Menu

ಬಿಜೆಪಿ, ದಳದ ಟೀಕೆಗಳು ಸತ್ತಿವೆ. ನಮ್ಮ ಯೋಜನೆಗಳು ಶಾಶ್ವತವಾಗಿ ಉಳಿಯಲಿವೆ: ಡಿ.ಕೆ. ಶಿವಕುಮಾರ್

dk shivakumar

ಪಿರಿಯಾಪಟ್ಟಣ: “ಪಿರಿಯಾಪಟ್ಟಣದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ಹಾಗೂ ಉದ್ಘಾಟನೆ ಮಾಡಲಾಗಿದ್ದು, ಇದರಿಂದ ಬಿಜೆಪಿ ಹಾಗೂ ದಳದ ಟೀಕೆಗಳು ಸತ್ತಿವೆ. ನಮ್ಮ ಸರ್ಕಾರದ ಯೋಜನೆಗಳು ಶಾಶ್ವತವಾಗಿ ಉಳಿಯಲಿವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಶನಿವಾರ ನಡೆದ ವಿವಿಧ ಇಲಾಖೆಗಳ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ, ಉದ್ಘಾಟನಾ ಕಾರ್ಯಕ್ರಮ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಡಾ.ಬಾಬು ಜಗಜೀವನ್ ರಾಮ್ ಅವರ ಜಯಂತಿ ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮಾತನಾಡಿದರು.

“ಬಿಜೆಪಿ ಹಾಗೂ ದಳದವರು ಮಾತೆತ್ತಿದರೆ ಅಭಿವೃದ್ಧಿ ಇಲ್ಲ ಎನ್ನುತ್ತಿದ್ದಾರೆ. ನಮ್ಮ ಸರ್ಕಾರ ನಿಮ್ಮ ಒಂದೇ ತಾಲೂಕಿಗೆ ಸುಮಾರು ₹500 ಕೋಟಿ ಮೊತ್ತದ ಯೋಜನೆಗಳನ್ನು ನೀಡಿದೆ. ಇಂದು ನಡೆಯುತ್ತಿರುವ ಉದ್ಘಾಟನೆ ಅಭಿವೃದ್ಧಿಯಲ್ಲವೇ? ಮಲೆಮಹದೇಶ್ವರ ಬೆಟ್ಟದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಭಾಗದ ಜಿಲ್ಲೆಗಳಿಗೆ ₹3500 ಕೋಟಿಯಷ್ಟು ಯೋಜನೆಗಳಿಗೆ ಅನುಮೊದನೆ ನೀಡಲಾಗಿದೆ. ಇದು ಅಭಿವೃದ್ಧಿಯಲ್ಲವೇ? ಸಿದ್ದರಾಮಯ್ಯ ಅವರು 4 ಲಕ್ಷ ಕೋಟಿಗೂ ಹೆಚ್ಚಿನ ಬಜೆಟ್ ಮಂಡನೆ ಮಾಡಿದ್ದು ಅಭಿವೃದ್ಧಿಯಲ್ಲವೇ? ಬಡ ಕುಟುಂಬಗಳಿಗೆ ಪ್ರತಿ ತಿಂಗಳು 4-5 ಸಾವಿರ ಉಳಿತಾಯವಾಗುವಂತೆ ಮಾಡುತ್ತಿರುವುದು ಅಭಿವೃದ್ಧಿಯಲ್ಲವೇ? ಜನರು ಶಕ್ತಿಯುತವಾದರೆ ರಾಜ್ಯ ಹಾಗೂ ಸರ್ಕಾರ ಶಕ್ತಿಯುತವಾಗುತ್ತದೆ. ಇದು ಕಾಂಗ್ರೆಸ್ ಸರ್ಕಾರದ ಚಿಂತನೆ” ಎಂದು ತಿಳಿಸಿದರು.

