ಭಾರತೀಯ ಸಂಸ್ಕೃತಿಯಲ್ಲಿ ಪ್ರತಿವರ್ಷವೂ ಆಷಾಢಮಾಸದ ಶುಕ್ಲ ಪಕ್ಷದ ಹುಣ್ಣಿಮೆಯನ್ನು ಗುರು ಪೂರ್ಣಿಮಾ ಎಂದು ಆಚರಿಸಿಕೊಂಡು ಬರುವ ಸಂಪ್ರದಾಯ ರೂಢಿಯಲ್ಲಿದೆ. ಇದನ್ನು ವ್ಯಾಸ ಪೂರ್ಣಿಮಾ ಎಂತಲೂ ಬುದ್ಧ ಪೂರ್ಣಿಮಾ ಎಂತಲೂ ಕರೆಯುವುದು ವಾಡಿಕೆ.
ಜೀವನದಲ್ಲಿ ಯಾರಿಗೆ ಗುರು ಬೇಡ. ಗುರು ಬೇಡ ಎನ್ನದವರು ಇರಲು ಸಾಧ್ಯವೇ ಇಲ್ಲ. ನಾವು ಮಾನವರಾಗಲು, ಮಾನವನಿಂದ ಮಹಾ ಮಾನವನಾಗಲು, ಮಹಾ ಮಾನವನಿಂದ ಮಹಾದೇವನಾಗಲು ಎಲ್ಲರಿಗೂ ಗುರುವಿನ ಅಗತ್ಯವಿದ್ದೇ ಇದೆ. ಗುರು ವ್ಯಕ್ತಿಯೇ ಆಗಿರಬೇಕು ಎಂದೇನಿಲ್ಲ. ಗುರು ವ್ಯಕ್ತಿ ಆಗಿರಬಹುದು. ಆತ ಶಕ್ತಿ ಆಗಿರಬಹುದು. ಅದೊಂದು ಸಂಘಟನೆ ಆಗಿರಬಹುದು. ಅದು ಒಂದು ಸಮಾಜವೂ ಆಗಿರಬಹುದು. ಬಾಳ ಬದುಕಿನಲ್ಲಿ ಬೆಳಕನ್ನು ತೋರುವ ದಿಗ್ ದರ್ಶನವಾದರೆ ಸಾಕು. ಜಾನಪದದಲ್ಲಿ ಹೇಳುವಂತೆ ಜನನಿ ತಾನೇ ಮೊದಲ ಗುರುವು ಜನನಿಯಿಂದ ಪಾಠ ಕಲಿತ ಜನರೇ ಧನ್ಯರು||
ಒಟ್ಟಿನಲ್ಲಿ ನಮಗೆ ಗುರು ಎಂಬುದು ಬದುಕಿನ ಪಾಠವೂ ಹೌದು ಅದು ಪಠ್ಯವೂ ಹೌದು. ಗುರು ನಮಗೆ ಪಾಠ ಹೇಗೆಂದರೆ ಆತ ನಮಗೆ ಬದುಕಿಗೆ ಬೇಕಾಗುವ ಪಾಠ ಹೇಳುತ್ತಾನೆ, ಮಾರ್ಗದರ್ಶನ ಮಾಡುತ್ತಾನೆ, ಬುದ್ಧಿ ವಿಕಾಸ ಆಗುವಂತಹ ಸಮಯದಲ್ಲಿ ಮಾನವೀಯ ಮೌಲ್ಯಗಳ ಉಪದೇಶ ಮಾಡುತ್ತಾನೆ. ಆದ್ದರಿಂದ ಆತ ನಮಗೆ ಪಾಠವಾಗುತ್ತಾನೆ. ಆತ ಪಠ್ಯ ಹೇಗೆಂದರೆ ಗುರುವು ಗುರುವಾಗುವದಕ್ಕಿಂತಲೂ ಮೊದಲು ಆತ ತನ್ನನ್ನು ತಾನು ಮೌಲ್ಯವಾಗಿಸಿಕೊಂಡಿರುತ್ತಾನೆ, ತನ್ನನ್ನು ತಾನು ನೀತಿಮಾರ್ಗಿಯಾಗಿಸಿಕೊಂಡಿರುತ್ತಾನೆ. ಆತನಲ್ಲಿ ಒಬ್ಬ ಆದರ್ಶ ಪುರುಷ ಆವಿರ್ಭವಿಸಿರುತ್ತಾನೆ. ಆತ ಆದರ್ಶ ಪುರುಷನಾಗಿರುತ್ತಾನೆ. ಸಹಜವಾಗಿಯೇ ಅವನನ್ನು ಅನುಸರಿಸುವ ಶಿಷ್ಯರು ಅವನನ್ನೇ ಮಾದರಿಯಾಗಿಸಿಕೊಂಡು ಅವನನ್ನು ಅನುಸರಿಸುತ್ತಾರೆ. ಆದ್ದರಿಂದ ಶಿಷ್ಯರಿಗೆ ಆತ ಪಠ್ಯವಾಗುತ್ತಾನೆ.
