Menu

ಮಲೆ ಮಹದೇಶ್ವರ ಬೆಟ್ಟದಲ್ಲಿ ಮತ್ತೊಂದು ಹುಲಿ ಶವ ಪತ್ತೆ: ತನಿಖೆಗೆ ಆದೇಶ

tiger death

ಚಾಮರಾಜನಗರ ಜಿಲ್ಲೆಯ ಮಲೆಮಹದೇಶ್ವರ ವನ್ಯಧಾಮದಲ್ಲಿ ಹುಲಿಯ ಅರ್ಧದೇಹ ಪತ್ತೆಯಾಗಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದ್ದು, ಜಿಲ್ಲೆಯಲ್ಲಿ ಇತ್ತೀಚೆಗೆ ಹುಲಿ ಅಸಹಜ ಸಾವಿನ ಮೂರನೇ ಪ್ರಕರಣ ಇದಾಗಿದೆ.

ಮಲೆ ಮಹದೇಶ್ವರ ವನ್ಯಧಾಮದಲ್ಲಿ ಮತ್ತೊಂದು ಹುಲಿಯ ಶವ ಪತ್ತೆಯಾಗಿದ್ದು, ಅರ್ಧದೇಹ ಮಾತ್ರ ಪತ್ತೆಯಾಗಿರುವ ಕಾರಣ ಇದು ಕೊಲೆಯಾಗಿರಬಹುದು ಎಂದು ಶಂಕಿಸಲಾಗಿದೆ. ಅರಣ್ಯ ಸಚಿವ ಈಶ್ವರ್ ಖಂಡ್ರೆ ಹುಲಿ ಸಾವಿನ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ.

ಹನೂರು ವಲಯ ಪಚ್ಚೆದೊಡ್ಡಿ ಗ್ರಾಮದ ಬಳಿ ಹುಲಿಯ ತಲೆ, ಭುಜ, ಮುಂದಿನ ಕಾಲುಗಳು ಪತ್ತೆಯಾಗಿವೆ. ಸಿಕ್ಕಿರುವ ಕಳೇಬರದ ಭಾಗದಲ್ಲಿ ‌ಉಗುರು ಮತ್ತು ಹಲ್ಲುಗಳು ಸೇಫ್ ಆಗಿವೆ.

ಹುಲಿಯ ಕಳ್ಳಬೇಟೆ ಶಂಕೆ ಶಂಕೆ ವ್ಯಕ್ತವಾಗಿದ್ದು, ತನಿಖೆಗೆ ಅರಣ್ಯ ಇಲಾಖೆ ಕ್ರಮವಹಿಸಿದೆ. ಹುಲಿ ದೇಹದ ಉಳಿತ ಭಾಗ ಹುಡುಕಲು ಶೋಧ ನಡೆದಿದೆ. ಹುಲಿ ಸಾವಿಗೆ ಕಾರಣವೇನು ಮತ್ತು ಕಾರಣಕರ್ತರು ಯಾರು ಎಂಬುದನ್ನು ಪತ್ತೆ ಹಚ್ಚಲು ಕ್ರಮಕೈಗೊಳ್ಳಲಾಗಿದೆ ಎಂದು ಮಹದೇಶ್ವರ ವನ್ಯಧಾಮದ ಡಿಸಿಎಫ್ ಭಾಸ್ಕರ್ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇತ್ತೀಚೆಗೆ ಮಹದೇಶ್ವರ ಬೆಟ್ಟದ ಬಳಿ ಐದು ಹುಲಿಗಳಿಗೆ ವಿಶಪ್ರಾಷಣ ಮಾಡಿ ಕೊಲ್ಲಲಾಗಿತ್ತು. ಕಾಡಂಚಿನ ಗ್ರಾಮಗಳಲ್ಲಿ ಹುಲಿಗಳ ಉಪಟಳ ತಪ್ಪಿಸುವ ಉದ್ದೇಶದಿಂದ ಮೃತ ಹಸುವಿನ ದೇಹಕ್ಕೆ ವಿಷ ಹಾಕಿ, ಮಾಂಸವನ್ನು ತಿಂದು ಹುಲಿಗಳು ಸಾಯುವಂತೆ ಮಾಡಲಾಗಿತ್ತು.