“136 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿದ ಕಾರಣಕ್ಕೆ ನಿಮಗೆ ಎಷ್ಟು ಶಕ್ತಿ ಬಂದಿದೆ. ಬೆಲೆ ಏರಿಕೆಯಿಂದ ತತ್ತರಿಸುತ್ತಿರುವ ಜನರಿಗೆ ಆಸರೆಯಾಗಿದೆ. 200 ಯೂನಿಟ್ ವರೆಗೂ ಉಚಿತ ವಿದ್ಯುತ್, ಬಡ ಕುಟುಂಬದ ಮಹಿಳೆಗೆ ತಿಂಗಳಿಗೆ 2 ಸಾವಿರ, ಅನ್ನಭಾಗ್ಯ ಯೋಜನೆಯಲ್ಲಿ 10 ಕೆ.ಜಿ ಅಕ್ಕಿ, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ನಿರುದ್ಯೋಗಿ ಯುವಕರಿಗೆ ನಿರುದ್ಯೋಗ ಭತ್ಯೆ ನೀಡಲಾಗುತ್ತಿದೆ. ಇಂತಹ ಯೋಜನೆಗಳನ್ನು ಜನತಾ ದಳ ಹಾಗೂ ಬಿಜೆಪಿಯವರು ನೀಡಿದ್ದರಾ? ಯಡಿಯೂರಪ್ಪ, ಕುಮಾರಸ್ವಾಮಿ, ದೇವೇಗೌಡರು ಮಾಡಿದ್ದರಾ? ಇಂತಹ ಯೋಜನೆಗಳನ್ನು ಜಾರಿಗೆ ತಂದಿದ್ದರೆ ಅದು ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್, ವೆಂಕಟೇಶ್, ಬೈರತಿ ಸುರೇಶ್, ಮಹದೇವಪ್ಪ ಅವರ ಸರ್ಕಾರ” ಎಂದು ಹೇಳಿದರು.

“ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೊದಲ ಸಚಿವ ಸಂಪುಟ ಸಭೆಯಲ್ಲಿ ಐದು ಗ್ಯಾರಂಟಿ ಯೋಜನೆ ನೀಡಲು ತೀರ್ಮಾನ ಮಾಡಿದೆವು. ಬಜೆಟ್ ನಲ್ಲಿ ಗ್ಯಾರಂಟಿ ಯೋಜನೆಗಳಿಗೆ 52 ಸಾವಿರ ಕೋಟಿ ಇಟ್ಟಿದ್ದೇವೆ. ನಮ್ಮ ಈ ಯೋಜನೆಗಳಿಂದ ರಾಜ್ಯ ದಿವಾಳಿಯಾಗುತ್ತದೆ ಎಂದು ಪ್ರಧಾನಮಂತ್ರಿಗಳಿಂದ ಹಿಡಿದು ಎಲ್ಲರೂ ಟೀಕೆ ಮಾಡಿದರು. ಈಗ ಎಲ್ಲಾ ರಾಜ್ಯಗಳಲ್ಲೂ ನಮಗಿಂತ ಮುಂಚೆ ಅವರೇ ಘೋಷಣೆ ಮಾಡುತ್ತಿದ್ದಾರೆ. ಬಿಜೆಪಿಯವರು ನಮ್ಮ ಯೋಜನೆಗಳಿಗೆ ಬೇರೆ ಹೆಸರುಗಳನ್ನು ಇಟ್ಟುಕೊಂಡಿದ್ದಾರೆ” ಎಂದು ವ್ಯಂಗ್ಯವಾಡಿದರು.

“ನಮ್ಮ ಸರ್ಕಾರ ಎಲ್ಲಾ ವರ್ಗದ ಜನರಿಗೆ ಯೋಜನೆ ನೀಡುತ್ತಾ ಬಂದಿದೆ. ಎಲ್ಲಾ ಜಾತಿ, ಧರ್ಮದವರಿಗೆ ಗ್ಯಾರಂಟಿ ಯೋಜನೆ ನೀಡುತ್ತಿದ್ದೇವೆ. ಈ ಭೂಮಿ ಮೇಲೆ ಇರುವುದು ಒಂದೇ ಜಾತಿ ಅದು ಮಾನವ ಜಾತಿ. ಇದು ನಮ್ಮ ಸರ್ಕಾರದ ನಂಬಿಕೆ. ಬಸವಣ್ಣನವರ ಆಚಾರ ವಿಚಾರದ ಮೇಲೆ ಸರ್ಕಾರ ನಂಬಿಕೆ ಇಟ್ಟಿದೆ” ಎಂದರು.

