Menu

ಸಹಕಾರಿ ರಂಗದಲ್ಲಿ ಜಿಲ್ಲೆಯ ರೈತರ ಸೇವೆ ಮಾಡಲು ನನಗೆ ಮತ್ತೊಂದು ಅವಕಾಶ: ಕೆಎನ್ ರಾಜಣ್ಣ

ಸಹಕಾರಿ ರಂಗದಲ್ಲಿ ಜಿಲ್ಲೆಯ ರೈತರ ಸೇವೆ ಮಾಡಲು ನನಗೆ ಮತ್ತೊಂದು ಅವಕಾಶ ದೊರೆತಿದ್ದು, ಹಳ್ಳಿಗಾಡಿನ ರೈತರಿಗೆ ಸಾಲ ಸೌಲಭ್ಯ ಒದಗಿಸುವ ಗುರಿಯನ್ನು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಹೊಂದಿದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ಶಾಸಕ ಕೆ.ಎನ್. ರಾಜಣ್ಣ ಹೇಳಿದ್ದಾರೆ.

ತುಮಕೂರು ಜಿಲ್ಲೆಯ ರೈತರ ಸೇವೆ ಮಾಡಲು ನನಗೆ ಅವಕಾಶ ಸಿಕ್ಕಿರುವುದಕ್ಕೆ ಸಹಕಾರಿಗಳು ಹಾಗೂ ರೈತರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಡಿಸಿಸಿ ಬ್ಯಾಂಕ್ 14 ಸ್ಥಾನಗಳಲ್ಲಿ 8 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆಯಿತು. ಉಳಿದ 6 ಸ್ಥಾನಗಳಿಗೆ ಚುನಾವಣೆ ನಡೆದು ನಿರ್ದೇಶಕರುಗಳು ಆಯ್ಕೆಯಾದರು ಎಂದ ಅವರು, ಚುನಾವಣೆಯಲ್ಲಿ ಸೋಲು-ಗೆಲುವು ಸಾಮಾನ್ಯ ಎಂದರು.

ರಾಜ್ಯದಲ್ಲಿ 21 ಡಿಸಿಸಿ ಬ್ಯಾಂಕ್‌ಗಳು ಇವೆ. ಇದರಲ್ಲಿ ತುಮಕೂರು ಬ್ಯಾಂಕ್ ಕೂಡ ಒಂದು. ರೈತಾಪಿ ಕುಟುಂಬಗಳಿಗೆ ಸಾಲ ಸೌಲಭ್ಯ ಒದಗಿಸುವುದೇ 21 ಬ್ಯಾಂಕ್‌ಗಳ ಉದ್ದೇಶ. ರೈತರಿಗೆ ನೀಡುವ ಸಾಲದ ಬಡ್ಡಿಯನ್ನು ಸರ್ಕಾರ ಶೇ. 6 ರಷ್ಟು ಕೊಡುತ್ತಿದೆ. ಇದರಿಂದ ಬ್ಯಾಂಕ್‌ಗೆ ನಷ್ಟ ಆಗುತ್ತದೆ ಎಂಬುದು ಗೊತ್ತಿದ್ದರೂ ಕೂಡ ರೈತರ ಹಿತಕಾಯುವ ದೃಷ್ಠಿಯಿಂದ ಸಾಲ ಸೌಲಭ್ಯ ಕೊಡಲಾಗುತ್ತಿದೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಮಾರ್ಚ್ ಅಂತ್ಯದವರೆಗೆ 800 ಕೋಟಿ ರೈತರಿಗೆ ಸಾಲ ವಿತರಿಸಲಾಗಿದೆ. ಕೃಷಿಯೇತರ ಸಾಲ 1130 ಕೋಟಿ ನೀಡಲಾಗಿದೆ. ರೈತರಿಗೆ ವಿತರಿಸುವ ಸಾಲದ ಬಡ್ಡಿಯಲ್ಲಿ ಆಗುವ ನಷ್ಟವನ್ನು ಕೃಷಿಯೇತರ ಸಾಲದಿಂದ ಬರುವ ಬಡ್ಡಿಯಿಂದ ಸರಿದೂಗಿ ಸಲಾಗುತ್ತದೆ. ಸದ್ಯ ಬ್ಯಾಂಕ್ ಆರ್ಥಿಕವಾಗಿ ಸದೃಢವಾಗಿದೆ. ಕಳೆದ ವರ್ಷ ಬ್ಯಾಂಕ್ ಎನ್‌ಪಿ ಶೇ. 3.81 ರಷ್ಟಿತ್ತು. ಇದನ್ನು 2024-25 ರಲ್ಲಿ 2.90ಕ್ಕೆ ತರಲಾಗಿದೆ. ಮುಂದೆ ಎನ್‌.ಪಿ.ಯನ್ನು ಮತ್ತಷ್ಟು ಕಡಿಮೆ ಮಾಡಲು ಪ್ರಯತ್ನಿಸಲಾಗುವುದು ಎಂದರು.

