ರಾಜ್ಯ ಸರ್ಕಾರಿ ನೌಕರರು ಹಾಗೂ ಅವರ ಕುಟುಂಬದ ಅವಲಂಬಿತರಿಗೆ ನಗದುರಹಿತ ವೈದ್ಯಕೀಯ ಸೇವೆ ಒದಗಿಸಲು ಹೊಸ ಯೋಜನೆ ‘ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ’ (KASS) ಅನ್ನು ಅಕ್ಟೋಬರ್ 1 ರಿಂದ ಜಾರಿಗೊಳಿಸಲು ಆದೇಶ ಹೊರಡಿಸಿದೆ.
ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ವಿಶೇಷ ಕಾರ್ಯದರ್ಶಿ ಚಂದ್ರಶೇಖರ ಆದೇಶ ಹೊರಡಿಸಿದ್ದು, ಯೋಜನೆಗೆ ಸೇರ್ಪಡೆಯಾಗುವುದು ನೌಕರರ ಆಯ್ಕೆಯ ಮೇಲಿದೆ. ಈ ಯೋಜನೆ ಜಾರಿಗೆ ಬಂದ ಕೂಡಲೇ ಹಳೆಯ ಜ್ಯೋತಿ ಸಂಜೀವಿನಿ ಯೋಜನೆ ಸ್ಥಗಿತಗೊಳ್ಳಲಿದೆ.
ಮಾಸಿಕ ವಂತಿಗೆ
ಯೋಜನೆಯಡಿ ನೌಕರರ ವೇತನದಿಂದ ಸ್ವಯಂಚಾಲಿತವಾಗಿ ವಂತಿಗೆ ಕಡಿತಗೊಳ್ಳಲಿದೆ.
ಗ್ರೂಪ್ A – ರೂ 1000
ಗ್ರೂಪ್ B – ರೂ 500
ಗ್ರೂಪ್ C – ರೂ 350
ಗ್ರೂಪ್ D – ರೂ 250
ಪತಿ–ಪತ್ನಿ ಇಬ್ಬರೂ ಸರ್ಕಾರಿ ನೌಕರರಾಗಿದ್ದಲ್ಲಿ, ಒಬ್ಬರೇ ವಂತಿಗೆ ಪಾವತಿಸಬೇಕಾಗುತ್ತದೆ. HRMS ವ್ಯಾಪ್ತಿಯಲ್ಲದ ನೌಕರರ ವಂತಿಗೆಯನ್ನು ನೇರವಾಗಿ ಟ್ರಸ್ಟ್ ಖಾತೆಗೆ ವರ್ಗಾಯಿಸಲಾಗುತ್ತದೆ.
ತಂದೆ–ತಾಯಿ ಆದಾಯ ಮಿತಿ ಪರಿಷ್ಕರಣೆ
ಇದಕ್ಕೂ ಮೊದಲು ತಂದೆ–ತಾಯಿಯ ಮಾಸಿಕ ಆದಾಯ ಮಿತಿಯನ್ನು ರೂ 17,000 ನಿಗದಿಪಡಿಸಲಾಗಿತ್ತು. ಈಗ ಅದನ್ನು ರೂ 27,000ಕ್ಕೆ ಏರಿಸಲಾಗಿದೆ.
ಎಲ್ಲೆಲ್ಲಿ ಚಿಕಿತ್ಸೆ?
ಈ ಯೋಜನೆಯಡಿ ನೌಕರರು ಹಾಗೂ ಕುಟುಂಬದವರು ನೋಂದಾಯಿತ ಖಾಸಗಿ ಆಸ್ಪತ್ರೆಗಳು, ಸರ್ಕಾರಿ ಆಸ್ಪತ್ರೆಗಳು, ವೈದ್ಯಕೀಯ ಶಿಕ್ಷಣ ಇಲಾಖೆಯಡಿ ಬರುವ ಬೋಧಕ ಆಸ್ಪತ್ರೆಗಳು, ಸ್ಥಳೀಯ ಸಂಸ್ಥೆಗಳಡಿ ಬರುವ ಸಾರ್ವಜನಿಕ ಆಸ್ಪತ್ರೆಗಳು ಎಲ್ಲೆಡೆ ನಗದುರಹಿತ ವೈದ್ಯಕೀಯ ಸೇವೆ ಪಡೆಯಬಹುದು.
ತಾತ್ಕಾಲಿಕ ವ್ಯವಸ್ಥೆ
ಖಾಸಗಿ ಆಸ್ಪತ್ರೆಗಳ ನೋಂದಣಿ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ, ನೌಕರರು 1963ರ ವೈದ್ಯಕೀಯ ಹಾಜರಾತಿ ನಿಯಮಗಳಡಿ ನೋಂದಾಯಿತ 500ಕ್ಕೂ ಹೆಚ್ಚು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು, ಮೊದಲು ವೆಚ್ಚ ಪಾವತಿಸಿ ಬಳಿಕ ಮರುಪಾವತಿ ಪಡೆಯುವ ಅವಕಾಶವನ್ನು ಸರ್ಕಾರ ನೀಡಿದೆ. ಈ ಅವಕಾಶ ಆರು ತಿಂಗಳು ಅಥವಾ ಮುಂದಿನ ಆದೇಶ ಹೊರಡುವವರೆಗೆ ಮಾನ್ಯವಾಗಿರುತ್ತದೆ.
ಏನಿದು ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ?
ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ (KASS)” ಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವ್ಯಾಪ್ತಿಗೆ ಒಳಪಡುವ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್, (SAST) ಬೆಂಗಳೂರು ಈ ಸಂಸ್ಥೆಯ ಮುಖಾಂತರ ಅನುಷ್ಠಾನಗೊಳಿಸಲು ಸರ್ಕಾರವು ಆದೇಶಿಸಿದೆ.
ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯು ಮಹತ್ವಾಕಾಂಕ್ಷಿ ಆರೋಗ್ಯ ಸೇವಾ ಯೋಜನೆಯಾಗಿದ್ದು, ಯೋಜನೆಯು ಪ್ರಮಾಣದಲ್ಲಿ ಪೂರ್ಣ ಜಾರಿಯಾದಾಗ ಅಲೋಪತಿ ಹಾಗೂ ಆಯುಷ್ ಚಿಕಿತ್ಸಾ ಪದ್ಧತಿಗಳನ್ನು ಒಳಗೊಂಡ ಎಲ್ಲಾ ಹೊರರೋಗಿ ವೈದ್ಯಕೀಯ ಚಿಕಿತ್ಸೆ, ಔಷಧೋಪಚಾರಗಳು, ಒಳರೋಗಿ ಚಿಕಿತ್ಸೆಗಳು, ವಾರ್ಷಿಕ ಆರೋಗ್ಯ ತಪಾಸಣೆ ಮುಂತಾದ ಆರೋಗ್ಯ ಸೇವಾ ಸೌಲಭ್ಯಗಳು ಸರ್ಕಾರಿ ನೌಕರರಿಗೆ ದೊರೆಯಲಿವೆ.