Menu

ಕಾಲ್ತುಳಿತ ದುರಂತದ ನೈತಿಕ ಹೊಣೆ ಹೊತ್ತು ಸಿಎಂ, ಡಿಸಿಎಂ, ಗೃಹ ಸಚಿವರ ರಾಜೀನಾಮೆಗೆ ಅಶೋಕ್ ಆಗ್ರಹ

ashoka

ಬೆಂಗಳೂರು: ಆರ್‌ಸಿಬಿ ಸಂಭ್ರಮಾಚರಣೆಯ ಕಾಲ್ತುಳಿತ ದುರಂತದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್‌ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಎ1, ಎ2, ಎ3 ಆರೋಪಿಗಳಾಗಿದ್ದಾರೆ. ಆದ್ದರಿಂದ ಎಲ್ಲರೂ ರಾಜೀನಾಮೆ ನೀಡಬೇಕು ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಆಗ್ರಹಿಸಿದರು.

ವಿಧಾನಸಭೆಯಲ್ಲಿ ಸುದೀರ್ಘವಾಗಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸಂವೇದನೆ ಇದ್ದರೆ, ರಾಜ್ಯದ ಜನರ ಕ್ಷಮೆ ಕೇಳಬೇಕು. ಇದರ ಸಂಪೂರ್ಣ ಹೊಣೆಯನ್ನು ಮೂವರೂ ವಹಿಸಿಕೊಳ್ಳಬೇಕು. ಜೊತೆಗೆ ರಾಜೀನಾಮೆ ನೀಡಬೇಕು ಹಾಗೂ ಸಿಬಿಐ ತನಿಖೆ ನಡೆಯಬೇಕು. ಇನ್ನು ಮುಂದಾದರೂ ಇಂತಹ ಘಟನೆ ನಡೆಯದೇ ಇರಲು ನಿಯಮ ರೂಪಿಸಬೇಕು ಹಾಗೂ ಸದನ ಸಮಿತಿ ನೇಮಕ ಮಾಡಬೇಕು. ನೋವಿನಲ್ಲಿ ಕೈ ತೊಳೆಯುತ್ತಿರುವ ತಂದೆ ತಾಯಿಗೆ ನ್ಯಾಯ ಸಿಗಬೇಕು ಎಂದು ಆಗ್ರಹಿಸಿದರು.

ಜೂನ್‌ 3 ರಂದು ಆರ್‌ಸಿಬಿ ಕ್ರಿಕೆಟ್‌ ತಂಡ ಗೆದ್ದ ನಂತರ ಇಡೀ ರಾಜ್ಯದಲ್ಲಿ ಸಂಭ್ರಮಾಚರಣೆ ನಡೆದಿತ್ತು. ಹೊಸ ವರ್ಷದ ಆಚರಣೆಗಿಂತಲೂ ಹೆಚ್ಚಿನ ಆಚರಣೆ ಆಗ ನಡೆದಿತ್ತು. ಅಭಿಮಾನಿಗಳು ಬೀದಿಗಿಳಿದು ಕುಣಿದಾಡಿದ್ದರು. ಪೊಲೀಸರು ರಸ್ತೆಗಳಲ್ಲಿ ನಿಂತು ಜನದಟ್ಟಣೆಯನ್ನು ನಿರ್ವಹಣೆ ಮಾಡಿದ್ದರು. ಮಧ್ಯರಾತ್ರಿ ಕಳೆದು ಮುಂಜಾನವೆರೆಗೆ ಸಂಭ್ರಮಾಚರಣೆ ನಡೆದು, ಪೊಲೀಸರಿಗೆ ಬಹಳ ಸುಸ್ತಾಗಿತ್ತು. ಇವೆಲ್ಲವೂ ಡಿಸಿಎಂ ಡಿ.ಕೆ.ಶಿವಕುಮಾರ್‌ಗೆ ಗೊತ್ತಿತ್ತು. ಈ ಸಂಭ್ರಮವನ್ನು ಕ್ರೆಡಿಟ್‌ ಆಗಿ ಸರ್ಕಾರಕ್ಕೆ ವರ್ಗಾವಣೆ ಮಾಡಿಕೊಳ್ಳಲು ʼಕ್ರೆಡಿಟ್‌ ವಾರ್‌ʼ ನಡೆಯಿತು ಎಂದರು.

