Menu

ಆಶಾ ಕಾರ್ಯಕರ್ತೆಯರಿಗೆ ಮೂರು ತಿಂಗಳಿಂದ ಸಂಬಳವಿಲ್ಲ: ಆರ್‌. ಅಶೋಕ ಕಿಡಿ

ಆಶಾ ಕಾರ್ಯಕರ್ತೆಯರ ಗೌರವಧನ ₹8,000ಕ್ಕೆ ಹೆಚ್ಚಳ ಮಾಡುತ್ತೇವೆ ಎಂದು ಪ್ರಣಾಳಿಕೆಯಲ್ಲಿ ಬೊಗಳೆ ಬಿಟ್ಟು ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ ಪಕ್ಷ, ಗೌರವಧನ ಹೆಚ್ಚಿಸುವುದಿರಲಿ, ಕಳೆದ ಮೂರು ತಿಂಗಳಿಂದ ಕೊಡಬೇಕಾದ ಗೌರವಧನವನ್ನೂ ಕೊಟ್ಟಿಲ್ಲ ಎಂದು ಪ್ರತಿಪಕ್ಷ ನಾಯಕ ಆರ್‌. ಅಶೋಕ್‌ ಕಿಡಿ ಕಾರಿದ್ದಾರೆ.

ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಅವರು, ಸಿಎಂ ಸಿದ್ದರಾಮಯ್ಯನವರೇ, ವಿಪಕ್ಷಗಳು ಸರ್ಕಾರ ದಿವಾಳಿ ಆಗಿದೆ ಎಂದು ಟೀಕೆ ಮಾಡಿದಾಗಲೆಲ್ಲ ಎಲ್ಲ ಸರಿಯಿದೆ ಎಂದು ತಿಪ್ಪೆ ಸಾರಿಸುವ ಮಾತಾಡುತ್ತೀರಲ್ಲ ಸ್ವಾಮಿ, ಸರ್ಕಾರ ಪಾಪರ್ ಆಗಿಲ್ಲ ಎನ್ನುವುದಾದರೆ 42,000 ಆಶಾ ಕಾರ್ಯಕರ್ತೆಯರಿಗೆ ಸಿಗಬೇಕಾದ ₹63 ಕೋಟಿ ರೂಪಾಯಿ ಗೌರವಧನ ಯಾಕೆ ಬಾಕಿ ಉಳಿಸಿಕೊಂಡಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ಇನ್ನೆಷ್ಟು ದಿನ ಸ್ವಾಮಿ ಈ ಭಂಡ ಬಾಳು. ರಾಜೀನಾಮೆ ಕೊಟ್ಟು ಕರ್ನಾಟಕವನ್ನು ಉಳಿಸಿ ಎಂದಿದ್ದಾರೆ.

ಮತ್ತೊಂದು ಪೋಸ್ಟ್‌ ಮಾಡಿರುವ ಆರ್‌. ಅಶೋಕ್‌, ಹೈದರಾಬಾದ್‌ನಿಂದ ಬೆಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್ಸೊಂದು ಕರ್ನೂಲು ಬಳಿ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಹೊತ್ತಿ ಉರಿದು 20ಕ್ಕೂ ಹೆಚ್ಚು ಪ್ರಯಾಣಿಕರು ಸಜೀವ ದಹನವಾಗಿರುವ ಸುದ್ದಿ ತಿಳಿದು ಆಘಾತವಾಯಿತು ಎಂದು ಬರೆದುಕೊಂಡಿದ್ದಾರೆ.

ಪ್ರಯಾಣಿಕರಲ್ಲಿ ಹಲವಾರು ಕನ್ನಡಿಗರು ಹಾಗೂ ಬೆಂಗಳೂರು ನಿವಾಸಿಗಳು ಇರುವ ಸಾದ್ಯತೆ ಇದ್ದು, ಈ ದುರಂತದಲ್ಲಿ ಮೃತಪಟ್ಟವರ ಗುರುತು ಪತ್ತೆಗಾಗಿ ಮತ್ತು ಗಾಯಗೊಂಡವರ ಚಿಕಿತ್ಸೆಗಾಗಿ ರಾಜ್ಯ ಸರ್ಕಾರ ವಿಶೇಷ ತಂಡವೊಂದನ್ನು ಕಳುಹಿಸಿ ಸ್ಥಳೀಯ ಆಡಳಿತಕ್ಕೆ ನೆರವು ನೀಡಬೇಕು ಮತ್ತು ಮೃತ ಕುಟುಂಬಗಳಿಗೆ ಪರಿಹಾರ ಘೋಷಣೆ ಮಾಡಬೇಕು ಎಂದು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡುತ್ತೇನೆ ಎಂದು ತಿಳಿಸಿದ್ದಾರೆ.

Related Posts

Leave a Reply

Your email address will not be published. Required fields are marked *