ಆರ್ಯಭಟ ಉಪಗ್ರಹ ಕಕ್ಷೆಯನ್ನು ಸೇರಿದ ಐದೇ ದಿನದಲ್ಲಿ ವಿದ್ಯುತ್ ವೈಫಲ್ಯಕ್ಕೆ ಒಳಗಾಯಿತು. ಇದರ ಪರಿಣಾಮದಿಂದ ಭೂಮಿಯ ಸಂಪರ್ಕ ಕಡಿದುಕೊಂಡಿತು. ಅಂದರೆ ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಸಾಧಿಸುವುದು ಅಸಾಧ್ಯವಾಯಿತು. ಆದರೆ ಮೊದಲ ಪ್ರಯತ್ನದಲ್ಲಿ ಸ್ವಲ್ಪ ಹಿನ್ನೆಡೆಯಾದರೂ ಕೂಡ ಇಂದು ಬಾಹ್ಯಾಕಾಶದಲ್ಲಿ ಭಾರತ ಬರೆದ ಹಲವಾರು ಐತಿಹಾಸಿಕ ಸಾಧನೆಗಳಿಗೆ ಇದುವೇ ಭದ್ರ ಬುನಾದಿಯನ್ನು ಒದಗಿಸಿತ್ತು ಎಂದರೆ ತಪ್ಪಾಗಲಾರದು.
ದೇಶೀಯವಾಗಿ ನಿರ್ಮಿಸಿದ ಭಾರತದ ಮೊಟ್ಟ ಮೊದಲ ಉಪಗ್ರಹ ಆರ್ಯಭಟವನ್ನು ೧೯೭೫ರ ಏಪ್ರಿಲ್ ೧೯ರಂದು ರಷ್ಯಾದ ಕಪುಷ್ಟಿನ್ ಯಾರ್‌ನಿಂದ ಉಡಾ ವಣೆ ಮಾಡಲಾಯಿತು. ಈ ಉಡಾವಣೆಗೆ ಈಗ ೫೦ರ ಸಂಭ್ರಮಾಚರಣೆ. ಆರ್ಯಭಟ ಉಪಗ್ರಹ ನಿರ್ಮಾಣ ಕಾರ್ಯ ಆರಂಭವಾಗಿದ್ದು ಬೆಂಗಳೂರಿನಲ್ಲಿ. ಪ್ರಾಚೀನ ಭಾರತದ ಅದ್ವಿತೀಯ ಗಣಿತ ಶಾಸ್ತ್ರಜ್ಞ ಮತ್ತು ಖಗೋಳ ವಿಜ್ಞಾನಿ ಆರ್ಯಭಟರ ಗೌರವ ಸ್ಮರಣೆಗಾಗಿ ಆ ಉಪಗ್ರಹಕ್ಕೆ ಅವರ ಹೆಸರನ್ನು ಇಡಲಾಗಿತ್ತು. ಈ ಉಪಗ್ರಹ ಉಡಾವಣೆಯ ಮೂಲಕ ಈ ಮಹಾನ್ ವಿಜ್ಞಾನಿಯ ಹೆಸರು ಇಡೀ ಜಗತ್ತಿಗೆ ತಿಳಿಯುವಂತಾಯಿತು. ಆರ್ಯಭಟರು ಚಂದ್ರ ಗುಪ್ತ ವಿಕ್ರಮಾದಿತ್ಯನ ಆಸ್ಥಾನದಲ್ಲಿದ್ದ ಗೌರವಾನ್ವಿತ ಪಂಡಿತರಲ್ಲಿ ಒಬ್ಬರಾಗಿದ್ದರು. ಅವರೊಬ್ಬ ಕೇವಲ ಗಣಿತಜ್ಞ ಮತ್ತು ಖಗೋಳ ಶಾಸ್ತ್ರಜ್ಞ ಮಾತ್ರ ಆಗಿರ ಲಿಲ್ಲ, ಬದಲಾಗಿ ಮಹಾನ್ ತತ್ವಜ್ಞಾನಿಯೂ ಕೂಡ ಆಗಿದ್ದರು. ಭೂಮಿಯು ತನ್ನ ಅಕ್ಷದ ಮೇಲೆ ತಿರುಗುವ ಸೂರ್ಯ ಕೇಂದ್ರಿತ ಮಾದರಿಯನ್ನು ಪ್ರಸ್ತಾಪಿಸಿ ದರು. ಪೈ ಬೆಲೆಯನ್ನು ನಿಖರವಾಗಿ ೩.