“ಟೀಕೆ ಮಾಡುವವರು ಇರಬೇಕು. ಟೀಕೆ ಮಾಡುವವರು ಇದ್ದಾಗ ಮಾತ್ರ ನಮಗೆ ಸಕ್ತಿ ಬರುತ್ತದೆ. ಟೀಕೆ ಮಾಡುವವರನ್ನು ನಾವು ತಡೆಯಬಾರದು. ಅವರು ಟೀಕೆ ಮಾಡಿದರೆ ನಾವು ಸರಿಯಾದ ದಾರಿಯಲ್ಲಿ ಹೋಗುತ್ತೇವೆ. ಟೀಕೆಗಳನ್ನು ನಾನು ಸದಾ ಸ್ವಾಗತಿಸುತ್ತೇನೆ. ಕಾರಣ, ಟೀಕೆಗಳು ಸಾಯುತ್ತವೆ ನಮ್ಮ ಕೆಲಸಗಳು ಉಳಿಯುತ್ತವೆ. ಬಿಜೆಪಿ ಹಾಗೂ ದಳದ ನಾಯಕರು ಮಾಡುತ್ತಿದ್ದ ಟೀಕೆಗಳು ಸತ್ತು ಹೋಗಿವೆ. ನಮ್ಮ ಸರ್ಕಾರ ಕೈಗೊಂಡಿರುವ ಕೆಲಸಗಳು ಶಾಶ್ವತವಾಗಿ ಉಳಿಯಲಿವೆ. ಇದೊಂದು ಇತಿಹಾಸ. ಇತಿಹಾಸ ಮರೆತವ, ಇತಿಹಾಸ ಸೃಷ್ಟಿಸಲಾರ” ಎಂದು ಅಭಿಪ್ರಾಯಪಟ್ಟರು.

ಅಂಬೇಡ್ಕರ್, ಜಗಜೀವನ್ ರಾಮ್ ಅವರು ನಮ್ಮ ಎರಡು ಕಣ್ಣುಗಳು:

“ಈ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಹಾಗೂ ಜಗಜೀವನ್ ರಾಮ್ ಅವರನ್ನು ಸ್ಮರಿಸುತ್ತಾ ಅವರು ಕೊಟ್ಟಿರುವ ಸಂವಿಧಾನವನ್ನು ರಕ್ಷಣೆ ಮಾಡಿಕೊಳ್ಳುವ ಬಗ್ಗೆ ಚರ್ಚೆ ಮಾಡಿದ್ದೇವೆ. ಇವರಿಬ್ಬರು ನಮ್ಮ ಎರಡು ಕಣ್ಣುಗಳಿದ್ದಂತೆ. ಜಗಜೀವನ್ ರಾಮ್ ಅವರು ದೇಶದ ಕೃಷಿ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಸುಮಾರು 35 ವರ್ಷಗಳ ಕಾಲ ಸಚಿವರಾಗಿದ್ದರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಜಗಜೀವನ್ ರಾಮ್ ಅವರು ನಿಭಾಯಿಸದ ಖಾತೆಗಳಿಲ್ಲ ಎನ್ನಬಹುದು. ಇಂತಹ ದೊಡ್ಡ ನಾಯಕರು ಬಾಬು ಜಗಜೀವನ್ ರಾಮ್” ಎಂದು ತಿಳಿಸಿದರು.

“ನಾವು ಹಚ್ಚುವ ದೀಪ ಮಾತನಾಡುವುದಿಲ್ಲ, ಅದರಿಂದ ಬರುವ ಬೆಳಕು ಅದನ್ನು ಪರಿಚಯಿಸುತ್ತದೆ. ನಿಮ್ಮ ಬದುಕಿನಲ್ಲಿ ದೀಪ ಬೆಳಗಲು ಇಂದು ಈ ಕಾರ್ಯಕ್ರಮದಲ್ಲಿ ದೀಪ ಬೆಳಗುವ ಮೂಲಕ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಾಗಿದೆ” ಎಂದರು.

ಪಿರಿಯಾಪಟ್ಟಣದಲ್ಲಿ ಅಭಿವೃದ್ಧಿ ಜಾತ್ರೆ:

