ಬೆಂಗಳೂರು: ಅಭಿನಯ ಸರಸ್ವತಿ ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ನಟಿ ಬಿ.ಸರೋಜಾ ದೇವಿ ಅವರ ಹೆಸರಿನಲ್ಲಿ ಚಲನಚಿತ್ರ ಪ್ರಶಸ್ತಿ ಘೋಷಣೆ ಮಾಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಲಾಗಿದೆ.
ಹಿರಿಯ ನಟಿ, ಬಿಜೆಪಿ ಮುಖಂಡರಾದ ತಾರಾ ಅನುರಾಧ ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಬಿ.ಸರೋಜಾ ದೇವಿ ಅವರ ಹೆಸರಿನಲ್ಲಿ ಚಲನಚಿತ್ರ ಪ್ರಶಸ್ತಿ ಘೋಷಣೆ ಮಾಡಬೇಕೆಂದು ಮನವಿ ಮಾಡಿದರು.
ಸಿಎಂ ಸರ್ಕಾರಿ ನಿವಾಸ ಕಾವೇರಿಯಲ್ಲಿ ಸಿಎಂ ಅವರನ್ನು ಭೇಟಿ ಮಾಡಿದ ತಾರಾ, ಹಿರಿಯ ಕಲಾವಿದೆ ದಿ.ಬಿ. ಸರೋಜಾದೇವಿ ಅವರ ಹೆಸರಿನಲ್ಲಿ ಚಲನಚಿತ್ರ ಪ್ರಶಸ್ತಿ ಘೋಷಣೆ ಮಾಡುವಂತೆ ಮನವಿ ಸಲ್ಲಿಸಿದರು. ನಂತರ ಮುಖ್ಯಮಂತ್ರಿ ಸಾರ್ವಜನಿಕ ಅಹವಾಲು ಸ್ವೀಕರಿಸಿದರು. ಸಾರ್ವಜನಿಕರ ಸಮಸ್ಯೆಗಳ ಬಗ್ಗೆ ತಿಳಿದುಕೊಂಡ ಸಿಎಂ, ಜನರ ಸಮಸ್ಯೆಗಳನ್ನು ಪರಿಹರಿಸುವ ಭರವಸೆ ನೀಡಿದರು.
ಮುಖ್ಯಮಂತ್ರಿ ಪೋಸ್ಟ್:
ಸಿಎಂ ಅವರ ಅಧಿಕೃತ ಎಕ್ಸ್ ಖಾತೆಯಿಂದ ಶೇರ್ ಆದ ಪೋಸ್ಟ್ನಲ್ಲಿ, ”ಹಿರಿಯ ಕಲಾವಿದೆ ಬಿ. ಸರೋಜಾದೇವಿ ಅವರ ಹೆಸರಿನಲ್ಲಿ ಚಲನಚಿತ್ರ ಪ್ರಶಸ್ತಿ ಘೋಷಣೆ ಮಾಡುವಂತೆ ನಟಿ ತಾರಾ ಅನುರಾಧ ಅವರು ಕಾವೇರಿ ನಿವಾಸದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು” ಎಂದು ಬರೆಯಲಾಗಿದೆ. ಇಲ್ಲಿ ತಾರಾ ಅವರು ಮನವಿ ಪತ್ರ ಸಲ್ಲಿಸುತ್ತಿರುವ ಫೋಟೋವನ್ನೂ ಕಾಣಬಹುದು.
ಮತ್ತೊಂದು ಪೋಸ್ಟ್:
ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೃಹ ಕಚೇರಿ ಕಾವೇರಿಯಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿ, ಆದ್ಯತೆ ಮೇರೆಗೆ ಅವುಗಳನ್ನು ಬಗೆಹರಿಸಿಕೊಡುವುದಾಗಿ ತಿಳಿಸಿದರು” ಎಂದು ಬರೆಯಲಾಗಿದೆ. ಇಲ್ಲಿ ಜನರ ಸಮಸ್ಯೆಗಳನ್ನು ಸಿಎಂ ಆಲಿಸುತ್ತಿರುವ ಫೋಟೋವನ್ನು ಹಂಚಿಕೊಳ್ಳಲಾಗಿದೆ.
ನಿಧನದ ಸಂದರ್ಭ ಸರೋಜಾದೇವಿ ಅವರ ಮಲ್ಲೇಶ್ವರಂ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಅಂದು ತಾರಾ ಅವರು ಹಿರಿಯ ಕಲಾವಿದೆಯ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದುಕೊಂಡಿದ್ದರು.
ಸುಮಾರು 6 ದಶಕಗಳ ಕಾಲ ಭಾರತೀಯ ಚಿತ್ರರಂಗಕ್ಕೆ ಬಿ. ಸರೋಜಾದೇವಿ ಅವರು ಸೇವೆ ಸಲ್ಲಿಸಿದ್ದಾರೆ. ಪಂಚ ಭಾಷೆಗಳಲ್ಲಿ, ಸೂಪರ್ ಸ್ಟಾರ್ಗಳೊಂದಿಗೆ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. 17ನೇ ವಯಸ್ಸಿನಲ್ಲಿಯೇ ಸಿನಿಮಾ ಎಂಬ ಬಣ್ಣದ ಲೋಕ ಪ್ರವೇಶಿಸಿದ ಸರೋಜಾದೇವಿ ಭಾರತೀಯ ಚಿತ್ರರಂಗಕ್ಕೆ ಕೊಟ್ಟ ಕೊಡುಗೆ ಅಪಾರ. ನಟಿ ಇಹಲೋಕ ತ್ಯಜಿಸಿದ ದಿನದಂದು ಚಿತ್ರರಂಗದ ಗಣ್ಯಾತಿಗಣ್ಯರು ಅಂತಿಮ ದರ್ಶನ ಪಡೆದುಕೊಂಡಿದ್ದರು.