ಭಾರತೀಯ ನೌಕಾಪಡೆಗೆ ಸಂಬಂಧಿಸಿದ ರಹಸ್ಯ ಮಾಹಿತಿಗಳನ್ನು ಪಾಕಿಸ್ತಾನಕ್ಕೆ ರವಾನಿಸಿದ ಪ್ರಕರಣ ಸಂಬಂಧ ಮಲ್ಪೆ ಪೊಲೀಸರು ಮೂರನೇ ಆರೋಪಿಯನ್ನು ಬಂಧಿಸಿದ್ದಾರೆ. ಗುಜರಾತ್ನ ಆನಂದ ತಾಲೂಕಿನ ಕೈಲಾಸ್‌ನಗರಿಯ ನಿವಾಸಿ ಹಿರೇಂದ್ರ (34) ಬಂಧಿತ.
ಪ್ರಕರಣದಲ್ಲಿ ಈ ಹಿಂದೆ ಬಂಧಿತರಾಗಿರುವ ಮಲ್ಪೆಯಲ್ಲಿರುವ ಕೊಚ್ಚಿನ್ ಶಿಪ್‌ಯಾರ್ಡ್ ಗುತ್ತಿಗೆ ನೌಕರರಾದ ರೋಹಿತ್ ಮತ್ತು ಸಂತ್ರಿ ಎಂಬವರಿಗೆ ಹಿರೇಂದ್ರ ಸಿಮ್ ಒದಗಿಸಿದ್ದು, ಆ ಮೂಲಕ ಅವರಿಬ್ಬರು ಪಾಕಿಸ್ತಾನದವರಿಗೆ ಹಡಗುಗಳ ಚಲನ ವಲನಗಳ ಮಾಹಿತಿ ನೀಡುತ್ತಿದ್ದರು.
ಹಿರೇಂದ್ರ ಹಣ ಪಡೆದು ರೋಹಿತ್ ಹಾಗೂ ಸಂತ್ರಿಗೆ ಮೊಬೈಲ್ ಸಿಮ್ ಕಾರ್ಡ್‌ಗಳನ್ನು ಒದಗಿಸಿದ್ದ. ಆ ಸಿಮ್‌ಗಳ ಮೂಲಕ ಇಬ್ಬರೂ ಪಾಕಿಸ್ತಾನದಲ್ಲಿರುವ ವ್ಯಕ್ತಿಗಳಿಗೆ ಭಾರತೀಯ ನೌಕಾಪಡೆಗೆ ಸಂಬಂಧಿಸಿದ ಗೌಪ್ಯ ಮಾಹಿತಿಗಳನ್ನು ರವಾನಿಸುತ್ತಿದ್ದರು ಎಂಬುದು ತನಿಖೆಯಲ್ಲಿ ಗೊತ್ತಾಗಿದೆ. ಹಡಗುಗಳ ಸಂಖ್ಯೆ, ಚಲನವಲನ ಹಾಗೂ ಇತರೆ ರಹಸ್ಯ ವಿವರಗಳನ್ನು ವಾಟ್ಸ್‌ಆ್ಯಪ್ ಮೂಲಕ ಕಳುಹಿಸಲಾಗುತ್ತಿತ್ತು. ರೋಹಿತ್ ಮತ್ತು ಸಂತ್ರಿ ಅವರ ಚಟುವಟಿಕೆಗಳು ಸಂಶಯಾಸ್ಪದವಾಗಿದ್ದ ಹಿನ್ನೆಲೆ ಶಿಪ್ ಯಾರ್ಡ್ ಅಧಿಕಾರಿಗಳು ಮಲ್ಪೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಇಬ್ಬರನ್ನು ಬಂಧಿಸಿ ವಿಚಾರಣೆ ನಡೆಸಿದ್ದರು.
ಬಂಧಿತ ಆರೋಪಿಗಳಾದ ರೋಹಿತ್ ಮತ್ತು ಸಂತ್ರಿ ‘ಸುಷ್ಮಾ ಮೆರಿನ್ ಪ್ರೈವೇಟ್ ಲಿಮಿಟೆಡ್’ ಮೂಲಕ ಗುತ್ತಿಗೆ ಆಧಾರದಲ್ಲಿ ಕೊಚ್ಚಿನ್ ಶಿಪ್ ಯಾರ್ಡ್‌ನಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು. ಒಂದೂವರೆ ವರ್ಷಗಳಿಂದ ಹಡಗುಗಳಿಗೆ ಸಂಬಂಧಿಸಿದ ಗೋಪ್ಯ ಮಾಹಿತಿ, ರಹಸ್ಯ ತಾಂತ್ರಿಕ ಮಾಹಿತಿಗಳನ್ನು ವಾಟ್ಸ್‌ಆ್ಯಪ್ ಮೂಲಕ ಪಾಕಿಸ್ತಾನದಲ್ಲಿ ಸಂಪರ್ಕದಲ್ಲಿದ್ದವರಿಗೆ ಕಳುಹಿಸುತ್ತಿದ್ದರು ಎನ್ನಲಾಗಿದೆ.
ಈಗ ಹಿರೇಂದ್ರನನ್ನು ವಶಕ್ಕೆ ಪಡೆದು ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಪ್ರಕರಣದ ಜಾಲ ರಾಜ್ಯಾದ್ಯಂತ ಹಾಗೂ ವಿದೇಶ ಸಂಪರ್ಕ ಹೊಂದಿರುವುದರಿಂದ ಮುಂದಿನ ದಿನಗಳಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆಗಳು ತನಿಖೆ ನಡೆಸುವ ಸಾಧ್ಯತೆ ಇದೆ.