೧೪೧೬ ಎಂದು ಗುರುತಿಸಿದರು. ಶೂನ್ಯ ಮತ್ತು ಚಿಹ್ನೆ ಕಾರ್ಯಗಳ ಪರಿಕಲ್ಪನೆ ಪರಿಚಯಿಸಿದರು. ಗಮನಾರ್ಹ ನಿಖರತೆಯೊಂದಿಗೆ ನಕ್ಷತ್ರಗಳ ತಿರುಗುವಿಕೆ, ಸೂರ್ಯ ಮತ್ತು ಚಂದ್ರ ಗ್ರಹಣಗಳ ಕುರಿತು ಲೆಕ್ಕ ಹಾಕಿದರು. ಸಮಯ, ಬೀಜಗಣಿತ ಮತ್ತು ಅಂಕಗಣಿತ, ಕ್ಯಾಲೆಂಡರ್ ಲೆಕ್ಕಾಚಾರಗಳು, ಆಕಾಶ ಗೋಳ ಮತ್ತು ಗ್ರಹಗಳ ಚಲನೆ ಮುಂತಾದ ಅಧ್ಯಯನ ವಸ್ತುಗಳನ್ನು ಅವರ ಆರ್ಯಭಟಿಯಮ್ ಎಂಬ ಗ್ರಂಥ ಒಳಗೊಂಡಿದ್ದು, ಭಾರತೀಯ ಖಗೋಳ ವಿಜ್ಞಾನಕ್ಕೆ ಬುನಾದಿ ಯಾಗಿದೆ ಎಂದು ಹೇಳಲಾಗುತ್ತದೆ.
ಆರ್ಯಭಟ ಉಪಗ್ರಹ ನಿರ್ಮಾಣವು ಡಾ.ವಿಕ್ರಮ್ ಸಾರಾಭಾಯ್ ಮತ್ತು ಪ್ರೊ.ಯು.ಆರ್.ರಾವ್ ಅವರಂತಹ ವಿಜ್ಞಾನಿಗಳ ನೇತೃತ್ವದಲ್ಲಿ ಸೀಮಿತ ಸಂಪನ್ಮೂಲ ಗಳೊಂದಿಗೆ ಕೆಲಸ ಮಾಡುವ ೨೫ ಇಸ್ರೋ ಎಂಜಿನಿಯರ್‌ಗಳ ತಂಡವನ್ನು ಹೊಂದಿತ್ತು. ಈ ಉಪಗ್ರಹವು ೨೬ ಮುಖಗಳನ್ನು ಹೊಂದಿದ್ದು, ಸುಮಾರು ೧.೪ಮೀ ವ್ಯಾಸವನ್ನು ಹೊಂದಿತ್ತು. ಅದರ ೨೪ ಮುಖಗಳ ಮೇಲೆ ಸೌರಚಾಲಿತ ವಿದ್ಯುತ್ ಕೋಶಗಳನ್ನು ಅಳವಡಿಸಲಾಗಿತ್ತು. ಸೋವಿಯತ್ ಕಾಸ್ಮೋಸ್-೩ಎಂ ರಾಕೆಟ್ ಬಳಸಿ ಉಡಾವಣೆ ಮಾಡಲಾಯಿತು. ಈ ಉಪಗ್ರಹ ಉಡಾವಣೆಯ ವೈಜ್ಞಾನಿಕ ಉದ್ದೇಶಗಳೆಂದರೆ ಎಕ್ಸ್-ರೇ ಖಗೋಳ ಭೌತಶಾಸ್ತ್ರ ಪ್ರಯೋಗಗಳು, ಸೌರ ನ್ಯೂಟ್ರಾನ್ ಮತ್ತು ಗ್ಯಾಮಾ ಕಿರಣ ಪತ್ತೆ, ಮೇಲಿನ ವಾತಾವರಣದ ಅಧ್ಯಯನ ಒಳಗೊಂಡಿತ್ತು. ಆದರೆ ಈ ಉಪಗ್ರಹ ಕಕ್ಷೆಯನ್ನು ಸೇರಿದ ಐದೇ ದಿನದಲ್ಲಿ ವಿದ್ಯುತ್ ವೈಫಲ್ಯಕ್ಕೆ ಒಳಗಾಯಿತು. ಇದರ ಪರಿಣಾಮದಿಂದ ಭೂಮಿಯ ಸಂಪರ್ಕ ಕಡಿದುಕೊಂಡಿತು.