ಜಿಲ್ಲೆಯಲ್ಲಿ ಈಗಾಗಲೇ ಡಿಸಿಸಿ ಬ್ಯಾಂಕ್‌ 45 ಶಾಖೆಗಳನ್ನು ಹೊಂದಿದ್ದು, ಅ. 31 ರಂದು ಪಾವಗಡ ತಾಲ್ಲೂಕು ತಿರುಮಣಿಯಲ್ಲಿ 46ನೇ ಶಾಖೆಯನ್ನು ಆರಂಭಿಸಲಾಗುತ್ತಿದೆ. ಹಾಗೆಯೇ ತುರುವೇಕೆರೆ ತಾಲ್ಲೂಕು ದಬ್ಬೇಘಟ್ಟದಲ್ಲಿ ಶಾಖೆ ತೆರೆಯುವಂತೆಯೂ ಬೇಡಿಕೆ ಬಂದಿದೆ. ಅದೇ ರೀತಿಯ ಅಮೃತೂರಿನಲ್ಲಿ ಶಾಖೆ ಆರಂಭಿಸುವಂತೆ ಮನವಿಗಳು ಬರುತ್ತಿವೆ. ಈ ಕುರಿತು ಪರಿಶೀಲಿಸಲಾಗುವುದು. ಸಹಕಾರಿ ಆಂದೋಲನ ಜನರ ಆಂದೋಲನವಾಗಬೇಕು. ಈ ನಿಟ್ಟಿನಲ್ಲಿ ಸಹಕಾರಿ ಸಂಸ್ಥೆಗಳಲ್ಲಿ ಆಗುತ್ತಿರುವ ಲೋಪಗಳನ್ನು ಸರಿಪಡಿಸಲು ಕ್ರಮ ಕೈಗೊಳ್ಳಲಾಗಿದೆ. ಸಹಕಾರಿ ಸಂಸ್ಥೆಗಳ ಆಡಳಿತ ಮಂಡಳಿಯಲ್ಲಿರುವ ಸದಸ್ಯರ ಆಸ್ತಿ ವಿವರವನ್ನು ಚುನಾವಣೆ ಸಮಯದಲ್ಲಿ ಅಫಿಡವಿಟ್ ಮೂಲಕ ಸಲ್ಲಿಸುವಂತೆ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಇದು ಇಡೀ ರಾಜ್ಯಕ್ಕೆ ಅನ್ವಯವಾಗಲಿದೆ ಎಂದರು.

ಗ್ರಾಮ ಪಂಚಾಯ್ತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ನಿಗದಿಪಡಿಸುವ ಮಾದರಿಯಲ್ಲೇ ಗ್ರಾಮೀಣ ಪ್ರದೇಶದ ವ್ಯವಸಾಯೋತ್ಪನ್ನ ಸಹಕಾರ ಸಂಘ ಹಾಗೂ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೂ ಮೀಸಲಾತಿ ತರುವ ಉದ್ದೇಶ ಹೊಂದಲಾಗಿದೆ. ಸಹಕಾರಿ ಸಂಸ್ಥೆಗಳಲ್ಲಿ ಲೆಕ್ಕಪರಿಶೋಧನೆಯನ್ನು ಚಾರ್ಟೆಡ್ ಅಕೌಂಟೆಂಟ್‌ಗಳು ಮಾಡುತ್ತಿದ್ದಾರೆ. ಆದರೆ ಸಹಕಾರಿ ಸಂಸ್ಥೆಗಳಲ್ಲಿ ಆಗುತ್ತಿರುವ ಲೋಪಗಳನ್ನು ಪತ್ತೆ ಹಚ್ಚುವಲ್ಲಿ ಸಿಎಗಳು ವಿಫಲರಾಗಿರುವ ಹಿನ್ನೆಲೆಯಲ್ಲಿ 1 ವರ್ಷ ಇಲಾಖೆಯ ಅಧಿಕಾರಿಗಳು ಮತ್ತು 2 ವರ್ಷ ಸಿ.ಎ.ಗಳು ಲೆಕ್ಕಪರಿಶೋಧನೆ ಮಾಡಬೇಕು ಎಂಬುದು ನಮ್ಮ ಆಶಯವಾಗಿದೆ ಎಂದು  ಹೇಳಿದರು.

Related Posts

Leave a Reply

Your email address will not be published. Required fields are marked *