ಬಾಗಲಕೋಟೆಯ ಡಿಸಿ ಕಚೇರಿ ಎದುರು AIUTUC ಸಂಘದ ನೇತೃತ್ವದಲ್ಲಿ ಆಶಾ ಕಾರ್ಯಕರ್ತೆಯರ ಅಹೋ ರಾತ್ರಿ ಪ್ರತಿಭಟನೆ ಮುಂದುವರಿದಿದೆ. ಮೂರು ದಿನಗಳಿಂದ ಡಿಸಿ ಕಚೇರಿ ಮುಂಭಾಗ ಆಶಾ ಕಾರ್ಯಕರ್ತೆಯರು ಧರಣಿ ನಡೆಸುತ್ತಿದ್ದಾರೆ.
ಮಾಸಿಕ ಕನಿಷ್ಠ 10 ಸಾವಿರ ವೇತನ ಹೆಚ್ಚಳ, ಆಶಾ ಸುಗಮಕಾರರನ್ನು ಸೂಕ್ತ ವೇತನದೊಂದಿಗೆ ಮುಂದುವರಿಕೆ, ನಿವೃತ್ತ ಆಶಾ ಕಾರ್ಯಕರ್ತೆಯರಿಗೆ ಪಶ್ಚಿಮ ಬಂಗಾಳ ಮಾದರಿಯಲ್ಲಿ ಇಡುಗಂಟು ಇಡುವುದು, 2025ರಲ್ಲಿ ಕೇಂದ್ರ ಸರ್ಕಾರ ಹೆಚ್ಚಿಸಿದ ಆಶಾ ಪ್ರೋತ್ಸಾಹ ಧನವನ್ನು ರಾಜ್ಯದಲ್ಲಿ ಜಾರಿ ತರುವುದು, ನಗರ ಆಶಾಗಳಿಗೆ ರೂ.2000 ಗೌರವಧನ ಹೆಚ್ಚಿಸುವುದು ಇವೇ ಮೊದಲಾದ ಬೇಡಿಕೆಗಳ ಈಡೇರಿಕೆಗೆ ಪ್ರತಿಭಟನೆ ನಡೆಸುತ್ತಿರುವ ಆಶಾ ಕಾರ್ಯಕರ್ತೆಯರು ಡಿಸಿ ಕಚೇರಿ ಮುಂದೆಯೇ ಕಂದಮ್ಮಗಳೊಂದಿಗೆ ರಾತ್ರಿ ಮಲಗಿದ್ದರು.
ಆಶಾ ಕಾರ್ಯಕರ್ತರು ತಮ್ಮ ಬೇಡಿಕೆ ಈಡೇರಿಸಲು ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಎದುರೇ ಪ್ರತಿಭಟನೆ ನಡೆಸುತ್ತಿದ್ದರೂ ಯಾವುದೇ ಅಧಿಕಾರಿಗಳು, ಜನಪ್ರತಿನಿಧಿಗಳು ಅವರ ಅಹವಾಲು ಆಲಿಸುತ್ತಿಲ್ಲ ಎಂಬುದು ಖೇದಕರ.