ಭಾರತ ದೇಶದಲ್ಲಷ್ಟೇ ಅಲ್ಲ ಜಗತ್ತಿನ ಎಲ್ಲಾ ರಾಷ್ಟ್ರಗಳಲ್ಲೂ ಗುರು ಸ್ಥಾನ ಗಟ್ಟಿಯಾಗಿದೆ. ಗುರು ಇಲ್ಲದ ಒಂದೂ ದೇಶವಿಲ್ಲ. ಕರೆಯುವ ಹೆಸರುಗಳು ಬೇರೆ ಬೇರೆ ಇರಬಹುದು ಆದರೆ ಗುರುವಿನ ವೃತ್ತಿ ಸಾರ್ವಕಾಲಿಕ ಹಾಗೂ ಸರ್ವ ವ್ಯಾಪಕವಾದುದು. ಜಗತ್ತನ್ನೇ ಗೆಲ್ಲುತ್ತೇನೆ ಎಂದು ಹೊರಟ ಅಲೆಕ್ಸಾನ್ಡರ್ ಅದೊಂದು ದಿನ ಸಾಮ್ರಾಜ್ಯದಲ್ಲಿ ಹೋಗುತ್ತಿರುವಾಗ ಅವರ ಗುರು ಅರಿಷ್ಟಾಟಲ್ ನಡೆದು ಬರುತ್ತಿದ್ದ. ಅದನ್ನು ನೋಡಿದ ಅಲೆಕ್ಸಾನ್ಡರ್ ಗುರುವಿನ ಕಾಲುಗಳಿಗೆ ನಮಸ್ಕರಿಸಿದ. ಇಂತಹ ಬೀದಿಯಲ್ಲಿ ಇಂತಹ ಫಕೀರನಿಗೆ ಏಕೆ ನಮಸ್ಕರಿಸಿದೆ ಎಂದು ಕೇಳಿದಾಗ ಈತ ನನ್ನ ಗುರು. ತಂದೆ ನನ್ನನ್ನು ಸ್ವರ್ಗದಿಂದ ಇಲ್ಲಿಗೆ ಕರೆ ತಂದಿದ್ದಾನೆ, ಆದರೆ ಗುರು ನನ್ನನ್ನು ಮತ್ತೆ ಸ್ವರ್ಗಕ್ಕೆ ಕಳಿಸುತ್ತಾನೆ. ತಂದೆ ನನಗೆ ಈ ಲೌಕಿಕ ಸಾಮ್ರಾಜ್ಯ ವನ್ನು ನೀಡಿದ. ಆದರೆ ನನ್ನ ನನಗೆ ಅದ್ಭುತವಾದ ಅಲೌಕಿಕ ಸಾಮ್ರಾಜ್ಯವನ್ನು ನೀಡಿದ. ಆದ್ದರಿಂದ ನನಗೆ ನನ್ನ ಗುರುವೇ ಶ್ರೇಷ್ಠ – ಸರ್ವ ಶ್ರೇಷ್ಠ ಎಂದನಂತೆ.
