ಹನುಮ ಜನಿಸಿದ ಸ್ಥಳ ಅಂಜನಾದ್ರಿಗೆ ಮಾರ್ಚ್‌ನಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಲಿದ್ದಾರೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ. ಮೋಹನ್ ಭಾಗವತ ಸೇರಿದಂತೆ ಬಿಜೆಪಿಯ ವರಿಷ್ಠರು ಭೇಟಿ ನೀಡಲಿದ್ದು ಅಯೋಧ್ಯೆಯಂತೆ ಅಂಜನಾದ್ರಿ ಅಭಿವೃದ್ಧಿಗೆ ಮಾಸ್ಟರ್ ಪ್ಲ್ಯಾನ್ ಮಾಡಿದ್ದು, ಭೇಟಿಯ ವೇಳೆ ಬಹಿರಂಗಗೊಳ್ಳುವ ಸಾಧ್ಯತೆ ಇದೆ.
ಅಂಜನಾದ್ರಿ ಭೇಟಿ ಬಳಿಕ ಬೃಹತ್ ಸಮಾವೇಶ ನಡೆಯುವ ಬಗ್ಗೆ ರೂಪುರೇಷೆ ಸಿದ್ಧಗೊಳ್ಳುತ್ತಿದ್ದು ದಿನಾಂಕ ಅಂತಿಮಗೊಳ್ಳಬೇಕಿದೆ. ಪ್ರವಾಸದಲ್ಲಿ ಗಂಗಾವತಿ ಸುತ್ತಮುತ್ತಲಿನ ಯಾವುದಾದರೂ ಸರಕಾರಿ ಶಾಲೆ ಇಲ್ಲವೇ ಕಾಲೇಜು ವಿದ್ಯಾರ್ಥಿಗಳೊಂದಿಗೆ ಪ್ರಧಾನಿ ಸಂವಾದ ನಡೆಸುವ ಕುರಿತು ಯೋಜಿಸಲಾಗುತ್ತಿದೆ.
ಈ ಕಾರ್ಯಕ್ರಮದ ಬಳಿಕ ಹೊಸಪೇಟೆ-ಕಮಲಾಪುರ ಬಳಿ ಇರುವ ಪ್ರಾಣಿ ಸಂಗ್ರಹಾಲಯಕ್ಕೆ ಪ್ರಧಾನಿ ಮೋದಿ ಮತ್ತು ತಂಡ ಭೇಟಿ ನೀಡಲಿದೆ. ಆನಂತರ ಬಾದಾಮಿಗೆ ತೆರಳುವ ಯೋಚನೆ ಇದ್ದು ಬಾದಾಮಿ ಪ್ರವಾಸ ಇನ್ನೂ ಅಂತಿಮಗೊಂಡಿಲ್ಲ ಎನ್ನಲಾಗಿದೆ.
ಈ ಭಾಗದ ಬಹುಜನರ ಹಲವು ವರ್ಷಗಳ ಕನಸು ಅಯೋಧ್ಯೆ ಮತ್ತು ಅಂಜನಾದ್ರಿ ನಡುವೆ ರೈಲು ಸಂಪರ್ಕ ಕಲ್ಪಿಸಬೇಕು ಎನ್ನುವುದು. ಪ್ರಧಾನಿಯ ಅಂಜನಾದ್ರಿ ಪ್ರವಾಸದ ವೇಳೆ 1,350 ಕೋಟಿ ರೂಪಾಯಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ಸಿದ್ಧತೆ ನಡೆದಿದ್ದು, ಇದರಲ್ಲಿ ಅಯೋಧ್ಯೆಯ ರೈಲು ಮಾರ್ಗಕ್ಕೂ ಆದ್ಯತೆ ನೀಡಲಿ ಎಂಬುದು ಸ್ಥಳೀಯರ ಆಗ್ರಹವಾಗಿದೆ.