ಸಂಭ್ರಮಾಚರಣೆ ಸಂಬಂಧ ಕ್ರಿಕೆಟ್‌ ಅಸೋಸಿಯೇಶನ್‌ನಿಂದ ಪೊಲೀಸರಿಗೆ ಅನುಮತಿ ಕೇಳಿ ಪೊಲೀಸ್‌ ಆಯುಕ್ತರು, ಸರ್ಕಲ್‌ ಇನ್ಸ್‌ಪೆಕ್ಟರ್‌ಗೆ ಪತ್ರ ಬರೆಯಲಾಗಿದೆ. ನಂತರ ಆಡಳಿತ ಮತ್ತು ಸಿಬ್ಬಂದಿ ತರಬೇತಿ ಇಲಾಖೆಯಿಂದ ಪತ್ರ ಬರೆಯಲಾಗಿದೆ. ಮುಖ್ಯಮಂತ್ರಿ ಯಾವುದಾದರೂ ಕಾರ್ಯಕ್ರಮಕ್ಕೆ ಬರುತ್ತಾರೆ ಎಂದರೆ ಅದಕ್ಕೆ ಬಹಳ ಸಿದ್ಧತೆ ಮಾಡುತ್ತಾರೆ. ಆದರೆ ಕೇವಲ 24 ಗಂಟೆಯಲ್ಲೇ ಸಿದ್ಧತೆ ಮಾಡಿಕೊಂಡು ಕಾರ್ಯಕ್ರಮ ಮಾಡಬೇಕು ಎಂದು ಸೂಚಿಸಲಾಗಿದೆ. ಇದೇ ವೇಳೆ ಆರ್‌ಸಿಬಿ ವೆಬ್‌ಸೈಟ್‌ನಲ್ಲಿ ಪರೇಡ್‌ ಬಗ್ಗೆ ಹಾಗೂ ವಿಧಾನಸೌಧದಲ್ಲಿನ ಆಚರಣೆ ಬಗ್ಗೆ ಮಾಹಿತಿ ಹಾಕಲಾಯಿತು. ಜೊತೆಗೆ ಸಿಎಂ ಕಚೇರಿಯಿಂದಲೇ ಕಾರ್ಯಕ್ರಮದ ಬಗ್ಗೆ ಸೂಚನೆ ನೀಡಲಾಗಿದೆ. ಇದು ಸರ್ಕಾರಿ ಆಚರಣೆಯಲ್ಲ ಎಂದು ಸರ್ಕಾರ ಹೇಳುತ್ತದೆ. ಆದರೆ ಸರ್ಕಾರವೇ ತಮ್ಮನ್ನು ಆಹ್ವಾನಿಸಿದೆ ಎಂದು ಆರ್‌ಸಿಬಿ ಮತ್ತು ಕ್ರಿಕೆಟ್‌ ಅಸೋಸಿಯೇಶನ್‌ ಹೇಳಿದೆ. ಇದು ಕೋರ್ಟ್‌ಗೆ ನೀಡಿರುವ ಅಫಿಡವಿಟ್‌ನಲ್ಲೂ ಇದೆ ಎಂದು ವಿವರಿಸಿದರು.