ಅಂದರೆ ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಸಾಧಿಸುವುದು ಅಸಾಧ್ಯವಾಯಿತು. ಆದರೆ ಮೊದಲ ಪ್ರಯತ್ನದಲ್ಲಿ ಸ್ವಲ್ಪ ಹಿನ್ನೆಡೆಯಾದರೂ ಕೂಡ ಇಂದು ಬಾಹ್ಯಾಕಾಶ ದಲ್ಲಿ ಭಾರತ ಬರೆದ ಹಲವಾರು ಐತಿಹಾಸಿಕ ಸಾಧನೆಗಳಿಗೆ ಇದುವೇ ಭದ್ರ ಬುನಾದಿಯನ್ನು ಒದಗಿಸಿತ್ತು ಎಂದರೆ ತಪ್ಪಾಗಲಾರದು. ಅಷ್ಟೇ ಅಲ್ಲ, ಬಾಹ್ಯಾಕಾಶ ಕ್ಷೇತ್ರದಲ್ಲಿ ಹಲವಾರು ಗಣ್ಯ ರಾಷ್ಟ್ರಗಳ ಸಾಲಿನಲ್ಲಿ ಭಾರತದ ಪ್ರವೇಶವನ್ನು ಜಗತ್ತು ಗುರುತಿಸುವಂತೆ ಮಾಡಿದ್ದು ಕೂಡ ಈ ಉಪಗ್ರಹ ಉಡಾವಣೆಯಿಂದಲೇ. ಆರ್ಯಭಟ ಉಪಗ್ರಹದ ಮಹತ್ವವನ್ನು ಸಾರುವ ಉzಶದಿಂದ ಭಾರತೀಯ ರಿಸರ್ವ್ ಬ್ಯಾಂಕ್ ೧೯೭೬ರಿಂದ ೧೯೯೭ರ ನಡುವೆ ಮುದ್ರಣವಾದ ಎರಡು ರೂಪಾಯಿಗಳ ನೋಟಿನಲ್ಲಿ ಉಪಗ್ರಹದ ಚಿತ್ರವನ್ನು ಮುದ್ರಿಸಿತು. ಈ ಉಪಗ್ರಹ ಉಡಾವಣೆಯಿಂದ ಉಪಗ್ರಹ ವಿನ್ಯಾಸ, ಉಪಗ್ರಹ ಯೋಜನೆಗಳು, ಉಪಗ್ರಹ ಉಡಾವಣೆಯ ಸವಾಲುಗಳನ್ನು ಅರ್ಥೈಸಿಕೊಳ್ಳುವಲ್ಲಿಯೂ ತುಂಬಾ ಸಹಾಯಕವಾಯಿತು.
