Menu

ಕಲೆ ರಾಜ್ಯದ ಸಂಸ್ಕೃತಿಯ ಕನ್ನಡಿ: ಮುಖ್ಯಮಂತ್ರಿ

ಕಲೆ ರಾಜ್ಯದ ಸಂಸ್ಕೃತಿಯ ಕನ್ನಡಿ ಇದ್ದಂತೆ. ಕಲಾವಿದರು,ಕಲಾಸಕ್ತರಿಗೆ ಚಿತ್ರಸಂತೆ ವೇದಿಕೆಯನ್ನು ಕಲ್ಪಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.  ಕರ್ನಾಟಕ ಚಿತ್ರಕಲಾ ಪರಿಷತ್ತು  ವತಿಯಿಂದ ಬೆಂಗಳೂರಿನ ಕುಮಾರ ಕೃಪಾ ರಸ್ತೆಯಲ್ಲಿರುವ ಕರ್ನಾಟಕ ಚಿತ್ರಕಲಾ ಪರಿಷತ್ತು ಆವರಣದಲ್ಲಿ ಆಯೋಜಿಸಲಾಗಿದ್ದ 23 ನೇ ಚಿತ್ರ ಸಂತೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಮುಖ್ಯಮಂತ್ರಿಯಾಗಿ 8ನೇ ಬಾರಿ ಚಿತ್ರ ಸಂತೆಯಲ್ಲಿ ಭಾಗವಹಿಸುತ್ತಿರುವುದಾಗಿ ತಿಳಿಸಿದ ಮುಖ್ಯಮಂತ್ರಿಗಳು ಕಲಾವಿದರನ್ನು ಪ್ರೋತ್ಸಾಹಿಸುವುದು, ಅವರ ಚಿತ್ರಗಳ ಪ್ರದರ್ಶನ ಹಾಗೂ ಅವುಗಳ ಮಾರಾಟಕ್ಕೆ ವೇದಿಕೆ ಸೃಷ್ಟಿ ಮಾಡುವ ಕೆಲಸವನ್ನು ಚಿತ್ರಕಲಾ ಪರಿಷತ್ತು ಅರವತ್ತು ವರ್ಷಗಳಿಂದ ಮಾಡುತ್ತಾ ಬಂದಿದೆ. ಚಿತ್ರಸಂತೆ ತನ್ನ 23 ನೇ ವರ್ಷಕ್ಕೆ ಕಾಲಿಟ್ಟಿದೆ. ಸುಮಾರು 22 ರಾಜ್ಯಗಳು ನಾಲ್ಕು ಕೇಂದ್ರಾಡಳಿತ ಪ್ರದೇಶಗಳು ಕಾರ್ಯಕ್ರಮದಲ್ಲಿ ಭಾಗವಹಿಸಿವೆ ಎಂದು ಹೇಳಿದರು.

ಪ್ರತಿ ಜಿಲ್ಲೆಯಲ್ಲಿಯೂ ಸಾಧಕರ ವಸ್ತುಸಂಗ್ರಹಾಲಯಕ್ಕೆ ಬೇಡಿಕೆಯಿದ್ದು ಸರ್ಕಾರ ಅದನ್ನು ಸಕಾರಾತ್ಮಕವಾಗಿ ಸ್ವೀಕಾರ ಮಾಡಲಿದೆ ಎಂದರು. ಈ ಬಾರಿಯ ಚಿತ್ರ ಸಂತೆಯ ಧ್ಯೇಯ ವಾಕ್ಯ ಪರಿಸರಕ್ಕೆ ಸಮರ್ಪಿಸಲಾಗಿದೆ. ಪರಿಸರವನ್ನು ನಾವು ರಕ್ಷಿಸಿ ದರೆ ಅದು ನಮ್ಮನ್ನು ರಕ್ಷಿಸುತ್ತದೆ. ಅದಕ್ಕಾಗಿ ಪರಿಸರದ ಬಗ್ಗೆ ಜ್ಞಾನ ಅಗತ್ಯ. ಈ ಕುರಿತು ಸರ್ಕಾರ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಬೆಂಗಳೂರು ಸೇರಿದಂತೆ ದೇಶದ ಅನೇಕ ರಾಜಧಾನಿಗಳಲ್ಲಿ ಪರಿಸರ ಮಾಲಿನ್ಯ ಹೆಚ್ಚಾಗಿದ್ದು, ದೆಹಲಿ ಯಲ್ಲಿ ಬದುಕಲು ಸಾಧ್ಯವಿಲ್ಲದ ವಾತಾವರಣ ನಿರ್ಮಾಣವಾಗುತ್ತಿದೆ. ಪರಿಸರದ ರಕ್ಷಣೆ ಇಂದಿನ ಅಗತ್ಯವಾಗಿದೆ ಎಂದರು.