ಡಿಸಿಎಂ ಡಿ.ಕೆ.ಶಿವಕುಮಾರ್‌ ಪಾತ್ರ

ಡಿಸಿಎಂ ಡಿ.ಕೆ.ಶಿವಕುಮಾರ್‌ ಕನಕಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ್ದರು. ಕ್ರಿಕೆಟ್‌ ತಂಡವನ್ನು ಅಭಿನಂದಿಸುತ್ತೇನೆ, ತಂಡದವರು ಆಗಮಿಸಲಿದ್ದು, ಅವರಿಗೆ ಗೌರವಿಸುವ ಬಗ್ಗೆ ಚರ್ಚೆ ಮಾಡುತ್ತಿದ್ದೇನೆ, ಅಂತಿಮವಾಗಿ ಗೃಹ ಸಚಿವರು, ಪೊಲೀಸ್‌ ಅಧಿಕಾರಿಗಳು ಕುಳಿತು ಚರ್ಚಿಸುತ್ತೇವೆ ಎಂದು ಹೇಳುತ್ತಾರೆ. ಇನ್ನೂ ಮುಖ್ಯಮಂತ್ರಿಗಳು ಸಭೆ ನಡೆಸದೆಯೇ ಉಪಮುಖ್ಯಮಂತ್ರಿಗಳು ಮಾಧ್ಯಮಗಳಿಗೆ ಮಾಹಿತಿ ನೀಡುತ್ತಾರೆ. ನಂತರ ಮತ್ತೆ ಮಾತನಾಡಿದ ಅವರು, ಜನರು ನೇರವಾಗಿ ವಿಧಾನಸೌಧಕ್ಕೆ ಬನ್ನಿ, ನಂತರ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಬನ್ನಿ ಎಂದು ಆಹ್ವಾನ ನೀಡುತ್ತಾರೆ. ಜೊತೆಗೆ ವಿಕ್ಟರಿ ಪರೇಡ್‌ ಬಗ್ಗೆ, ಟ್ರಾಫಿಕ್‌ ನಿಯಂತ್ರಣದ ಬಗ್ಗೆ ಮಾಹಿತಿ ನೀಡುತ್ತಾರೆ. ಅಲ್ಲದೆ ಹುಚ್ಚು ಅಭಿಮಾನಿಗಳ ಪರ ವಹಿಸಿಕೊಂಡು ಮಾತಾಡುತ್ತಾರೆ. ಇವೆಲ್ಲವುಗಳಿಂದ ಈ ಆಚರಣೆಯಲ್ಲಿ ಸರ್ಕಾರದ ಅಧಿಕೃತ ಪಾತ್ರ ಇರುವುದು ಖಚಿತವಾಗುತ್ತದೆ ಎಂದು ಹೇಳಿದರು.

ಡಿಸಿಎಂ ಡಿ.ಕೆ.ಶಿವಕುಮಾರ್‌ ಈ ಆಚರಣೆಯ ಕ್ಷಣಕ್ಷಣದ ಮಾಹಿತಿ ಪಡೆಯುತ್ತಿದ್ದರು. ಈ ಕಾರ್ಯಕ್ರಮವನ್ನು ತಡೆಯುವ ಅವಕಾಶ ಅವರಿಗೆ ಇತ್ತು. ಸರ್ಕಾರದ ಕಾರ್ಯಕ್ರಮ ಅಲ್ಲ ಎಂದಮೇಲೆ ಕ್ರೀಡಾಂಗಣಕ್ಕೆ ಬನ್ನಿ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ಹೇಳಿದ್ದು ಯಾಕೆ? ಎಂದು ಪ್ರಶ್ನೆ ಮಾಡಿದರು.

ಸಿಎಂ ಸಿದ್ದರಾಮಯ್ಯ ಪಾತ್ರ

ಕಾವೇರಿ ನಿವಾಸದಲ್ಲಿ ಸಲಹೆಗಾರರಾದ ಎ.ಎಸ್‌.ಪೊನ್ನಣ್ಣ ಹಾಗೂ ಗೋವಿಂದರಾಜು ಸಭೆ ನಡೆಸಿದ್ದರು. ಅಲ್ಲಿಗೆ ಬಂದ ಸಿಎಂ ಸಿದ್ದರಾಮಯ್ಯ ವಿಕ್ಟರಿ ಪರೇಡ್‌ ಬೇಡ, ಉಳಿದ ಕಾರ್ಯಕ್ರಮ ಮಾಡಿ ಎಂದು ಸೂಚನೆ ನೀಡುತ್ತಾರೆ. ಅದೇ ವೇಳೆ ವಿಧಾನಸೌಧ ಮುಂಭಾಗ ನಡೆಯುವ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ದೂರವಾಣಿ ಮೂಲಕ ರಾಜ್ಯಪಾಲರನ್ನು ಆಹ್ವಾನಿಸುತ್ತಾರೆ. ಆದರೆ ಕಾಲ್ತುಳಿತ ದುರಂತ ನಡೆದ ಬಳಿಕ ನಾನು ರಾಜ್ಯಪಾಲರನ್ನು ಆಹ್ವಾನಿಸಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳುತ್ತಾರೆ. ಬಳಿಕ ನಾನೇ ಆಹ್ವಾನಿಸಿದೆ ಎಂದು ಹೇಳುತ್ತಾರೆ ಎಂದು ಹೇಳಿದರು.