ಶಿವನು ತನ್ನ ಪರಮ ಜ್ಞಾನವನ್ನು ತನ್ನ ಶಿಷ್ಯರಾದ ಸಪ್ತರ್ಷಿಗಳಿಗೆ ಬೋಧಿಸಿದ ದಿನವೇ ಈ ಗುರುಪೂರ್ಣಿಮಾ ಆಗಿದೆ. ಮತ್ತೊಂದು ಮಾಹಿತಿ ಪ್ರಕಾರ ವ್ಯಾಸರು ತಮ್ಮ ಶಿಷ್ಯರಾದ ವೈಷಂಪಾಯನ, ಜೈಮಿನಿ, ಪೈಲ, ಸುಮಂತ, ಹಾಗೂ ಮಗ ಶುಕದೇವ ಇವರೊಂದಿಗೆ ವೇದಗಳನ್ನು ವಿಭಾಗಿಸಿ ಬ್ರಹ್ಮ ಸೂತ್ರಗಳನ್ನು ಬರೆಯಲು ಪ್ರಾರಂಭಿಸಿದ ದಿನವಿದು. ಜೈನ ಧರ್ಮಿಯರ ಪ್ರಕಾರ ಮಹಾವೀರರು ಕೈವಲ್ಯವನ್ನು ಪಡೆದ ನಂತರ ಗೌತಮರನ್ನು ತಮ್ಮ ಮೊದಲ ಶಿಷ್ಯರನ್ನಾಗಿ ಸ್ವೀಕರಿಸಿದ ದಿನವಾದ್ದರಿಂದ ಜೈನ ಧರ್ಮಿಯರಿಗೂ ಇದು ಪವಿತ್ರ ದಿನವಾಗಿದೆ. ಬೌದ್ಧ ಧರ್ಮಿಯರ ಪ್ರಕಾರ ಬುದ್ಧ ಭಗವಾನರು ತಾವು ಸಂಬುದ್ಧರಾದ ಬಳಿಕ ಸಾರಾನಾಥದಲ್ಲಿ ತಮ್ಮ ಅನುಯಾಯಿಗಳಿಗೆ ಪ್ರಥಮ ಬೋಧನೆಯನ್ನು ಮಾಡಿದ ದಿನವಿದು.
ಜಗತ್ತಿನಲ್ಲಿ ನಾವು ಅನೇಕ ಪ್ರಕಾರದ ಗುರು ಗಳನ್ನು ನೋಡುತ್ತೇವೆ. ಪ್ರಾಚೀನ ಕಾಲದಲ್ಲಿ ಗುರು ಶಬ್ಧಕ್ಕೆ ವಿಶೇಷ ಅರ್ಥವಿತ್ತು. ಗುರು ನಮ್ಮಲ್ಲಿರುವ ಅಜ್ಞಾನವನ್ನು ನಿವಾರಿಸಿ ಸುಜ್ಞಾನವನ್ನು ಬೋಧಿಸುವವನಾಗಿದ್ದ. ಗುರು ಎಂದರೆ ಆಧ್ಯಾತ್ಮ ವಿದ್ಯೆ ಅಂದರೆ ಪರಾ ವಿದ್ಯೆಯನ್ನು ಬೋಧಿಸುವವನು ಎಂಬರ್ಥವಿತ್ತು. ಅಂದರೆ ಅವರು ಲೌಕಿಕ ವಿದ್ಯೆಯನ್ನು ಬೋಧಿಸುತ್ತಿರಲಿಲ್ಲ ಎಂದರ್ಥವಲ್ಲ. ಅದನ್ನೂ ಬೋಧಿಸುತ್ತಿದ್ದರು. ಆ ಲೌಕಿಕ ವಿದ್ಯೆಯ ಗಮ್ಯವೂ ಪರಾ ವಿದ್ಯೆಯ ಕಡೆಗೆ, ಅಲೌಕಿಕದೆಡೆಗೆ ಮುಖ ಮಾಡಿರುತ್ತಿತ್ತು. ಆದರೆ ಇಂದು ಗುರು ಶಬ್ಧಕ್ಕೆ ವ್ಯಾಖ್ಯಾನವೇ ಬದಲಾಗಿದೆ. ಈಗೆಲ್ಲಾ ಚಾನಲ್ ಗುರುಗಳೆ ಹೆಚ್ಚಾಗಿದ್ದಾರೆ. ಶಾಲಾ ಪಾಠ ಹೇಳುವವರೂ ಗುರು ಅಲ್ಲದೆ ಮನೆ ಪಾಠ ಹೇಳುವವರೂ ಗುರುಗಳಾಗಿದ್ದಾರೆ. ತಪ್ಪಲ್ಲ. ಆದರೆ ಅವರ ಪಾಠದ ಗಮ್ಯ ಪರಾ ವಿದ್ಯೆಯತ್ತ ಆಗಿರಬೇಕು. ಶಿಷ್ಯನ ಬದುಕಿಗೆ ಸಹಾಯಕ ಆಗುವುದರ ಜೊತೆಗೆ ಬದುಕನ್ನು ಸಾರ್ಥಕಗೊಳಿಸುವ ಸನ್ನೀತಿಯೂ ಅಳವಡಿಸಿರಬೇಕು.