ಪಿಸಿಸಿಎಫ್ ನೇತೃತ್ವದ ತಂಡದಿಂದ ತನಿಖೆಗೆ ಆದೇಶ

ವನ್ಯಜೀವಿ ಸಪ್ತಾಹದ ಆರಂಭದ ದಿನವೇ ಮಲೆ ಮಹದೇಶ್ವರ ಬೆಟ್ಟ ಕಾನನದ ಹನೂರು ವಲಯದಲ್ಲಿ ಮತ್ತೊಂದು ಹುಲಿ ಹತ್ಯೆ ಆಗಿರುವ ಬಗ್ಗೆ ತೀವ್ರ ಶೋಕ ವ್ಯಕ್ತಪಡಿಸಿರುವ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಪಿಸಿಸಿಎಫ್ ನೇತೃತ್ವದ ತಂಡದಿಂದ ತನಿಖೆಗೆ ಆದೇಶ ನೀಡಿದ್ದಾರೆ.

ಈ ಸಂಬಂಧ ಅಪರ ಮುಖ್ಯ ಕಾರ್ಯದರ್ಶಿಯವರಿಗೆ ಲಿಖಿತ ಆದೇಶ ನೀಡಿರುವ ಅವರು, ಮಲೆ ಮಹದೇಶ್ವರ ಬೆಟ್ಟದ ಕಾನನದ ಹನೂರು ವಲಯದ, ಹನೂರು ಗಸ್ತಿನಲ್ಲಿರುವ ಪಚ್ಚೆದೊಡ್ಡಿ ಗ್ರಾಮದ ಬಳಿ ನಿನ್ನೆ ಸತ್ತ ಹುಲಿಯ ಅರ್ಧ ಕಳೇಬರ ಪತ್ತೆಯಾಗಿರುವ ಬಗ್ಗೆ ಪಿಸಿಸಿಎಫ್  ಸ್ಮಿತಾ ಬಿಜ್ಜೂರು ಅವರ ನೇತೃತ್ವದಲ್ಲಿ ತಂಡವೊಂದನ್ನು ರಚಿಸಿ ಸ್ಥಳಕ್ಕೆ ಖುದ್ದು ಭೇಟಿ ನೀಡಿ ಪರಿಶೀಲಿಸಲು ಆದೇಶಿಸುವಂತೆ ಸೂಚಿಸಿದ್ದಾರೆ.

ಈ ಕಾನನದಲ್ಲಿ ಕಳೆದ 3 ವರ್ಷದಲ್ಲಿ ದಾಖಲಾಗಿರುವ ಕಳ್ಳಬೇಟೆ ಪ್ರಕರಣಗಳ ಬಗ್ಗೆಯೂ ಗಮನ ಹರಿಸಿ, ಹಿಂದಿನ ತನಿಖಾ ವರದಿಗಳನ್ನೂ ಪರಾಮರ್ಶಿಸಿ ಮುಂದೆ ಈ ಭಾಗದಲ್ಲಿ ಇಂತಹ ಘಟನೆ ಮರುಕಳಿಸದಂತೆ ಕ್ರಮವಹಿಸಲು, ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಹಾಗೂ ಕಳ್ಳಬೇಟೆಗಾರರ ವಿರುದ್ಧ  ಸೂಕ್ತ ಕ್ರಮದ ಶಿಫಾರಸಿನೊಂದಿಗೆ 8 ದಿನಗಳಲ್ಲಿ  ವರದಿ ಸಲ್ಲಿಸಲು ಮತ್ತು ಹುಲಿ ಹಂತಕರನ್ನು ಪತ್ತೆಮಾಡಿ ಅವರಿಗೆ ಕಾನೂನು ರೀತ್ಯ ದಂಡನೆ ಕೊಡಿಸಲು ತುರ್ತು ಕ್ರಮ ವಹಿಸಲು ಆದೇಶ ಹೊರಡಿಸುವಂತೆ ಈಶ್ವರ ಖಂಡ್ರೆ ಸೂಚಿಸಿದ್ದಾರೆ.

ಈ ಘಟನೆ ಮಲೆ ಮಹದೇಶ್ವರ ಬೆಟ್ಟದ ವನ್ಯಜೀವಿ ಧಾಮದಲ್ಲಿ ನಿರಂತರವಾಗಿ ವನ್ಯಜೀವಿಗಳ ಕಳ್ಳಬೇಟೆ ನಡೆಯುತ್ತಿರುವುದನ್ನು ದೃಢಪಡಿಸುತ್ತಿದ್ದು ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿದೆ ಇನ್ನು ಮುಂದೆ ಇಂತಹ ಘಟನೆ ಮರುಕಳಿಸದಂತೆ ಕಠಿಣ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ.

Related Posts

Leave a Reply

Your email address will not be published. Required fields are marked *