ಡಿಪಿಎಆರ್‌ ಮುಖ್ಯಮಂತ್ರಿಗಳ ಸೂಚನೆಯಂತೆ ಕೆಲಸ ಮಾಡುತ್ತದೆ. ಡಿಪಿಎಆರ್‌ ಕಾರ್ಯದರ್ಶಿ ಸತ್ಯವತಿ ವಿಧಾನಸೌಧಕ್ಕೆ ಬಂದು ಮಾಧ್ಯಮಗಳೊಂದಿಗೆ ಮಾತಾಡಿ ವಿಧಾನಸೌಧದಿಂದಲೇ ಸಂಭ್ರಮಾಚರಣೆ ಆರಂಭವಾಗುತ್ತದೆ, ಮಾನ್ಯ ಮುಖ್ಯಮಂತ್ರಿಯವರ ಆದೇಶದಂತೆ ಅನುಮತಿ ನೀಡಿದ್ದೇವೆ, ಸಂಜೆ 4 ಗಂಟೆಗೆ ಕ್ರಿಕೆಟ್‌ ತಂಡ ಇಲ್ಲಿಗೆ ಬರುತ್ತದೆ, ಆಗ ಸನ್ಮಾನ ಮಾಡುತ್ತೇವೆ ಎಂದು ತಿಳಿಸುತ್ತಾರೆ. ಜನರನ್ನು ಹೇಗೆ ನಿಯಂತ್ರಿಸುತ್ತೀರಿ ಎಂದು ಮಾಧ್ಯಮದವರು ಕೇಳಿದಾಗ, ವಿಧಾನಸೌಧದ ಮೆಟ್ಟಿಲುಗಳ ಬಳಿ ಜನರು ಬರಬಾರದು. ಇಲ್ಲಿಂದ ಕ್ರಿಕೆಟ್‌ ತಂಡ ಕ್ರೀಡಾಂಗಣಕ್ಕೆ ಹೋಗುತ್ತದೆ. ಕ್ರೀಡಾಂಗಣಕ್ಕೆ ಜನರು ನೇರವಾಗಿ ಹೋಗಬೇಕು, ವಿಧಾನಸೌಧದ ಬಳಿ ಬರಬಾರದು ಎಂದು ಕಾರ್ಯದರ್ಶಿ ಮನವಿ ಮಾಡುತ್ತಾರೆ. ವಿಧಾನಸೌಧದ ಸಿಬ್ಬಂದಿಗೆ ರಜೆ ನೀಡಬೇಕು, ಸಿಸಿಟಿವಿ ಅಳವಡಿಸಬೇಕೆಂದು ಸೂಚನೆ ನೀಡಲಾಗುತ್ತದೆ. ಇಷ್ಟೆಲ್ಲ ಮಾಡಲು ಸಮಯವೇ ಇರುವುದಿಲ್ಲ. ಡಿಪಿಎಆರ್‌ಗೆ ವಿಧಾನಸೌಧದ ಭದ್ರತಾ ಪೊಲೀಸರು ಸಲಹೆಗಳನ್ನು ನೀಡುತ್ತಾರೆ. ಕಾನೂನು ಸುವ್ಯವಸ್ಥೆಗೆ ಸಮಯವಿಲ್ಲ ಎಂದು ಈ ಸಲಹೆಯಲ್ಲಿ ತಿಳಿಸಲಾಗಿದೆ. ಇದನ್ನು ಸರ್ಕಾರ ಮುಚ್ಚಿಹಾಕಿದೆ ಎಂದರು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ದಟ್ಟಣೆ ನಿಯಂತ್ರಿಸುವ ಬಗ್ಗೆ ಟ್ರಾಫಿಕ್‌ ಡಿಸಿಪಿಯಿಂದ ಒಂದು ಆದೇಶವನ್ನು ನೀಡಿ, ಪಾಸುಗಳು ಇದ್ದರೆ ಮಾತ್ರ ಕ್ರೀಡಾಂಗಣಕ್ಕೆ ಪ್ರವೇಶಾವಕಾಶ ನೀಡಬೇಕೆಂದು ಸೂಚಿಸಲಾಗಿದೆ. ಇದು ಗೃಹ ಸಚಿವರು ಅಥವಾ ಮುಖ್ಯಮಂತ್ರಿಗಳ ಗಮನಕ್ಕೆ ಬಂದಿರುತ್ತದೆ ಎಂದರು.