ಸ್ಕಂದ ಪುರಾಣದಲ್ಲಿ ಏಳು ಪ್ರಕಾರದ ಗುರುವನ್ನು ಹೇಳಿದ್ದಾರೆ. ಸೂಚಕ ಗುರು, ವಾಚಕ ಗುರು, ಬೋಧಕ ಗುರು, ನಿಷಿದ್ಧ ಗುರು, ವಿಹಿತ ಗುರು, ಕಾರುಣ್ಯ ಗುರು, ಪರಮಗುರು ಮುಂತಾಗಿ ಗುರುವಿನ ಸಾಧನೆ, ಸಿದ್ಧಿ, ವರ್ತನೆ, ಕಾರ್ಯ, ಜ್ಞಾನ ಮುಂತಾದ ಗುಣಗಳನ್ನು ನೋಡಿ ವಿಭಾಗ ಮಾಡಿದ್ದಾರೆ. ಶಾಸ್ತ್ರ ರಿತ್ಯಾ ಕರ್ಮ ಮಾಡದೆ ಇರುವವರು ನಿಷಿದ್ಧ ಗುರು. ಈ ಗುರುವನ್ನು ನಾವು ಅನುರಿಸಬಾರದು. ಅವರ ಶಿಷ್ಯತ್ವವನ್ನು ಸ್ವೀಕರಿಸಬಾರದು.
ಗುರು ಎಂಬ ಪದವಿ ಅದೆಷ್ಟು ಮಹತ್ವ ಪೂರ್ಣ ಎಂಬುದಕ್ಕೆ ಮಹಾಜ್ಞಾನಿ ಅಲ್ಲಮ ಪ್ರಭುದೇವರು ತಮ್ಮ ವಚನದಲ್ಲಿ..
ಕಾಣಬಾರದ ಲಿಂಗವು ಕೈಯಲ್ಲಿ ಹಿಡಿದಿಹೆನೆಂದಡೆ ಸಿಕ್ಕದೆಂಬ ಬಳಲಿಕೆಯ ನೋಡಾ
ಕಂಡುದನೆ ಕಂಡು ಗುರುಪಾದವ ಹಿಡಿದಲ್ಲಿ ಕಾಣದುದ ಕಾಣಬಹುದು ಕಾಣಾ ಗುಹೇಶ್ವರ ||
ಇದೊಂದು ವಚನ ಸಾಕು ಗುರುವಿನ ಮಹತ್ವ ಅದರ ವ್ಯಾಪ್ತಿ ಅದರ ಘನತೆ ಯನ್ನರಿಯಲು. ಲಿಂಗ ಇದು ಪರಾತ್ಪರ ಪರ ವಸ್ತು. ಇದರ ವ್ಯಾಪ್ತಿ ಅಗೋಚರ, ಸುಳಿಹು ವಿಸ್ತಾರ. ಜಗದಗಲ, ಮುಗಿಲಗಲ, ಮಿಗೆಯಗಲ, ನಿಮ್ಮಗಲ, ಪಾತಾಳದಿಂದತ್ತತ್ತ ನಿಮ್ಮ ಶ್ರೀ ಚರಣ, ಬ್ರಹ್ಮಾಂಡದಿತ್ತತ್ತ ನಿಮ್ಮ ಶ್ರೀ ಮುಕುಟ ಇಂತಹ ಲಿಂಗ ಸ್ವರೂಪದ ವಿಸ್ತಾರವನ್ನು ಶಿಷ್ಯ ಅರಿತುಕೊಳ್ಳುವುದು ಹೇಗೆ ? ಅದಕ್ಕೆ ಮತ್ತೊಬ್ಬರ ಸಹಕಾರ ಬೇಕು. ಅವನೇ ಗುರು.
