ವಿದೇಶದಲ್ಲಿರುವವರೂ ಗ್ಯಾರಂಟಿ ಯೋಜನೆ ಅನುಕೂಲ ಪಡೆಯುತ್ತಿದ್ದಾರೆ ಎಂಬ ವಿಚಾರ ಶಾಸಕಾಂಗ ಪಕ್ಷದ ಸಭೆಯಲ್ಲಿ ಪ್ರಸ್ತಾಪಗೊಂಡಿದೆ, ಒಂದು ವೇಳೆ ವಿದೇಶದಲ್ಲಿರುವವರು ಅನುಕೂಲ ಪಡೆದರೆ ಅದು ತಪ್ಪು ಎಂದು ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ಬೆಳಗಾವಿ ಸುವರ್ಣಸೌಧದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶಾಸಕಾಂಗ ಪಕ್ಷದ ಸಭೆಯಲ್ಲಿ ಕೆಲವರು ಗ್ಯಾರಂಟಿ ಯೋಜನೆಗಳ ಬಗ್ಗೆ ಪ್ರಸ್ತಾಪಿಸಿದರು. ವಿದೇಶದಲ್ಲಿರುವವರೂ ಗ್ಯಾರಂಟಿ ಯೋಜನೆಗಳ ಅನುಕೂಲ ಪಡೆಯುತ್ತಿದ್ದಾರೆ ಎಂದು ಹೇಳಿದರು. ಯಾರು ಹೇಳಿದರು ಎಂದು ನಾನು ಗಮನ ಕೊಡಲಿಲ್ಲ, ಆದರೆ ಹೀಗೆ ನಡೆಯಬಾರದು ಎಂದರು.
ರಾಜ್ಯದ ಖಾಸಗಿ ಅನುದಾನಿತ/ ಅನುದಾನರಹಿತ ಶಾಲೆಗಳ ಮಾನ್ಯತೆ ನವೀಕರಣ ಸಂಬಂಧ ವಿಶೇಷ ಸದನ ಸಮಿತಿ ರಚಿಸುವುದಾಗಿ ಹೇಳಿದರು. ಕಾಂಗ್ರೆಸ್ ಸದಸ್ಯ ಪುಟ್ಟಣ್ಣ ಈ ವಿಚಾರ ಪ್ರಸ್ತಾಪಿಸಿಸಿದ್ದು, ಮಾನ್ಯತೆ ನವೀಕರಣ ಸಂಬಂಧ ಇಲಾಖೆ ಅಧಿಕಾರಿಗಳು ಹಾಗೂ ಶಾಲೆಗಳೊಂದಿಗೆ ಚರ್ಚಿಸಲಾಗಿದೆ. ಈ ಹಿಂದೆ ಅನುದಾನ/ಅನುದಾನರಹಿತ ಶಾಲೆಗಳಲ್ಲಿ ರಾಜ್ಯದ ಸಾಕಷ್ಟು ಮಂದಿ ವಿದ್ಯಾಭ್ಯಾಸ ಮಾಡಿದ್ದಾರೆ. ಹೀಗಾಗಿ ಈ ಶಾಲೆಗಳ ಸೇವೆಯನ್ನು ಪರಿಗಣಿಸಲಾಗಿದೆ ಎಂದರು.
ಸಭೆಯಲ್ಲಿ ಅನುದಾನ ಬಿಡುಗಡೆ ವಿಳಂಬ ವಿಚಾರವನ್ನು ಕೆಲವರು ಸಭೆಯಲ್ಲಿ ಮುಖ್ಯಮಂತ್ರಿಗಳ ಗಮನಕ್ಕೆ ತಂದರು. ಇದಕ್ಕೆ ಮುಖ್ಯಮಂತ್ರಿ ಸಕಾರಾತ್ಮಕವಾಗಿ ಸ್ಪಂದಿಸಿ,ಹಣಕಾಸು ಇಲಾಖೆ ಅಧಿಕಾರಿಗಳ ಸಭೆ ಮಾಡಿ ತಕ್ಷಣ ಅನುದಾನ ಬಿಡುಗಡೆಗೆ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾಗಿ ತಿಳಿಸಿದರು.
ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಕೆಲವರು ಹೇಳಿದ್ದು, ಈ ಸಂಬಂಧ ಮುಖ್ಯಮಂತ್ರಿಗಳು ಪರಿಶೀಲನೆ ಸಭೆ ನಡೆಸಿ ಅಧಿಕಾರಿಗಳಿಗೆ ಸೂಕ್ತ ಸೂಚನೆ ನೀಡಲಿದ್ದಾರೆ ಎಂದು ಮಧು ಬಂಗಾರಪ್ಪ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಮಾನ್ಯತೆ ನವೀಕರಣಕ್ಕೆ ಈ ಹಿಂದೆ 62 ನಿಯಮ ರೂಪಿಸಲಾಗಿತ್ತು. ನಾನು ಸಚಿವನಾದ ಬಳಿಕ 48ಕ್ಕೆ ಇಳಿಕೆ ಮಾಡಿದ್ದೇನೆ. ಮಾನ್ಯತೆ ನವೀಕರಣದಲ್ಲಿ ಅಧಿಕಾರಿಗಳು ಭ್ರಷ್ಟಾಚಾರ ನಡೆಸಿದ್ದು ಗೊತ್ತಾದರೆ ಸೂಕ್ತ ಕ್ರಮ ಕೈಗೊಳ್ಳಗುವುದು. ಖಾಸಗಿ ಅನುದಾನಿತ/ ಅನುದಾನ ರಹಿತ ಶಾಲೆಗಳ ಮಾನ್ಯತೆ ನವೀಕರಣ ಸಂಬಂಧ ಸದನ ಸಮಿತಿ ರಚಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು. ಶಾಲೆಗಳಲ್ಲಿ ಮಕ್ಕಳ ಸುರಕ್ಷತೆ ಬಹಳ ಮುಖ್ಯ. ವಿಶೇಷ ಸದನ ಸಮಿತಿ ವರದಿ ಬರುವವರೆಗೂ ಮಾನ್ಯತೆ ನವೀಕರಣ ಸಂಬಂಧ ಹೊರಡಿಸಿರುವ ಆದೇಶವನ್ನು ಅನುಷ್ಠಾನಕ್ಕೆ ತರುವುದಿಲ್ಲ ಎಂದರು.
ಕಾಂಗ್ರೆಸ್ ಸದಸ್ಯ ಪುಟ್ಟಣ್ಣ, ಖಾಸಗಿ ಅನುದಾನಿತ/ ಅನುದಾನರಹಿತ ಶಾಲೆಗಳ ಮಾನ್ಯತೆ ನವೀಕರಣ ಸಂಬಂಧ ರೂಪಿಸಿರುವ ನಿಯಮಗಳು ಕಠಿಣವಾಗಿವೆ. ನವೀಕರಣ ಹೆಸರಿನಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಮಾನ್ಯತೆ ನಿಯಮ ಸರಳೀಕರಣ ಮಾಡದಿದ್ದಲ್ಲಿ ಹಲವು ಖಾಸಗಿ ಶಾಲೆಗಳನ್ನು ಮುಚ್ಚಬೇಕಾಗುತ್ತದೆ. ಮಾನ್ಯತೆ ನವೀಕರಣ ಸಂಬಂಧ ಸದನ ಸಮಿತಿ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು ಎಂದು ಸಚಿವರು ತಿಳಿಸಿದರು.