ಡಿಸಿಎಂ ಡಿ.ಕೆ.ಶಿವಕುಮಾರ್‌ ವಿಮಾನ ನಿಲ್ದಾಣಕ್ಕೆ ಹೋಗಿ ಆರ್‌ಸಿಬಿ ಆಟಗಾರರಿಗೆ ಶುಭಾಶಯ ಕೋರಿದ್ದರು. ನಂತರ ಕಾರ್‌ನಲ್ಲಿ ಕುಳಿತು ರಾಯಲ್‌ ಚಾಲೆಂಜರ್ಸ್‌ ವಿಸ್ಕಿ ಬಾವುಟ ಹಿಡಿದುಕೊಂಡು ವೀಡಿಯೋ ಮಾಡಿದ್ದರು. ಇದು ಉಪಮುಖ್ಯಮಂತ್ರಿ ಹಾಗೂ ಸರ್ಕಾರದ ಘನತೆಗೆ ಶೋಭೆ ತರುವುದಿಲ್ಲ. ಉಪಮುಖ್ಯಮಂತ್ರಿಗೆ ಶಿಷ್ಟಾಚಾರ ಇರುವಾಗ ಒಂದು ಮದ್ಯದ ದೊರೆಯ ತಂಡದ ಬಾವುಟ ಹಿಡಿಯುವುದು ಸರಿಯಲ್ಲ ಎಂದರು.

ವೇದಿಕೆ ಕಾರ್ಯಕ್ರಮದಲ್ಲಿ ಅಧ್ವಾನ

ವೇದಿಕೆಯ ಮೇಲೆ 20-25 ಗಣ್ಯರಿರಬೇಕೆಂದು ಡಿಪಿಎಆರ್‌ ಆದೇಶ ನೀಡಿದೆ. ಆದರೆ ಸಂತೆಯಂತೆ ಸುಮಾರು 250 ಜನರು ವೇದಿಕೆಯ ಮೇಲಿದ್ದರು. ಇದಕ್ಕೆ ಅನುಮತಿ ನೀಡಿದವರು ಯಾರು? ವಿಧಾನಸೌಧ ಪಾರಂಪರಿಕ ಕಟ್ಟಡ ಎಂಬ ಘನತೆ ಹಾಗೂ ಶಿಷ್ಟಾಚಾರಗಳು ಇದರಿಂದಾಗಿ ನಾಶವಾಗಿದೆ. ರಾಜ್ಯಪಾಲರು ಹಾಗೂ ಮುಖ್ಯಮಂತ್ರಿ ಅರ್ಧ ಗಂಟೆ ಕಾದರೂ ಕಾರ್ಯಕ್ರಮ ಆರಂಭವಾಗಿರಲಿಲ್ಲ. ವಿಧಾನಸೌಧ, ಹೈಕೋರ್ಟ್‌ ಸೇರಿದಂತೆ ಎಲ್ಲ ಕಡೆ, ಕಾಂಪೌಂಡ್‌ ಮೇಲೆ ಜನರು ಕುಳಿತು ಸೆಲ್ಫಿ ತೆಗೆಯುತ್ತಿದ್ದರು. ಇದನ್ನು ಶಿಸ್ತಾದ ಕಾರ್ಯಕ್ರಮ ಎಂದು ಕರೆಯಲು ಸಾಧ್ಯವೇ? ಸಚಿವ ಜಮೀರ್‌ ಅಹ್ಮದ್‌ ಮಗನನ್ನು ಕರೆದುಕೊಂಡು ಬಂದು, ಕುರ್ಚಿಯಲ್ಲಿ ಕೂರಿಸಿದ್ದರು. ಮುಖ್ಯಮಂತ್ರಿಯವರ ಮೊಮ್ಮಗ ಎಲ್ಲೋ ನಿಂತಿದ್ದರು. ಈ ರೀತಿ ಇಡೀ ಕಾರ್ಯಕ್ರಮ ಅಧ್ವಾನವಾಗಿ ನಡೆಯಿತು. ಸಚಿವರ ಕುಟುಂಬದವರು ಸೆಲ್ಫಿ ಫೋಟೋ ತೆಗೆದುಕೊಳ್ಳುವಾಗ, ಅಮಾಯಕ ಯುವಜನರು ಜೀವ ಕಳೆದುಕೊಂಡು ಫೋಟೊ ಆಗಿಬಿಟ್ಟರು ಎಂದರು.