” ಅತ್ಯತಿಷ್ತಟ್ದ್ಧಾಶಾಂಗುಲಮ್ ” ಎನ್ನುವ ಲಿಂಗ ವಿಸ್ತಾರವನ್ನು ಅರಿತು ಹೇಳಲು ಗುರು ಬೇಕು. ಗುರು ಬೇಕೇ ಬೇಕು.
ಗುರು ಕರುಣಿಸಲು ಸಂಸಾರ ವಿಷಯ ಕೆಟ್ಟಿತ್ತು.
ಮಾಯಾ ಪ್ರಪಂಚು ಬಿಟ್ಟಿತ್ತು.
ಮುಂದಣ ಹುಟ್ಟರತು ಹೋಯಿತ್ತು.
ನೆಟ್ಟಗೆ ಗುರು ಪಾದವ ಮುಟ್ಟಿ
ಭವಗೆಟ್ಟೆನು ರಾಮನಾಥ ||
ಗುರು ನಮಗೆ ಏನೇನು ಮಾಡಬಲ್ಲ. ಆತನಿಂದ ನಮ್ಮ ಸಾಂಸಾರಿಕ ತಾಪಗಳು ಹೇಗೆ ನಿವಾರಿಸಲ್ಪಡುತ್ತವೆ ಎಂಬುದು ಬಹು ಮುಖ್ಯವಾದದು. ಆಶಾ – ತೃಷೆಗಳ ಈ ಜಗತ್ತಲ್ಲಿ ಶಿಷ್ಯ ಬಳಲಿ ಬೆಂಡಾಗದಂತೆ ಮೇಲಕ್ಕೆತ್ತುವನು ಗುರು. ಆತ ದೀಕ್ಷಾ ಗುರು ಆಗಿರಬಹುದು ಶಿಕ್ಷಾ ಗುರು ಆಗಿರಬಹುದು ಅಥವಾ ಮೋಕ್ಷ ಗುರುವೇ ಆಗಿರಬಹುದು. ಒಟ್ಟಿನಲ್ಲಿ ಆತ ಲೌಕಿಕ ಜೀವನದ ಜೊತೆಗೆ ಪಾರಮಾರ್ಥಿಕ ಜೀವನವನ್ನೂ ನಡೆಸಲು ಪ್ರೇರಕನಾಗಿರಬೇಕು. ಅಂತಹ ಗುರುವಿನಿಂದ ಮಾತ್ರ ದುಃಖಿಯಾದ ಈ ಪ್ರಪಂಚ ಸುಖಿಯಾಗುತ್ತದೆ.
ಗುರು ಈ ಪ್ರಪಂಚವನ್ನು ಬದಲಿಸುವ ಸಾಹಸಕ್ಕೆ ಹೋಗಲಾರ. ಅದು ಅವನ ಕಾಯಕವೂ ಅಲ್ಲ. ಆತ ಕೇವಲ ಶಿಷ್ಯನ ದೃಷ್ಟಿಯನ್ನು ಮಾತ್ರ ಬದಲಿಸುತ್ತಾನೆ. ಸೃಷ್ಟಿಯಂತೆ ದೃಷ್ಟಿಯಲ್ಲ – ದೃಷ್ಟಿಯಂತೆ ಸೃಷ್ಟಿ ಎನ್ನುವ ಅರಿವನ್ನು ನೀಡುತ್ತಾನೆ. ಆದರೂ ಶಿಷ್ಯ ತನ್ನ ದೃಷ್ಟಿಯನ್ನೆಲ್ಲಾ ಸೃಷ್ಟಿಯಂತೆ ನೋಡಲು ತೊಡಗಿ ಕೊಂಡಾಗ ಆತನಿಗೆ ಸಂಕಟಗಳ ಸುರಿಮಳೆ ಶುರುವಾಗುತ್ತದೆ. ಬದುಕೇ ಬೇಸರವಾಗಿ ಜೀವನ ಹತಾಶವಾಗುತ್ತದೆ. ತನ್ನ ಕಷ್ಟಕ್ಕೆ ಯಾರೂ ಆಗುತ್ತಿಲ್ಲ ಎಂದು ಮನದೊಳಗೆ ಮುಮ್ಮಲ ಮರುಗಿಕೊಳ್ಳುತ್ತಾನೆ. ಬಂದುಗಳನ್ನು ಅಂಗಲಾಚುತ್ತಾನೆ. ಅವರ ಸಹಾಯದ ನಿರೀಕ್ಷೆ ಮಾಡುತ್ತಾನೆ. ಆದರೆ ಅವರು ಬರುವರೇ? ಅವರೂ ಇದೆ ರೀತಿ ಸಂಕಟಗಳ ಸಾಗರದಲ್ಲಿ ಮುಳುಗಿರುತ್ತಾರೆ. ಅವರನ್ನು ಎಬ್ಬಿಸಲು ಇನ್ನಾರದೋ ನಿರೀಕ್ಷೆಯಲ್ಲಿರುತ್ತಾರೆ. ಇನ್ನೂ ಅವರೇನು ಬರುತ್ತಾರೆ. ಅದನ್ನೇ ಮಹಾಕವಿ ಸರ್ವಜ್ಞರು….
