ನವದೆಹಲಿ: ಏಪ್ರಿಲ್ 22ರ ಪೆಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಭಾರತ ನಡೆಸಿದ 22 ನಿಮಿಷಗಳ ಆಪರೇಷನ್ ಕಾರ್ಯಾಚರಣೆಯಲ್ಲಿ ಪಾಕಿಸ್ತಾನದಲ್ಲಿನ ಉಗ್ರರ ನೆಲೆಗಳು ಧ್ವಂಸಗೊಂಡಿದ್ದು, ಪಾಕಿಸ್ತಾನದ ಹಲವು ವಾಯುನೆಲೆಗಳು ಈಗಲೂ ಐಸಿಯುನಲ್ಲಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಕುರಿತು ಮಂಗಳವಾರ ಲೋಸಕಭೆಯಲ್ಲಿ ಸುದೀರ್ಘ ಭಾಷಣ ಮಾಡಿದ ಅವರು, ಪೆಹಲ್ಗಾಮ್ ದಾಳಿಗೆ ಊಹೆಗೂ ನಿಲುಕದ ಪ್ರತ್ಯುತ್ತರ ನೀಡುತ್ತೇವೆ ಎಂದು ಮೊದಲೇ ಹೇಳಿಕೆ ನೀಡಿದ್ದೆ. ಅದರಂತೆ ಭಾರತೀಯ ಸೇನೆ ಯಶಸ್ವಿ ದಾಳಿ ನಡೆಸಿದೆ ಎಂದರು.
ಪೆಹಲ್ಗಾಮ್ ದಾಳಿ ನಡೆಸಿದ ಉಗ್ರರು ಧಂಗೆ, ಗಲಭೆ ನಡೆಸುವ ಕುತಂತ್ರ ಹೊಂದಿದ್ದವು. ಈ ಸಂಚನ್ನು ಭಾರತ ವಿಫಲಗೊಳಿಸಿದೆ. ಅಲ್ಲದೇ ಪೆಹಲ್ಗಾಮ್ ದಾಳಿ ನಡೆಸಿದ ಉಗ್ರರನ್ನು ಕೂಡ ಭಾರತೀಯ ಸೇನೆ ಹೊಡೆದುರುಳಿಸಿದೆ ಎಂದು ಅವರು ಹೇಳಿದರು.
ಪಾಕಿಸ್ತಾನದ ಉಗ್ರರ ತಾಣಗಳನ್ನು ನುಚ್ಚುನೂರು ಮಾಡಿದೆವು. ದಾಳಿಯಲ್ಲಿ ಭಾರತದ ತಾಂತ್ರಿಕ ನೈಪುಣ್ಯತೆ ಕೂಡ ಜಗತ್ತು ನೋಡಿತು. ಮೇಡ್ ಇನ್ ಇಂಡಿಯಾದ ಡ್ರೋಣ್ ಹಾಗೂ ಕ್ಷಿಪಣಿಗಳು ಪಾಕಿಸ್ತಾನದ ನಿದ್ದೆಗೆಡಿಸಿದವು ಎಂದು ಅವರು ಸಮರ್ಥಿಸಿಕೊಂಡರು.
ಪೆಹಲ್ಗಾಮ್ ದಾಳಿ ನಡೆದಾಗ ನಾನು ವಿದೇಶೀ ಪ್ರವಾಸದಲ್ಲಿದ್ದೆ. ಅಲ್ಲಿಂದ ಮರಳಿದ ಕೂಡಲೇ ಸಭೆ ನಡೆಸಿ ಪಾಕಿಸ್ತಾನಕ್ಕೆ ತಕ್ಕ ಪ್ರತ್ಯುತ್ತರ ನೀಡಲು ನಿರ್ಧರಿಸಿದೆವು. ದಾಳಿ ಸಂಪೂರ್ಣ ಜವಾಬ್ದಾರಿ ಸೇನೆಗೆ ನೀಡಲಾಗಿದ್ದು, ಯಾವಾಗ? ಎಲ್ಲಿ? ಹೇಗೆ ದಾಳಿ ನಡೆಸಬೇಕು ಎಂಬ ನಿರ್ಣಾಯ ಕೈಗೊಳ್ಳುವ ಸ್ವಾತಂತ್ರ್ಯವನ್ನು ಸೇನೆಗೆ ನೀಡಲಾಯಿತು ಎಂದರು.