ಒಟ್ಟಾರೆಯಾಗಿ ‘ಸಾವಿರ ಮೈಲುಗಳ ಪ್ರಯಾಣವು ಒಂದು ಹೆಜ್ಜೆಯಿಂದ ಪ್ರಾರಂಭವಾಗುತ್ತದೆ’ ಎಂಬ ಉಲ್ಲೇಖದಂತೆ ಅಂದು ಆರ್ಯಭಟ ಉಪಗ್ರಹ ಉಡಾವಣೆ ಯಿಂದ ಆರಂಭವಾದ ಮೊದಲ ಹೆಜ್ಜೆಯ ಪ್ರಯಾಣ ಇಂದು ಯಶಸ್ವಿಯಾಗಿ ಸಾವಿರಾರು ಮೈಲುಗಳನ್ನು ಕ್ರಮಿಸುತ್ತಾ ಸಾಗುತ್ತಿರುವುದು ನಾವೆಲ್ಲರೂ ಸಂಭ್ರಮಿಸ ಬೇಕಾದ ಕ್ಷಣವಾಗಿದೆ. ಇಸ್ರೋದ ಯಾತ್ರೆಯು ಅತೀ ಕಡಿಮೆ ವೆಚ್ಚದಲ್ಲಿ ಮಂಗಳ ಗ್ರಹದ ವಿಶೇಷತೆ ಕುರಿತು ಅಧ್ಯಯನಕ್ಕಾಗಿ ಮಂಗಳಯಾನ ಹಾಗೂ ಚಂದ್ರಯಾನ-೩ ಯೋಜನೆಯ ಮೂಲಕ ಚಂದ್ರನ ದಕ್ಷಿಣ ಧ್ರುವದಲ್ಲಿ ರೋವರ್ ಇಳಿಸಿದ ವಿಶ್ವದ ಮೊದಲ ರಾಷ್ಟ್ರ ಎಂಬ ಖ್ಯಾತಿಗೂ ಕಾರಣವಾಯಿತು.
೨೦೧೭ರ ಫೆಬ್ರುವರಿಯಲ್ಲಿ-೧೫ರಂದು ಇಸ್ರೋ ಸಂಸ್ಥೆಯು ೧೦೪ ಉಪಗ್ರಹಗಳನ್ನು ಉಡಾವಣೆ ಮಾಡುವ ಮೂಲಕ ಒಂದೇ ರಾಕೆಟ್‌ನಲ್ಲಿ ಅತಿ ಹೆಚ್ಚು ಉಪಗ್ರಹಗಳನ್ನು ಉಡಾವಣೆ ಮಾಡಿದ ರಾಷ್ಟ್ರ ಎಂಬ ದಾಖಲೆಯನ್ನು ಬರೆಯಿತು. ಸೂರ್ಯನ ಅಧ್ಯಯನದ ಉzಶಕ್ಕಾಗಿ ಆದಿತ್ಯ ಎಲ್-೧ ಯೋಜನೆ, ತನ್ನದೇ ಆದ ಬಾಹ್ಯಾಕಾಶ ನಿಲ್ದಾಣವನ್ನು ನಿರ್ಮಿಸುವ ಗುರಿ, ಮಾನವಸಹಿತ ಬಾಹ್ಯಾಕಾಶ ಯಾನಕ್ಕೆ ಹಲವಾರು ಹಂತದ ಸಿದ್ಧತೆಗಳು ಕೂಡ ನಡೆಯುತ್ತಿರುವುದು ಭಾರತೀಯರಾದ ನಮಗೆ ತುಂಬಾ ಗರ್ವ ಪಡುವ ಸಂಗತಿಗಳಾಗಿವೆ. ಈ ಎಲ್ಲ ಸಾಧನೆಗಳ ಹಿಂದಿರುವ ನಮ್ಮ ಹೆಮ್ಮೆಯ ಇಸ್ರೋದ ವಿಜ್ಞಾನಿಗಳ ತಂಡದ ಕಾರ್ಯವನ್ನು ಶ್ಲಾಘಿಸೋಣ.
-ರಾಜು ಭೂಶೆಟ್ಟಿ
ಲೇಖಕರು, ಹುಬ್ಬಳ್ಳಿ