ಬಂಧುಗಳಾದವರು ಬಂದುಂಡು ಹೋಗುವರು,
ಬಂಧನವ ಕಳೆಯಲರಿಯರು, ಗುರುವಿಗಿಂ –
ಬಂಧುಗಳುಂಟೆ – ಸರ್ವಜ್ಞ ||
ಸುಖದಲ್ಲಿ ಮಾತ್ರ ಬಂಧು ಬಾಂಧವರು ಸ್ನೇಹಿತರು, ಮುಂತಾದವರು. ಆದರೆ ಗುರುವಾದವನು ಸದಾಕಾಲದಲ್ಲಿಯೂ ನಿಮ್ಮೊಂದಿಗಿರುತ್ತಾನೆ. ಆದರೆ ನಮಗೆ ಗುರುವಿನಲ್ಲಿ ಸದಾ ಶ್ರದ್ಧೆ – ನಿಷ್ಠೆ, ಇರಬೇಕು. ಗುರುವಿನಲ್ಲಿ ಪರಮ ಪ್ರೇಮ, ನಿರಂತರ ಸೇವೆಯಲ್ಲಿ ತೊಡಗಿಸಿಕೊಂಡಿರಬೇಕು. ಅಂದಾಗ ಗುರು ಎಂದಿಗೂ ನಮ್ಮನ್ನು ಕೈಬಿಡಲಾರ. ನಮ್ಮನ್ನು ಗುರಿ ತಲುಪಿಸುತ್ತಾನೆ. ನಮಗೆ ಆ ನಂಬಿಕೆ ಇರಬೇಕಷ್ಟೆ.
ಗುರುಕೃಪಾಕಾಂಕ್ಷಿಗಳೇ……
ನಮಗೆಲ್ಲರಿಗೂ ಗುರು ಇದ್ದಾರೆ. ಹಲವರಿಗೆ ಹಲವು ಗುರುಗಳಿರಬಹುದು. ಕೆಲವರಿಗೆ ಹಲವು ಗುರುಗಳಿರಬಹುದು ಮತ್ತೆ ಹಲವರಿಗೆ ಕೆಲವು ಗುರುಗಳಿರಬಹುದು. ಒಬ್ಬರಿಗೆ ಒಬ್ಬರೇ ಗುರು ಇರಲೂಬಹುದು. ಗುರು ಯಾವೊತ್ತು ನಿಮ್ಮ ಜಾತಿ – ಮತಿ ನೋಡುವುದಿಲ್ಲ, ನಿಮ್ಮ ಕುಲ – ಗೋತ್ರ ನೋಡುವುದಿಲ್ಲ, ನಿಮ್ಮ ಸಿರಿತನ – ಬಡತನ ನೋಡುವುದಿಲ್ಲ, ನಿಮ್ಮ ಪದವಿ – ಪಾಂಡಿತ್ಯ ನೋಡುವುದಿಲ್ಲ, ನಿಮ್ಮ ಅಹಂಕಾರ – ಮಮಕಾರ ನೋಡುವುದಿಲ್ಲ, ನಿಮ್ಮ ಆದಾನ – ಪ್ರಾದಾನ ನೋಡುವುದಿಲ. ನಿಮ್ಮ ರೂಪು- ಯೌವನ ನೋಡುವುದಿಲ್ಲ. ನಿಮ್ಮ ಬೆಡಗು – ಬಿನ್ನಾಣ ನೋಡುವುದಿಲ್ಲ. ನಿಮ್ಮ ಧನ – ಕನಕ ನೋಡುವುದಿಲ್ಲ. ನಿಮ್ಮ ಜ್ಞಾನ – ವಿಜ್ಞಾನ ನೋಡುವುದಿಲ್ಲ.