“ಇಂದು ಪಿರಿಯಾಪಟ್ಟಣದಲ್ಲಿ ಅಭಿವೃದ್ಧಿಯ ಜಾತ್ರೆ ನಡೆಯುತ್ತಿದೆ. 47 ಮೆ.ವ್ಯಾಟ್ ಸೌರ ವಿದ್ಯುತ್ ಉತ್ಪಾದನೆ ಮಾಡಲು 140 ಕೋಟಿ ಮೊತ್ತದ ಯೋಜನೆಯನ್ನು ಪ್ರಾರಂಭಿಸಲಾಗಿದೆ. ನಮ್ಮ ತಾಲೂಕಿನಲ್ಲಿ 20 ಮೆ.ವ್ಯಾಟ್ ಸೌರ ವಿದ್ಯುತ್ ಉತ್ಪಾದನಾ ಘಟಕ ಸ್ಥಾಪಿಸಲಾಗಿದೆ. ಈ ಭಾಗದಲ್ಲಿ ಆನೆ ಹಾವಳಿ ಹೆಚ್ಚಾಗಿದೆ. ರಾತ್ರಿ ವೇಳೆ ಜಮೀನಿನಲ್ಲಿ ನೀರು ಕಟ್ಟಲು ಸಾಧ್ಯವಾಗುವುದಿಲ್ಲ. ಇದರಿಂದ ಹಗಲಿನಲ್ಲೇ ರೈತರ ಪಂಪ್ ಸೆಟ್ ಗೆ ವಿದ್ಯುತ್ ಪೂರೈಸಬಹುದು. ಕಾಂಗ್ರೆಸ್ ಸರ್ಕಾರವೇ ರೈತರಿಗೆ ಉಚಿತ ವಿದ್ಯುತ್ ಪೂರೈಸಲು ತೀರ್ಮಾನ ಮಾಡಿತು. ನಂತರ ಸಿದ್ದರಾಮಯ್ಯ ಅವರ ಕಳೆದ ಸರ್ಕಾರದಲ್ಲಿ ನಾನು ಇಂಧನ ಸಚಿವನಾಗಿದ್ದಾಗ, ರೈತರಿಗೆ ನೀಡುವ ವಿದ್ಯುತ್ ಅವಧಿಯನ್ನು 6ರಿಂದ 7 ಗಂಟೆಗೆ ಏರಿಸಲಾಯಿತು” ಎಂದರು.

“ವೆಂಕಟೇಶ್ ಅವರು ಈ ಹಿಂದೆ 300 ಕೋಟಿ ವೆಚ್ಚದ 150 ಕೆರೆಗಳಿಗೆ ನೀರು ತುಂಬಿಸುವ ಕೆಲಸ ಮಾಡಿದ್ದರು. ಈಗ 110 ಕೋಟಿ ವೆಚ್ಚದಲ್ಲಿ 25 ಕಾಮಗಾರಿಗಳು, 64 ಕೋಟಿ ವೆಚ್ಚದ ಯೋಜನೆ, ಹಾರಂಗಿ ಜಲಾಶಯ ವ್ಯಾಪ್ತಿಯ ಪಿರಿಯಾಪಟ್ಟಣ ಏತ ನೀರಾವರಿ ಯೋಜನೆಗೆ 198 ಕೋಟಿ ಅನುದಾನವನ್ನು ಮೊನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಈ ಭಾಗದ ಜನರಿಗೆ ಅನುಕೂಲ ಮಾಡಿಕೊಡಲು ಈ ಯೋಜನೆಗಳನ್ನು ನೀಡಲಾಗಿದೆ” ಎಂದು ಹೇಳಿದರು.

“ನಮಗೆ ಸಿಕ್ಕ ಅವಕಾಶದಲ್ಲಿ ನಾವು ಏನು ಸಾಕ್ಷಿಗುಡ್ಡೆ ಮಾಡುತ್ತೇವೆ ಎಂಬುದು ಮುಖ್ಯ. ವೆಂಕಟೇಶ್ ಅವರು ಈ ಕ್ಷೇತ್ರದ ಶಾಸಕರಾಗಿ ಅನೇಕ ಸಾಕ್ಷಿಗುಡ್ಡೆಗಳನ್ನು ಸೃಷ್ಟಿಸಿದ್ದಾರೆ. ಅವರ ಕಾರ್ಯವೈಖರಿ ನೋಡಿದರೆ ಅಧಿಕಾರ ನಶ್ವರ, ಸಾಧನೆ ಅಜರಾಮರ, ಮತದಾರನೇ ಈಶ್ವರ ಎಂಬುದು ತಿಳಿಯುತ್ತದೆ. ವೆಂಕಟೇಶ್ ಅವರು ಮತದಾರರ ಋಣ ತೀರಿಸುವ ಕೆಲಸ ಮಾಡುತ್ತಿದ್ದಾರೆ. ಸಾವಿರಾರು ರೈತರಿಗೆ ನೆರವಾಗಲು ನಮ್ಮ ಮೇಲೆ ಒತ್ತಡ ಹಾಕಿ ಈ ಯೋಜನೆಗಳನ್ನು ತಂದಿದ್ದಾರೆ. ನನ್ನ ಭಕ್ತಿಯೇ ನನ್ನ ಜಾತಿ, ನನ್ನ ಕರ್ಮವೇ ನನ್ನ ಧರ್ಮ ಎಂಬ ರವಿದಾಸರ ಮಾತಿನಂತೆ ವೆಂಕಟೇಶ್ ಅವರು ಎಲ್ಲಾ ವರ್ಗದ ಜನರಿಗೆ ಸೇವೆ ಮಾಡುವ ಕೆಲಸ ಮಾಡುತ್ತಿದ್ದಾರೆ” ಎಂದು ತಿಳಿಸಿದರು.

