ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ರದ್ದುಗೊಳಿಸಿದ್ದ ಬೈಕ್ ಟ್ಯಾಕ್ಸಿ ಸೇವೆಗಳು ಪುನರಾರಂಭಗೊಂಡಿವೆ. ಉಬರ್ ಮತ್ತು ರ‍್ಯಾಪಿಡೋ ಆ್ಯಪ್‌ಗಳಲ್ಲಿ ಬೈಕ್ ಟ್ಯಾಕ್ಸಿ ಸೇವೆ ಲಭ್ಯವಾಗಿದ್ದು, ಆಟೋ ಮತ್ತು ಕ್ಯಾಬ್‌ಗಳಿಗೆ ದುಬಾರಿ ಶುಲ್ಕ ಪಾವತಿಸುವ ಜನ ನಿರಾಳರಾಗಿದ್ದಾರೆ.
ಸುರಕ್ಷತೆಯ ದೃಷ್ಟಿಯಿಂದ ಜೂನ್ 16 ರಿಂದ ಬೈಕ್ ಟ್ಯಾಕ್ಸಿ ಸೇವೆಯನ್ನು ರಾಜ್ಯ ಸರ್ಕಾರವು ನಿಷೇಧಿಸಿತ್ತು. ಅನಧಿಕೃತವಾಗಿ ಸಂಚರಿಸಿದ ಬೈಕ್ ಟ್ಯಾಕ್ಸಿಗಳ ಮೇಲೆ ಆರ್‌ಟಿಒ ಅಧಿಕಾರಿಗಳು ಕ್ರಮ ಕೈಗೊಂಡಿದ್ದರು. ನಿಷೇಧವನ್ನು ಪ್ರಶ್ನಿಸಿ, ರ‍್ಯಾಪಿಡೋ, ಉಬರ್ ಮತ್ತು ಇತರ ಆ್ಯಪ್ ಆಧಾರಿತ ಕಂಪನಿಗಳು ಕರ್ನಾಟಕ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದವು. ಕರ್ನಾಟಕ ಹೈಕೋರ್ಟ್‌ನ ದ್ವಿಸದಸ್ಯ ಪೀಠವು ರಾಜ್ಯ ಸರ್ಕಾರಕ್ಕೆ ಬೈಕ್ ಟ್ಯಾಕ್ಸಿಗಳಿಗೆ ನೀತಿ ಚೌಕಟ್ಟು ರೂಪಿಸುವಂತೆ ಸೂಚಿಸಿತು. ಸೆಪ್ಟೆಂಬರ್ 22ಕ್ಕೆ ವಿಚಾರಣೆಯನ್ನು ಮುಂದೂಡಲಾಗಿದೆ.
ಇಂದಿನಿಂದ ರಾಜ್ಯದಾದ್ಯಂತ ಬೈಕ್ ಟ್ಯಾಕ್ಸಿ ಸೇವೆಗಳು ಲಭ್ಯವಿದ್ದು, ಬೆಂಗಳೂರಿನಲ್ಲಿ 1.20 ಲಕ್ಷ ಬೈಕ್‌ಗಳು ಟ್ಯಾಕ್ಸಿ ಸೇವೆಗೆ ನೋಂದಾಯಿಸಿಕೊಂಡಿವೆ ರಾಜ್ಯಾದ್ಯಂತ 6 ಲಕ್ಷಕ್ಕೂ ಹೆಚ್ಚು ಸವಾರರು ಈ ಸೇವೆಯ ಮೂಲಕ ಜೀವನೋಪಾಯ ಕಂಡುಕೊಂಡಿದ್ದಾರೆ. ಹೈಕೋರ್ಟ್‌ನ ನಿರ್ದೇಶನದಂತೆ ರಾಜ್ಯ ಸರ್ಕಾರವು ಬೈಕ್ ಟ್ಯಾಕ್ಸಿಗಳಿಗೆ ಸುರಕ್ಷಿತ ನೀತಿ ರೂಪಿಸಲಿದೆ.