ಪ್ರತಿ ವರ್ಷ ಮೂರರಿಂದ ಐದು ಕೋಟಿ ಸಸಿಗಳನ್ನು ನೆಡುವ ಕಾರ್ಯಕ್ರಮವನ್ನು ಸರ್ಕಾರದ ವತಿಯಿಂದ ಹಮ್ಮಿಕೊಳ್ಳಲಾಗಿದೆ. ಯಾವುದೇ ಪ್ರದೇಶದಲ್ಲಿ ಶೇ. 30ರಷ್ಟು ಕಾಡು ಇರಬೇಕು. ನಮ್ಮಲ್ಲಿ ಶೇಕಡ 20ರಷ್ಟು ಅರಣ್ಯ ಪ್ರದೇಶವಿದೆ. ಇದನ್ನು ಹೆಚ್ಚು ಮಾಡಲು ಪ್ರಾಮಾಣಿಕ ಪ್ರಯತ್ನವನ್ನು ಮಾಡಲಾಗುವುದು ಎಂದು ಮುಖ್ಯಮಂತ್ರಿಗಳು ಈ ಸಂದರ್ಭದಲ್ಲಿ ಭರವಸೆ ನೀಡಿದರು. ಸಾಲು ಮರದ ತಿಮ್ಮಕ್ಕ ನವರಂತೆ ಸಾರ್ವಜನಿಕರು ಗಿಡಗಳನ್ನು ನೆಡಬೇಕು. ಮಕ್ಕಳನ್ನು ಸಾಕಿದಂತೆ ಗಿಡಮರ ಗಳನ್ನು ಅವರು ಸಾಕಿದ್ದ ಕಾರಣ ಪ್ರಶಸ್ತಿಗಳು ದೊರೆಯಿತು. ಅವರ ಆತ್ಮಕ್ಕೆ ಶಾಂತಿ ದೊರಕಬೇಕಾದರೆ ನಾವೆಲ್ಲರೂ ಗಿಡ ಬೆಳೆಸುವ ಪ್ರಯತ್ನವನ್ನು ಮಾಡಬೇಕು ಎಂದು ತಿಳಿಸಿದರು.

ಪರಿಸರ ರಕ್ಷಣೆಗಾಗಿ ಹೋರಾಟವನ್ನೇ ಕೈಗೊಂಡ ಅನೇಕರು ನಮ್ಮ ನಡುವೆಯೇ ಇದ್ದಾರೆ. ಗಿಡ ನೆಡಲು ಬಹಳ ಖರ್ಚು ಆಗುವುದಿಲ್ಲ. ಮನಸ್ಸು ಮಾಡಬೇಕಷ್ಟೆ. ಸರ್ಕಾರ ಕೂಡ ಈ ದಿಕ್ಕಿನಲ್ಲಿ ಹೆಚ್ಚಿನ ಆಸಕ್ತಿ ವಹಿಸಲಿದೆ ಎಂದರು.  ಉನ್ನತ ಶಿಕ್ಷಣ ಸಚಿವ ಎಂ.ಸಿ. ಸುಧಾಕರ್, ಚಿತ್ರಕಲಾ ಪರಿಷತ್ ಅಧ್ಯಕ್ಷ ಬಿ.ಎಲ್.ಶಂಕರ್ ಮೊದಲಾದವರು ಉಪಸ್ಥಿತರಿದ್ದರು.

Related Posts

Leave a Reply

Your email address will not be published. Required fields are marked *