ಅಷ್ಟು ಹಣವನ್ನು ನಾವು ಕೊಡುತ್ತೇವೆ. ಬಜೆಟ್ ಆದ ನಂತರ ಏನಾದರೂ ಮಾಡೋಣ. ನಮಗೂ ಮಾನವೀಯತೆ ಇದೆ. ಬ್ಲಾಕ್‌ಮೇಲ್ ಮಾಡುತ್ತೇವೆ ಅನ್ನುವವರೆಲ್ಲಾ ಮಾಡಿಕೊಳ್ಳಲಿ” ಎಂದರು.
ನಕಲಿ ಬೆರಳಚ್ಚಿನ ಮೂಲಕ ಅನ್ನಭಾಗ್ಯ ಅಕ್ಕಿ ಲೂಟಿ ಮಾಡುತ್ತಿರುವ ಬಗ್ಗೆ ಕೇಳಿದಾಗ, “ಇದರ ಬಗ್ಗೆ ಗೊತ್ತಿಲ್ಲ” ಎಂದು ಉತ್ತರಿಸಿದರು.