ವಿಧಾನಸೌಧದಲ್ಲಿ ಮಧ್ಯಾಹ್ನ 3.20 ಕ್ಕೆ, ಇನ್ನೂ ಕಾರ್ಯಕ್ರಮ ಆರಂಭವಾಗದ ವೇಳೆಗೆ ವೇಳೆ ಚಿನ್ನಸ್ವಾಮಿ ಸ್ಟೇಡಿಯಂ ಬಳಿ 70-80 ಸಾವಿರ ಜನರು ಸೇರಿದ್ದರು. ಸ್ಟೇಡಿಯಂನ ಗೇಟ್‌ ತೆರೆದಿದ್ದರೆ, ಜನರು ಅಲ್ಲಿ ಹೋಗಿ ಕೂತು ಜನದಟ್ಟಣೆ ಕಡಿಮೆಯಾಗುತ್ತಿತ್ತು. ಅಂತಹ ಸಮಯದಲ್ಲಿ ಲಾಠಿ ಚಾರ್ಜ್‌ ಮಾಡಲು ಆದೇಶ ಕೊಟ್ಟವರು ಯಾರು? ಕ್ರೀಡಾಂಗಣದಲ್ಲಿ 70-80 ಅಂತಾರಾಷ್ಟ್ರೀಯ ಪಂದ್ಯಾ ಆದಾಗಲೂ ಕ್ರೀಡಾಂಗಣದಿಂದ ಅನುಮತಿ ಪಡೆದಿಲ್ಲ. ಕ್ರಿಕೆಟ್‌ ಅಸೋಸಿಯೇಶನ್‌ನಿಂದ ಕೀಯನ್ನು ಪೊಲೀಸರಿಗೆ ನೀಡಲಾಗಿತ್ತು. ಒಬ್ಬ ಹಿರಿಯ ಪೊಲೀಸ್‌ ಅಧಿಕಾರಿ ವಾಕಿಟಾಕಿಯಲ್ಲಿ ಮಾತನಾಡುತ್ತಾ, ಯಾರನ್ನೂ ಒಳಗೆ ಬಿಡಬೇಡಿ ಎಂದು ಹೇಳಿದ್ದಾರೆ. ಆಗ ವಿಧಿ ಇಲ್ಲದೆ ಪೊಲೀಸರು ಲಾಠಿ ಚಾರ್ಜ್‌ ಮಾಡಿದಾಗ, ಎಲ್ಲರೂ ಎದ್ದು ಬಿದ್ದು ಓಡಿದರು. ಗೇಟ್‌ ತೆರೆದಿದ್ದರೆ ದುರ್ಘಟನೆ ನಡೆಯುತ್ತಿರಲಿಲ್ಲ ಎಂದರು.

