“ಸಚಿವ ಕೆ.ಎನ್.ರಾಜಣ್ಣ ಅವರು ನಮ್ಮ ಪಕ್ಷದ ಹಿರಿಯ ನಾಯಕರು. ಅವರ ಮಾರ್ಗದರ್ಶನದಲ್ಲಿಯೇ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರ ಚುನಾವಣೆ ನಡೆಸಲಾಗುವುದು. ಅಪೆಕ್ಸ್ ಬ್ಯಾಂಕ್ ಉಳಿಸುವುದು ನಮ್ಮ ಉದ್ದೇಶ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರ ಚುನಾವಣೆ ಸಂಬಂಧ ವಿಧಾನಸೌಧದಲ್ಲಿ ಮಂಗಳವಾರ ಸಂಜೆ ಕೆಲವು ಮಂತ್ರಿಗಳು ಹಾಗೂ ಶಾಸಕರ ಸಭೆ ನಂತರ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಉತ್ತರಿಸಿದರು.
ರಾಜಣ್ಣ ಅವರು ವಿಧಾನಸಭೆ ಕಲಾಪದಲ್ಲಿ ಭಾಗವಹಿಸಿದ್ದು, ಸಭೆಗೆ ಗೈರು ಹಾಜರಾಗಿದ್ದರಲ್ಲಾ ಎಂಬ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್ ಅವರು, “ಕೆ.ಎನ್.ರಾಜಣ್ಣ ಅವರಿಗೆ ಅನಾರೋಗ್ಯದ ಕಾರಣಕ್ಕೆ ಸಭೆಗೆ ಬರಲು ಆಗಲಿಲ್ಲ. ವಿಧಾನಸಭೆಯಲ್ಲಿ ಅವರು ಇದ್ದರು ಎಂದು ಕೇಳಲ್ಪಟ್ಟೆ. ನಮಗೆಲ್ಲಾ ವಯಸ್ಸಾಗಿದೆ, ನನಗೂ ಕತ್ತು ನೋವು ಬಂದಿದೆ. ಇದೆಲ್ಲಾ ಈ ವಯಸ್ಸಿನಲ್ಲಿ ಸರ್ವೇ ಸಾಮಾನ್ಯ.” ಎಂದರು.
“ಮುಖ್ಯಮಂತ್ರಿಗಳು, ನಾನು ಹಾಗೂ ಕೆಲವು ಸಚಿವರು ಸೇರಿ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರ ಚುನಾವಣೆ ಬಗ್ಗೆ ಚರ್ಚೆ ಮಾಡಿದ್ದೇವೆ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಅಧ್ಯಕ್ಷ ಸ್ಥಾನಕ್ಕೆ ನಿಲ್ಲಿಸಬೇಕು ಎಂದು ಮುಖ್ಯಮಂತ್ರಿಗಳ ನೇತೃತ್ವದಲ್ಲಿ ತೀರ್ಮಾನ ಮಾಡಲಾಗಿದೆ” ಎಂದು ಹೇಳಿದರು.