“ಮುಖ್ಯಮಂತ್ರಿಗಳು ವೆಂಕಟೇಶ್ ಅವರಿಗೆ ಎರಡು ಪ್ರಮುಖ ಖಾತೆ ನೀಡಿದ್ದಾರೆ. ಇವುಗಳು ದೊಡ್ಡ ಖಾತೆಯಲ್ಲವಾದರೂ ರೈತರ ಬದುಕು ಬದಲಾವಣೆ ಮಾಡಲು ರೇಷ್ಮೆ ಹಾಗೂ ಹಾಲಿನ ಜವಾಬ್ದಾರಿ ನೀಡಿದ್ದಾರೆ. ನಮ್ಮ ತಾಲೂಕಿನಲ್ಲಿ ಅತಿ ಹೆಚ್ಚು ರೇಷ್ಮೆ ಬೆಳೆಯುತ್ತೇವೆ. ಇಲ್ಲಿ ನಾಲ್ಕು ಸೀರೆ ತಗೊಂಡೆ ಸಚಿವ ವೆಂಕಟೇಶ್ ಅವರೇ ಹಣ ಪಾವತಿಸುವುದಾಗಿ ಹೇಳಿದರು. ಹಾಲು ಉತ್ಪಾದನೆ ಮಾಡುವ ಪಶುಸಂಗೋಪನಾ ಇಲಾಖೆ ನೀಡಲಾಗಿದೆ. ನಿಮ್ಮ ತಾಲೂಕಿನಲ್ಲಿ ಭೂಮಿ ನೋಡಿದೆ ಇಲ್ಲೂ ಕೆಂಪು ಮಣ್ಣಿನ ಭೂ ಪ್ರದೇಶವಿದೆ. ಇಲ್ಲೂ ಉತ್ತಮ ರೇಷ್ಮೆ ಬೆಳೆಯಬಹುದು. ರೇಷ್ಮೆ 600 ರೂನಿಂದ 900ಕ್ಕೆ ಏರಿದೆ. ನಾನು 25 ಎಕರೆಯಲ್ಲಿ ರೇಷ್ಮೆ ಬೆಳೆ ಹಾಕಿದ್ದೇನೆ” ಎಂದು ಹೇಳಿದರು.

“ಪ್ರಜೆಗಳನ್ನು ಕಡೆಗಣಿಸಿ ಯಾವ ಕೆಲಸವನ್ನು ಮಾಡಿದರೂ ಪ್ರಯೋಜನವಿಲ್ಲ ಎಂದು ಮಹಾತ್ಮಾ ಗಾಂಧಿ ಅವರು ಹೇಳಿದ್ದಾರೆ. ಪ್ರತಿಯೊಂದು ಕಾರ್ಯಕ್ರಮ ಮಾಡುವಾಗ ಜನರನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡಬೇಕು. ಹೀಗಾಗಿ ವೆಂಕಟೇಶ್ ಅವರು ಅವರಿಗೆ ಸಿಕ್ಕ ಅವಕಾಶದಲ್ಲಿ ನಿಮ್ಮ ಬದುಕಿನ ಬಗ್ಗೆ ಆಲೋಚನೆ ಮಾಡಿ ಅನೇಕ ಕಾರ್ಯಕ್ರಮ ನೀಡಿದ್ದಾರೆ” ಎಂದು ತಿಳಿಸಿದರು.