3.34 ಕ್ಕೆ ಇನ್ನೂ ವಿಧಾನಸೌಧದಲ್ಲಿ ಕಾರ್ಯಕ್ರಮ ಆರಂಭವಾಗದ ವೇಳೆಗಾಗಲೇ ಬಿಡದಿಯ ಎಂಜಿನಿಯರ್‌ ಪ್ರಜ್ವಲ್‌ ಸತ್ತುಹೋಗಿದ್ದರು. 3.35 ಕ್ಕೆ ಕೆಲವರಿಗೆ ಉಸಿರು ನಿಂತುಹೋಗುವ ಸನ್ನಿವೇಶವಿದೆ ಎಂಬ ಸಂದೇಶ ವಾಕಿಟಾಕಿಯಲ್ಲಿ ಹರಿದಾಡಿತ್ತು. ಕೆ.ಆರ್‌.ಪೇಟೆಯ ಸಿವಿಲ್‌ ಎಂಜಿನಿಯರ್‌ ಪೂರ್ಣಚಂದ್ರ ಕಾಲ್ತುಳಿತಕ್ಕೆ ಸಿಕ್ಕಿ ಸತ್ತುಹೋದರು. 4.36 ಕ್ಕೆ ಗೇಟ್‌- 6 ರ ಬಳಿ 6 ಮಂದಿ ಬಿದ್ದುಹೋಗಿದ್ದು, ಎತ್ತಿಕೊಂಡು ಹೋಗಲು ಯಾರೂ ಇಲ್ಲ ಎಂದು ವಾಕಿಟಾಕಿಯಲ್ಲಿ ಸಂದೇಶ ಬಂತು. ನಂತರ ವಿದ್ಯಾರ್ಥಿ ಮನೋಜ್‌ ಕುಮಾರ್‌, 13 ವರ್ಷದ ದಿವ್ಯಾಂಶಿ ಸತ್ತುಹೋಗಿದ್ದರು. ಬಳಿಕ ಅಕ್ಷತಾ ಪೈ, ಚಿನ್ಮಯಿ ಶೆಟ್ಟಿ, ಭೂಮಿಕ್‌ ಸತ್ತುಹೋದರು. ವೇದಿಕೆಯಲ್ಲಿ ಸನ್ಮಾನ ನಡೆಯುತ್ತಿದ್ದಂತೆ ಕೋಲಾರದ ಸಹನಾ ಸತ್ತುಹೋಗಿದ್ದರು. ಇಷ್ಟಾದರೂ ಸರಿಯಾದ ಆಂಬ್ಯುಲೆನ್ಸ್‌ ವ್ಯವಸ್ಥೆ ಇರಲಿಲ್ಲ. ಸರಿಯಾಗಿ ವೈದ್ಯರು, ಆಂಬ್ಯುಲೆನ್ಸ್‌ ವ್ಯವಸ್ಥೆ ಮಾಡಿದ್ದರೆ ಇಷ್ಟೆಲ್ಲ ಅನಾಹುತವಾಗುತ್ತಿರಲಿಲ್ಲ. ಇಷ್ಟೆಲ್ಲ ಸಾವುಗಳಾದ ನಂತರವೂ ಆರ್‌ಸಿಬಿ ತಂಡ ಕ್ರೀಡಾಂಗಣಕ್ಕೆ ಹೋಗಿ ಸಂಭ್ರಮಾಚರಣೆ ಮಾಡುತ್ತದೆ. ಈ ಕಾರ್ಯಕ್ರಮಕ್ಕೂ ಡಿಸಿಎಂ ಡಿ.ಕೆ.ಶಿವಕುಮಾರ್‌ ಹೋಗಿದ್ದರು ಎಂದು ಬೇಸರ ವ್ಯಕ್ತಪಡಿಸಿದರು.

