Saturday, February 22, 2025
Menu

ಆಸಾರಾಂನ ಬೆಂಬಲಿಗರ ಪುಂಡಾಟಿಕೆ: ಡಿಸ್ಕವರಿ ಚಾನೆಲ್‌ಗೆ ರಕ್ಷಣೆ ಒದಗಿಸಲು ರಾಜ್ಯಗಳಿಗೆ ಸುಪ್ರೀಂ ಆದೇಶ

ನವದೆಹಲಿ: ಡಿಸ್ಕವರಿ ಚಾನೆಲ್‌ನ ಸಿಬ್ಬಂದಿ ಮತ್ತು ಕಚೇರಿಗಳಿಗೆ ಸೂಕ್ತ ಭದ್ರತೆ ಒದಗಿಸುವಂತೆ ಪೊಲೀಸರಿಗೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.
ಸ್ವಯಂಘೋಷಿತ ಬಾಬಾ ಅಸಾರಾಂ ಬಾಪು ಅವರ ಬೆಂಬಲಿಗರು ಬೆದರಿಕೆ ಹಾಕುತ್ತಿರುವ ಹಿನ್ನೆಲೆಯಲ್ಲ ಸುಪ್ರೀಂ ಕೋರ್ಟ್ ಈ ಆದೇಶ ನೀಡಿದೆ.

ಜನವರಿ 25ರಂದು `ಕಲ್ಟ್ ಆಫ್ ಫಿಯರ್: ಅಸಾರಾಂ ಬಾಪು’ ಎಂಬ ಸಾಕ್ಷ್ಯಚಿತ್ರವನ್ನು ಪ್ರಸಾರ ಮಾಡಿದ ಬಳಿಕ ಸ್ವಯಂಘೋಷಿತ ದೇವಮಾನವ ಅಸಾರಾಂ ಬಾಪು ಅವರ ಬೆಂಬಲಿಗರು ಬೆದರಿಕೆ ಹಾಕುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ರಕ್ಷಣೆ ಒದಗಿಸುವಂತೆ ಕೋರಿ ಡಿಸ್ಕವರಿ ಚಾನೆಲ್ಲಿನ ಒಟಿಟಿ ಪ್ಲಾಟ್ಫಾರ್ಮ್‌ನ ಸಿಬ್ಬಂದಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.
ಇಂದು ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ಸಂಜಯ್ ಕುಮಾರ್ ಅವರ ಪೀಠವು ಅರ್ಜಿದಾರರಾದ ಶಶಾಂಕ್ ವಾಲಿಯಾ ಸೇರಿ ಇತರರು ಹಾಗೂ ಅವರು ಕಚೇರಿಗಳಿಗೆ ಪೊಲೀಸ್ ಭದ್ರತೆ ಒದಗಿಸುವಂತೆ ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಿದೆ.

ಶಶಾಂಕ್ ವಾಲಿಯಾ ಮತ್ತು ಇತರರ ರಿಟ್ ಅರ್ಜಿಯ ಮೇರೆಗೆ ನ್ಯಾಯಾಲಯವು ಕೇಂದ್ರ ಸರ್ಕಾರ ಮತ್ತು ಮಹಾರಾಷ್ಟ್ರ, ಕರ್ನಾಟಕ, ಹರಿಯಾಣ, ತಮಿಳುನಾಡು, ತೆಲಂಗಾಣ, ಬಂಗಾಳ ಮತ್ತು ದೆಹಲಿ ಸರ್ಕಾರಗಳಿಗೆ ನೋಟಿಸ್ ಜಾರಿಗೊಳಿಸಿದೆ.

ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಅಭಿನವ್ ಮುಖರ್ಜಿ, ದೂರು ನೀಡಿದ ನಂತರವೂ ಅಸಾರಾಂ ಬಾಪು ಬೆಂಬಲಿಗರ ವಿರುದ್ಧ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ನ್ಯಾಯಪೀಠದ ಗಮನಕ್ಕೆ ತಂದರು. `ಡಿಸ್ಕವರಿ’ ಚಾನೆಲ್‌ನಲ್ಲಿ ಪ್ರಸಾರ ಮಾಡಿರುವ ಸಾಕ್ಷ್ಯಚಿತ್ರವು ಸಾರ್ವಜನಿಕ ಹಿತಾಸಕ್ತಿಯನ್ನು ಒಳಗೊಂಡಿದೆ.

ಇದು ಅಪರಾಧಿ ವ್ಯಕ್ತಿಯ ಚಟುವಟಿಕೆಗಳ ಮೇಲೆ ಬೆಳಕು ಚೆಲ್ಲುವುದರ ಜತೆಗೆ ವೀಕ್ಷಕರಿಗೆ ಅಂಧಶ್ರದ್ಧೆ ಮತ್ತು ಆರಾಧನೆಗಳ ಸಮತೋಲಿತ ದೃಷ್ಟಿಕೋನ ನೀಡುವ ಉದ್ದೇಶವನ್ನು ಹೊಂದಿದೆ ಎಂದು ಅಭಿನವ್ ಮುಖರ್ಜಿ ವಾದರಿಸಿದ್ದಾರೆ.

`ಡಿಸ್ಕವರಿ’ ಚಾನೆಲ್‌ನ ಸಿಬ್ಬಂದಿಗೆ ಬೆದರಿಕೆ ಹಾಕುವ ಮೂಲಕ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಲು ಪ್ರಯತ್ನಿಸಲಾಗುತ್ತಿದೆ. ಇದು ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ಹಾನಿಕರ ಮತ್ತು ಕ್ರಿಮಿನಲ್ ಕೃತ್ಯ ಎಂದು ಮುಖರ್ಜಿ ಹೇಳಿದ್ದಾರೆ.

Related Posts

Leave a Reply

Your email address will not be published. Required fields are marked *