14 ವರ್ಷಗಳ ನಂತರ ಭಾರತಕ್ಕೆ ಭೇಟಿ ನೀಡಿದ ಅರ್ಜೆಂಟೀನಾದ ಫುಟ್ಬಾಲ್ ದಂತಕಥೆ ಲಿಯೋನೆಲ್ ಮೆಸ್ಸಿ 70 ಅಡಿ ಎತ್ತರದ ತನ್ನದೇ ಪ್ರತಿಮೆಯನ್ನು ವರ್ಚುಯಲ್ ಆಗಿ ಅನಾವರಣಗೊಳಿಸಿದ್ದಾರೆ.
ಶನಿವಾರ ಮುಂಜಾನೆ ಕೋಲ್ಕತ್ತಾಗೆ ಆಗಮಿಸುವ ಮೂಲಕ ಮೆಸ್ಸಿ ‘ಗೋಟ್ ಟೂರ್ ಆಫ್ ಇಂಡಿಯಾ’ ಆರಂಭಿಸಿದರು. ಮೆಸ್ಸಿ ಜೊತೆಗೆ ಅವರ ಇಂಟರ್ ಮಿಯಾಮಿ ತಂಡದ ಆಟಗಾರರಾದ ರೊಡ್ರಿಗೋ ಡಿ ಪಾಲ್ ಮತ್ತು ಲೂಯಿಸ್ ಸುವಾರೆಜ್ ಸಹ ಭಾರತಕ್ಕೆ ಆಗಮಿಸಿದ್ದಾರೆ. 14 ವರ್ಷಗಳ ನಂತರ ಭಾರತಕ್ಕೆ ಮರಳಿದ ಮೆಸ್ಸಿಯನ್ನು ನೋಡಲು ಸಾವಿರಾರು ಅಭಿಮಾನಿಗಳು ವಿಮಾನ ನಿಲ್ದಾಣದಲ್ಲಿ ಜಮಾಯಿಸಿದರು. ಅವರು ಅರ್ಜೆಂಟೀನಾದ ಧ್ವಜಗಳನ್ನು ಬೀಸುತ್ತಾ ‘ಮೆಸ್ಸಿ ಮೆಸ್ಸಿ’ ಎಂದು ಘೋಷಣೆ ಕೂಗುತ್ತಾ ಭವ್ಯ ಸ್ವಾಗತ ನೀಡಿದರು.
ಬೆಳಗ್ಗೆ 10.30ರ ವೇಳೆಗೆ ಬಾಲಿವುಡ್ ನಟ ಶಾರುಖ್ ಖಾನ್ ಅವರೊಂದಿಗೆ ಲೇಕ್‌ಟೌನ್‌ನಲ್ಲಿರುವ 70 ಅಡಿ ಎತ್ತರದ ಪ್ರತಿಮೆಯನ್ನು ಮೆಸ್ಸಿ ವರ್ಚುಯಲ್ ಆಗಿ ಅನಾವರಣಗೊಳಿಸಿದರು. ಭದ್ರತಾ ಕಾರಣಗಳಿಂದಾಗಿ ಮೆಸ್ಸಿ ಅಲ್ಲಿಗೆ ಹೋಗಲಿಲ್ಲ. ನಂತರ, ಅವರು ಸಾಲ್ಟ್ ಲೇಕ್ ಕ್ರೀಡಾಂಗಣಕ್ಕೆ ಭೇಟಿ ನೀಡಿದ್ದು ಇಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಟೀಮ್ ಇಂಡಿಯಾದ ಮಾಜಿ ನಾಯಕ ಗಂಗೂಲಿ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಭೇಟಿಯಾಗಲಿದ್ದಾರೆ.
ಶನಿವಾರ ಕೋಲ್ಕತ್ತಾದಲ್ಲಿ ಕಾರ್ಯಕ್ರಮ ಮುಗಿದ ನಂತರ, ಮೆಸ್ಸಿ ಹೈದರಾಬಾದ್‌ಗೆ ತೆರಳಲಿದ್ದಾರೆ. ಅವರು ಫಲಕ್ನುಮಾ ಅರಮನೆ ಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಅದರ ನಂತರ, ಅವರು ಉಪ್ಪಲ್ ಕ್ರೀಡಾಂಗಣದಲ್ಲಿ ಗೋಟ್ ಕಪ್ ಎಂಬ ಫುಟ್ಬಾಲ್ ಪಂದ್ಯದಲ್ಲಿ ಆಡಲಿದ್ದಾರೆ. ಉಪ್ಪಲ್ ಕ್ರೀಡಾಂಗಣದಲ್ಲಿ ಸಂಜೆ 7 ಗಂಟೆಗೆ ಆರಂಭವಾಗಲಿರುವ ಈ ಪಂದ್ಯದಲ್ಲಿ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಭಾಗಿ ಆಗಲಿದ್ದಾರೆ ಎಂದು ವರದಿಯಾಗಿದೆ.
ಭಾರತದಲ್ಲಿ 72 ಗಂಟೆಗಳಿಗಿಂತ ಕಡಿಮೆ ಸಮಯ ಕಳೆಯಲಿರುವ ಮೆಸ್ಸಿ, ಕೋಲ್ಕತ್ತಾ, ಹೈದರಾಬಾದ್, ಮುಂಬೈ ಮತ್ತು ದೆಹಲಿಗೆ ಭೇಟಿ ನೀಡಲಿದ್ದಾರೆ. 14 ರಂದು ಮುಂಬೈನಲ್ಲಿ ಮತ್ತು 15 ರಂದು ದೆಹಲಿಯಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಸೋಮವಾರ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡುವ ಮೂಲಕ ಗೋಟ್ ಪ್ರವಾಸ ಕೊನೆಗೊಳ್ಳಲಿದೆ.