ನ್ಯಾ.ಡಿಕುನ್ಹಾ ಆಯೋಗದ ಪ್ರಕಾರ, 515 ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಆದರೆ 194 ಮಂದಿ ಮಾತ್ರ ಬಂದೋಬಸ್ತ್‌ ರಿಜಿಸ್ಟರ್‌ನಲ್ಲಿ ಸಹಿ ಹಾಕಿದ್ದರು. ಹಿರಿಯ ಅಧಿಕಾರಿಗಳು ಸಾವಿನ ಬಗ್ಗೆ ಸಚಿವರ ಗಮನಕ್ಕೆ ತಂದರೂ ಕಾರ್ಯಕ್ರಮ ಸ್ಥಗಿತಗೊಳ್ಳುವುದಿಲ್ಲ. ಆರ್‌ಸಿಬಿ ತಂಡದವರು ಕಪ್‌ನ್ನು ಡಿಸಿಎಂ ಡಿ.ಕೆ.ಶಿವಕುಮಾರ್‌ಗೆ ತಂದುಕೊಡುತ್ತಾರೆ. ಕಪ್‌ಗೆ ಮುತ್ತಿಕ್ಕುವುದು, ಕಪ್‌ ಎತ್ತಿ ಹಿಡಿದು ಪ್ರದರ್ಶನ ಮಾಡುವುದು ಬೇಕಿತ್ತಾ? ಎಂದು ಪ್ರಶ್ನಿಸಿದರು.

ಸರ್ಕಾರದ ವೈಫಲ್ಯ

ಪಂದ್ಯ ಮುಗಿದು 15 ಗಂಟೆಯಾದ ಕೂಡಲೇ ಕಾರ್ಯಕ್ರಮ ಮಾಡಿದ್ದು ಯಾಕೆ? ಸುಸ್ತಾಗಿ ಹೈರಾಣಾಗಿದ್ದ ಪೊಲೀಸರಿಗೆ ವಿಶ್ರಾಂತಿಗೆ ಅವಕಾಶ ಕೊಡದೆ ಮತ್ತೆ ಕೆಲಸಕ್ಕೆ ನಿಯೋಜಿಸಿದ್ದು ಏಕೆ? ಇದು ಮುಖ್ಯಮಂತ್ರಿ ಅಧಿಕಾರದ ವ್ಯಾಪ್ತಿಯಲ್ಲಿ ಬರುವ ಗುಪ್ತಚರ ಸಂಸ್ಥೆಯ ಸಂಪೂರ್ಣ ವೈಫಲ್ಯವಾಗಿದೆ. ಇಷ್ಟೆಲ್ಲ ಅನಾಹುತವಾದರೂ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸಂಜೆ 5.45 ಗೆ ದುರಂತದ ಬಗ್ಗೆ ತಿಳಿಯುತ್ತದೆ. ಮುಖ್ಯಮಂತ್ರಿಗೆ ಎರಡು ಗಂಟೆಗಳ ನಂತರ ಈ ಮಾಹಿತಿ ಬರುತ್ತದೆ ಎಂಬುದೇ ಸರ್ಕಾರದ ದೊಡ್ಡ ವೈಫಲ್ಯ ಹಾಗೂ ಲೋಪ. ಈ ಲೋಪದಿಂದಾಗಿ 11 ಮಕ್ಕಳನ್ನು ಕಳೆದುಕೊಂಡಿದ್ದೇವೆ ಎಂದರು.

ಪೊಲೀಸ್‌ ಕಾಯ್ದೆ ಪ್ರಕಾರ ಕಾರ್ಯಕ್ರಮಕ್ಕೆ ಅನುಮತಿ ಪಡೆಯಬೇಕು. ಆದರೆ ಯಾವುದೇ ರೀತಿಯ ಅನುಮತಿ ಪಡೆದಿಲ್ಲ. ಕೋರ್ಟ್‌ಗೆ ಆರ್‌ಸಿಬಿ ಸಲ್ಲಿಸಿದ ಅಫಿಡವಿಟ್‌ನಲ್ಲಿ, ನಾವು ಸಂಭ್ರಮಾಚರಣೆ ಮಾಡಲು ಕೇಳಿಲ್ಲ, ಭದ್ರತೆ ಕೊಡುವುದು ಸರ್ಕಾರದ ಕೆಲಸ ಎಂದು ಹೇಳಿದೆ. ಇಷ್ಟೊಂದು ಸಾವಿಗೆ ಹೊಣೆ ಯಾರು? ಎಂದು ಪ್ರಶ್ನೆ ಮಾಡಿದರು.

Related Posts

Leave a Reply

Your email address will not be published. Required fields are marked *