“ವೆಂಕಟೇಶ್ ಅವರು ಯಾವುದೇ ಕೆಲಸ ಮಾಡಿದರೂ, ಬಡವರು ರೈತರ ಬದುಕಿಗೆ ನೆರವಾಗಲಿ ಎಂದು ಬಹಳ ಪ್ರೀತಿ ಹಾಗೂ ಮಮಕಾರದಿಂದ ಕೆಲಸ ಮಾಡುತ್ತಿದ್ದಾರೆ.ವೆಂಕಟೇಶ್ ಅವರ ಮೇಲೆ ಬಹಳ ದೊಡ್ಡ ಜವಾಬ್ದಾರಿಯಿದೆ. ಇಲ್ಲಿನ ವಸ್ತು ಪ್ರದರ್ಶನ ನೋಡಿಕೊಂಡು ಬಂದೆ, ಇಲ್ಲಿ ಎಲ್ಲಾ ವರ್ಗ, ಇಲಾಖೆಗೂ ಅವಕಾಶ ನೀಡಿ ಕೆಲಸ ಮಾಡುತ್ತಿದ್ದಾರೆ. ಸಾಧನೆ ಇಲ್ಲದೆ ಸತ್ತರೆ ಸಾವಿಗೆ ಅಪಮಾನ, ಆದರ್ಶ ಇಲ್ಲದೆ ಬದುಕಿದರೆ ಬದುಕಿಗೆ ಅಪಮಾನ, ಅದೇ ರೀತಿ ವೆಂಕಟೇಶ್ ಅವರು ತಮ್ಮ ಕ್ಷೇತ್ರದ ಜನರ ಋಣ ತೀರಿಸಲು ಸಂಕಲ್ಪ ಮಾಡಿದ್ದಾರೆ” ಎಂದರು.

“ವ್ಯಕ್ತಿ ಹುಟ್ಟಿದ ತಕ್ಷಣ ದೊಡ್ಡವನಾಗುವುದಿಲ್ಲ. ಆತನ ಗುಣ, ಕೆಲಸ, ಸೇವೆಯಿಂದ ದೊಡ್ಡ ವ್ಯಕ್ತಿಯಾಗುತ್ತಾನೆ. ಹೀಗಾಗಿ ನೀವು ಈ ಜಿಲ್ಲೆಯಲ್ಲಿ ವೆಂಕಟೇಶ್ ಹಾಗೂ ಇತರರು ಸೇರಿದಂತೆ ರಾಜ್ಯದಲ್ಲಿ ನನ್ನ ಅಧ್ಯಕ್ಷತೆ ಹಾಗೂ ಸಿದ್ದರಾಮಯ್ಯ ಅವರ ಮುಖಂಡತ್ವದಲ್ಲಿ 136 ಶಾಸಕರನ್ನು ಗೆಲ್ಲಿಸಿ ರಾಜ್ಯದ ಸೇವೆ ಮಾಡಲು ಅವಕಾಶ ನೀಡಿದ್ದೀರಿ. ನೀವಗೆ ಸಾಷ್ಟಾಂಗ ನಮನ ಸಲ್ಲಿಸುತ್ತೇನೆ” ಎಂದು ಹೇಳಿದರು.

“ನನ್ನ ಆತ್ಮೀಯ ಮಿತ್ರ ವೆಂಕಟೇಶ್ ಅವರ ಪರವಾಗಿ ಇಡೀ ಸರ್ಕಾರ ನಿಂತಿದೆ ಎಂದು ಹೇಳಲು ನಾವಿಲ್ಲಿಗೆ ಬಂದಿದ್ದೇವೆ. ನಾನು ಚುನಾವಣೆ ಸಮಯದಲ್ಲಿ ಪ್ರಚಾರಕ್ಕೆ ಬಂದಾಗ ಕಮಲ ಕೆರೆಯಲ್ಲಿದ್ದರೆ ಚೆಂದ, ತೆನೆ ಹೊಲದಲ್ಲಿದ್ದರೆ ಚೆಂದ, ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದರೆ ಚೆಂದ. ದಾನ ಧರ್ಮ ಮಾಡುವ ಕೈ ಅಧಿಕಾರಕ್ಕೆ ಬಂದ ಕಾರಣಕ್ಕೆ ಗ್ಯಾರಂಟಿ ಯೋಜನೆಗಳು ಜಾರಿಯಾದವು. ಐದು ಬೆರಳು ಸೇರಿ ಕೈ ಮುಷ್ಠಿಯಾಯಿತು, ಐದು ಗ್ಯಾರಂಟಿ ಸೇರಿ ಕೈ ಗಟ್ಟಿಯಾಯಿತು. ಈ ಕೈಗೆ ಆಶೀರ್ವಾದ ಮಾಡಿರುವ ನಿಮ್ಮ ಸೇವೆಗೆ ನಮ್ಮ ಸರ್ಕಾರ ಬದ್ಧವಾಗಿದೆ” ಎಂದು ತಿಳಿಸಿದರು.

Related Posts

Leave a Reply

Your email address will not be published. Required fields are marked *