ಹಾಗಾದರೆ ಆತ ನೋಡುವುದೇನು?
ನೀವು ಆಯ್ಕೆ ಮಾಡಿಕೊಂಡ ಗುರು ಕೇವಲ ನಿಮ್ಮ ಭಕ್ತಿಯನ್ನು ನೋಡುತ್ತಾನೆ. ನಿಮ್ಮ ನಂಬಿಕೆಯನ್ನು ನೋಡುತ್ತಾನೆ. ನಿಮ್ಮ ಶ್ರದ್ಧೆಯನ್ನು ನೋಡುತ್ತಾನೆ. ನಿಮ್ಮ ನಿರ್ಮಲ ಚಿತ್ತವನ್ನು ನೋಡುತ್ತಾನೆ. ಇವುಗಳನ್ನು ಶಿಷ್ಯನಾಗುವವನು ಅಳವಡಿಸಿಕೊಂಡರೆ ಗುರು ಕರುಣೆಯಾಗಿ ಶಿಷ್ಯನ ಜನ್ಮ ಸಾರ್ಥಕವಾಗುತ್ತದೆ.
ನೆನಪಿರಲಿ, ಕಲಿಯುಗದಲ್ಲಿ ನಿಮ್ಮ ನಂಬಿಕೆ, ಭಕ್ತಿ, ಶ್ರದ್ಧೆ, ನಿರ್ಮಲ ಚಿತ್ತವನ್ನೇ ಬಂಡವಾಳ ಮಾಡಿಕೊಂಡು Business ಗಾಗಿ ಕಾಯುವ ಬಹು ಮಂದಿ ಗುರುಗಳು ನಿಮ್ಮನ್ನು ಮೋಸ ಪಡಿಸುವುದಕ್ಕಾಗಿ ಕಾಯುತ್ತಿರುತ್ತಾರೆ. ಕಾವಿ ತೊಟ್ಟು ಮಂಡೆ ಬೋಳಿಸಿಕೊಂಡು, ಮನೆ ಬಿಟ್ಟವರೆಲ್ಲಾ ಗುರುಗಳಲ್ಲ. Advertisement ಗುರುಗಳಿಂದ ದೂರವಿರಿ. ಒಂದು ದಿನದ ತರಕಾರಿ ಗಾಗಿ ಅದೆಷ್ಟು ಹುಡುಕುತ್ತೀರಿ, ಅದೆಷ್ಟು ಪರೀಕ್ಷಿಸುತ್ತೀರಿ, ಅಲ್ಲವೇ? ಹಾಗಾದರೆ ನಿಮ್ಮ ಬಾಳನ್ನು ಬೆಳಗುವ, ಬದುಕನ್ನು ಬೆಳಕಾಗಿಸುವ ಗುರುವನ್ನು ಪರೀಕ್ಷಿಸಿ ಸ್ವೀಕರಿಸುವುದರಲ್ಲಿ ತಪ್ಪೇನಿದೆ. ಯೋಗವಿದ್ದರೆ ಯೋಗ್ಯ ಗುರು ಸಿಕ್ಕೆ ಸಿಗುತ್ತಾನೆ. ಯೋಗ್ಯತೆಯನ್ನು ನೀವು ಗಳಿಸಿಕೊಳ್ಳಬೇಕಷ್ಟೆ.