ಅತ್ಯಾಚಾರ ಪ್ರಕರಣದಲ್ಲಿ ಬಂಧಿತ ಪಂಜಾಬ್ ಎಎಪಿ ಶಾಸಕ ಮತ್ತು ಸಹಚರರು ಪೊಲೀಸರ ಮೇಲೆ ಗುಂಡು ಹಾರಿಸಿ ವಾಹನಗಳಲ್ಲಿ ಪರಾರಿಯಾಗಿದ್ದು ಪೊಲೀಸರು ಬಂಧಿಸಲು ಕಾರ್ಯಾಚರಣೆ ಕೈಗೊಂಡಿದ್ದಾರೆ.
ರೇಪ್ ಕೇಸ್‌ನಲ್ಲಿ ಸನೂರ್‌ನ ಎಎಪಿ ಶಾಸಕ ಹರ್ಮೀತ್ ಪಠಾಣಮಜ್ರಾ ಅವರನ್ನು ಕರ್ನಾಲ್‌ನಲ್ಲಿ ಬಂಧಿಸಿ ಸ್ಥಳೀಯ ಪೊಲೀಸ್ ಠಾಣೆಗೆ ಕರೆದೊಯ್ಯುತ್ತಿದ್ದಾಗ ಪಠಾಣಮಜ್ರಾ ಮತ್ತು ಸಹಚರರು ಪೊಲೀಸರ ಮೇಲೆ ಗುಂಡು ಹಾರಿಸಿ ಎರಡು ಎಸ್‌ಯುವಿಗಳಲ್ಲಿ ಪರಾರಿಯಾಗಿದ್ದಾರೆ.
ಪೊಲೀಸರು ಒಂದು ವಾಹನವನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಆರೋಪಿ ಶಾಸಕ ಇನ್ನೊಂದು ವಾಹನದಲ್ಲಿದ್ದರು, ಪೊಲೀಸ್ ತಂಡಗಳು ಅವರನ್ನು ಬೆನ್ನಟ್ಟಿದ್ದು ಹಿಡಿಯಲು ಮುಂದಾಗಿವೆ. ಪ್ರವಾಹದ ಕುರಿತು ತಮ್ಮದೇ ಪಕ್ಷದ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿ ಅದರ ಕೇಂದ್ರ ನಾಯಕತ್ವವನ್ನು ಪ್ರಶ್ನಿಸಿದ ಎಎಪಿ ಶಾಸಕ ಹರ್ಮೀತ್ ಸಿಂಗ್ ಪಠಾಣಮಜ್ರಾ ವಿರುದ್ಧ ಅತ್ಯಾಚಾರ ಆರೋಪದಡಿ ಪ್ರಕರಣ ದಾಖಲಾಗಿದೆ.
ಶಾಸಕ ವಿಚ್ಛೇದಿತ ಎಂದು ತಪ್ಪಾಗಿ ಬಿಂಬಿಸಿಕೊಂಡು ತನ್ನೊಂದಿಗೆ ಸಂಬಂಧ ಬೆಳೆಸಿ 2021ರಲ್ಲಿ ಮದುವೆಯಾಗಿದ್ದಾರೆ ಎಂದು ಆರೋಪಿಸಿ ಜಿರಾಕ್‌ಪುರ ಮೂಲದ ಮಹಿಳೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. ಶಾಸಕ ತನ್ನ ಮೇಲೆ ನಿರಂತರ ಲೈಂಗಿಕ ಶೋಷಣೆ ಎಸಗಿ ಬೆದರಿಕೆಯೊಡ್ಡಿ ಅಶ್ಲೀಲ ಸಂದೇಶಗಳನ್ನು ಕಳುಹಿಸುತ್ತಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಅಥವಾ ಬಿಜೆಪಿ ಸರ್ಕಾರಗಳ ಅವಧಿಯಲ್ಲಿ, ಕೇಂದ್ರ ನಾಯಕತ್ವವು ರಾಜ್ಯ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡಲಿಲ್ಲ. ಎಎಪಿ ನಾಯಕರು ಮೂಗು ತೂರಿಸುತ್ತಿದ್ದಾರೆ ಎಂದು ಹೇಳಿದ್ದೇನೆ, ಹೀಗಾಗಿ ನನ್ನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ನನ್ನ ವಿರುದ್ಧ ಎಫ್‌ಐಆರ್ ದಾಖಲಿಸಬಹುದು, ನಾನು ಜೈಲಿನಲ್ಲಿಯೇ ಇರಬಹುದು, ಆದರೆ ನನ್ನ ಧ್ವನಿಯನ್ನು ಹತ್ತಿಕ್ಕಲು ಸಾಧ್ಯವಿಲ್ಲ ಎಂದು ಪಠಾಣಮಜ್ರ ಹೇಳಿದ್ದರು.